ಮಂಗಳೂರು(ನ.07): ಅಂತಾರಾಜ್ಯ ಗಾಂಜಾ ಸಾಗಾಟದ ಜಾಲವನ್ನು ಬೇಧಿಸಿರುವ ಮಂಗಳೂರು ಪೊಲೀಸರು ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿ ಗಾಂಜಾ ಸಮೇತ ಸೊತ್ತುಗಳನ್ನು ಸ್ವಾಧೀನಪಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಗಾಂಜಾ ಮಾರಾಟ ಮಾತ್ರವಲ್ಲ ಪೂರೈಕೆ ಹಾಗೂ ಖರೀದಿ ಜಾಲವನ್ನು ಬೇಧಿಸಿರುವುದು ಇದೇ ಮೊದಲು ಎಂದು ನಗರ ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌.ಹರ್ಷ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಅಬೂಬಕ್ಕರ್‌ ಸಮದ್‌ ಯಾನೆ ಸಮದ್‌(24) ಧರ್ಮನಗರ ಮಂಜೇಶ್ವರ, ಮಹಮ್ಮದ್‌ ಅಶ್ರಫ್‌ ಯಾನೆ ಅಶ್ರಫ್‌(30) ವರ್ಕಾಡಿ ಮಂಜೇಶ್ವರ, ಮಹಮ್ಮದ್‌ ಅಫ್ರಿದ್‌(22) ಕಡಂಬಾರು, ಮಂಜೇಶ್ವರ ಹಾಗೂ ಮಹಮ್ಮದ್‌ ಅರ್ಷದ್‌(18) ಕಡಂಬಾರು, ಮಂಜೇಶ್ವರ ಬಂಧಿತರು. ಇವರಿಂದ 2 ಲಕ್ಷ ರು. ಮೌಲ್ಯದ 10 ಕೇಜಿ ಗಾಂಜಾ, 2.50 ಲಕ್ಷ ರು. ಮೌಲ್ಯದ ಹುಂಡೈ ಐ-20 ಕಾರು, 50 ಸಾವಿರ ರು. ಮೌಲ್ಯದ ಎಕ್ಸಿಸ್‌ ಸ್ಕೂಟರ್‌ ಮತ್ತು 3 ಮೊಬೈಲ್‌ಗಳನ್ನು ವಶಪಡಿಸಲಾಗಿದೆ. ವಶಪಡಿಸಿದ ಸೊತ್ತುಗಳ ಒಟ್ಟು ಮೌಲ್ಯ 5 ಲಕ್ಷ ರು. ಎಂದು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಗಾಂಜಾ ಸೇವನೆಗೆ ಒಳಗಾದವರನ್ನು ವ್ಯಸನಮುಕ್ತಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು. ಇದಲ್ಲದೆ, ಗಾಂಜಾ ಸಾಗಾಟ ಹಾಗೂ ಸೇವನೆ ಚಟುವಟಿಕೆಗೆ ನೆರವು ನೀಡಿದ ಸುಮಾರು 20ಕ್ಕೂ ಅಧಿಕ ಮಂದಿಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಗಾಂಜಾ ಉತ್ಪಾದನೆ, ಖರೀದಿ, ಪೂರೈಕೆ ಹಾಗೂ ಮಾರಾಟ ಕುರಿತು ಸಮಗ್ರ ಮಾಹಿತಿ ಲಭಿಸಿದ್ದು, ಇದನ್ನು ಬೇರುಸಹಿತ ಕಿತ್ತೊಗೆಯಲು ಇಲಾಖೆ ಶ್ರಮಿಸಲಿದೆ. ಮುಂಬೈನಿಂದ ಕೇರಳವರೆಗೆ ಈ ಜಾಲ ಸಕ್ರಿಯವಾಗಿರುವುದು ತನಿಖೆಯಿಂದ ದೃಢಪಟ್ಟಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗೆ ಪೊಲೀಸ್‌ ಕಸ್ಟಡಿ ಕೋರಲಾಗುವುದು ಎಂದಿದ್ದಾರೆ.

ಅಣಕು ಕಾರ್ಯಾಚರಣೆ

ಆಂತರಿಕ ಭದ್ರತೆಯನ್ನು ಒರೆಗೆ ಹಚ್ಚುವ ಸಲುವಾಗಿ ಪೊಲೀಸ್‌ ಇಲಾಖೆ, ನೌಕಾದಳ, ಕೋಸ್ಟ್‌ಗಾರ್ಡ್‌ ಹಾಗೂ ಕರಾವಳಿ ಕಾವಲು ಪೊಲೀಸ್‌ ಜಂಟಿಯಾಗಿ ಅಣಕು ಭದ್ರತಾ ಕಾರ್ಯಾಚರಣೆ ಬುಧವಾರ ಮತ್ತು ಗುರುವಾರ ಕೈಗೊಳ್ಳಲಾಗುತ್ತಿದೆ. ಆದ್ದರಿಂದ ಸಾರ್ವಜನಿಕರು ಆತಂಕ ಪಡದೆ ಕಾರ್ಯಾಚರಣೆ ಸಹಕಾರ ನೀಡಬೇಕು. ಭದ್ರತೆಗೆ ಎದುರಾಗಬಹುದಾದ ಅಪಾಯವನ್ನು ಎದುರಿಸುವ ನಿಟ್ಟಿನಲ್ಲಿ ಭದ್ರತಾಪಡೆಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಲು ಈ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಕಮಿಷನರ್‌ ಹೇಳಿದ್ದಾರೆ.

ಆನೇಕಲ್; ಮತ್ತಿನಲ್ಲಿದ್ದ ವಿದ್ಯಾರ್ಥಿನಿಯ ರಂಪಾಟದ ವಿಡಿಯೋ..ಅಯ್ಯಯ್ಯಪ್ಪಾ