'ಓಟ್ ಬೇಕಾ, ರಸ್ತೆ ಸರಿ ಮಾಡಿ ಬನ್ನಿ', ಕೆಲ್ಸ ಮಾಡ್ಸೋಕೆ ಬ್ಯಾನರ್ ಹಾಕಿದ್ರು ಜನ..!
ಚುನಾವಣೆ ಹತ್ತಿರ ಬಂದಾಗ ಮತ ಕೇಳಿ ಬರುವ ಅಭ್ಯರ್ಥಿಗಳಿಗೆ ಮಂಗಳೂರಿನ ಜನ ಅಚ್ಚರಿಯ ಉತ್ತರ ಕೊಟ್ಟಿದ್ದಾರೆ. ಓಟ್ ಬೇಕಾ, ರಸ್ತೆ ಸರಿ ಮಾಡಿ ಬನ್ನಿ ಎಂದು ಪೋಸ್ಟರ್ ಮಾಡಿಸಿ ಸಾರ್ವಜನಿಕ ಸ್ಥಳದಲ್ಲಿ ತೂಗು ಬಿಟ್ಟಿದ್ದಾರೆ. ರಸ್ತೆ ಸರಿ ಮಾಡ್ಸಲ್ವಾ, ಓಟ್ ಕೂಡ ಇಲ್ಲ ಎಂಬಂತಿದೆ ಸಾರ್ವಜನಿಕರ ಸಂದೇಶ..! ಅಭ್ಯರ್ಥಿಗಳು ಎಚ್ಚೆತ್ತುಕೊಳ್ತಾರೋ ಗೊತ್ತಿಲ್ಲ, ಮತದಾರರು ಎಚ್ಚೆತ್ತುಕೊಂಡಿರೋದು ಸ್ಪಷ್ಟ..!
ಮಂಗಳೂರು(ಅ.22): ಮಹಾನಗರ ಪಾಲಿಕೆ ಚುನಾವಣೆ ಹತ್ತಿರ ಬರುತ್ತಿರುವಾಗ ಮೇರಿಹಿಲ್- ಪದವಿನಂಗಡಿ ಪರಿಸರದ ನಿವಾಸಿಗಳು ನೋಟಾ ಅಭಿಯಾನಕ್ಕೆ ಮುಂದಾಗಿದ್ದಾರೆ. ಮೇರಿಹಿಲ್‌ನಿಂದ ಪದವಿನಂಗಡಿ ಸಂಪರ್ಕಿಸುವ ಡಾಂಬರು ಒಳರಸ್ತೆ ಕಳೆದ 22 ವರ್ಷಗಳಿಂದ ದುರಸ್ತಿಯಾಗದಿರುವುದನ್ನು ಖಂಡಿಸಿ ಅಲ್ಲಿನ ಕೆಲವು ನಿವಾಸಿಗಳು ಜನರ ಗಮನ ಸೆಳೆಯಲು ಬ್ಯಾನರ್‌ಗಳನ್ನೂ ಹಾಕಿದ್ದಾರೆ.
‘‘ಓಟು ಕೇಳಲು ಮನೆ ಮನೆಗೆ ಬರುವ ಕಾರ್ಯಕರ್ತರೇ, ಅಭ್ಯರ್ಥಿಗಳೇ, ಮೊದಲು ಮೇರಿಹಿಲ್ ಮೌಂಟ್ ಕಾರ್ಮೆಲ್ ಶಾಲೆಯಿಂದ ವೆಂಕಟರಮಣ ದೇವಾಲಯದವರೆಗಿನ ರಸ್ತೆ ಸರಿಪಡಿಸಿ ಬನ್ನಿ. ನಮ್ಮ ಅಮೂಲ್ಯವಾದ ಮತವನ್ನು ನಿಮಗೆ ಸರ್ಕಾರಿ ಸೌಲಭ್ಯ ದೊರಕಿಸಿಕೊಡಲು ಕೊಡುತ್ತಿಲ್ಲ. ಓಟು ಬೇಕಾದರೆ ಅಭಿವೃದ್ಧಿ ತೋರಿಸಿ. ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿ ಬರುವಾಗ ಯಾವ ಹೆದರಿಕೆ, ಶ್ರದ್ಧೆ- ಭಕ್ತಿಯಿಂದ ರಸ್ತೆ ಡಾಂಬರೀಕರಣ ಮಾಡುತ್ತೀರೋ ಅದೇ ನಿಷ್ಠೆಯನ್ನು ನಿಮಗೆ ಓಟು ಹಾಕುವ ಪ್ರಜೆಗಳಿಗೆ ಮೊದಲು ತೋರಿಸಿ. ಇಲ್ಲವಾದರೆ ನಿಮಗೆ ನಮ್ಮ ಓಟು ಖಂಡಿತ ಸಿಗುವುದಿಲ್ಲ’’ ಎಂಬ ಒಕ್ಕಣೆಯುಳ್ಳ ಬ್ಯಾನರ್ ಈಗ ಅಲ್ಲಲ್ಲಿ ಗಮನ ಸೆಳೆಯುತ್ತಿದೆ.
ಬೌಲರ್'ಗಳ ಬೆಂಡೆತ್ತಿದ ಮಂಗಳೂರು ಶಾಸಕ ವೇದವ್ಯಾಸ್ ಕಾಮತ್!
ಈ ಕುರಿತು ಮಾತನಾಡಿದ ಸ್ಥಳೀಯರಾದ ಶ್ರೀಕಾಂತ್ ಭಟ್, ಈ ರಸ್ತೆ 22 ವರ್ಷ ಆಯ್ತು ಡಾಂಬರು ಹಾಕಿ. ಅದರ ನಂತರ ಒಂದೇ ಒಂದು ಬಾರಿಯೂ ದುರಸ್ತಿಯಾಗಿಲ್ಲ. ಶಾಲೆ ಮಕ್ಕಳು, ನೂರಾರು ವಾಹನಗಳು ಓಡಾಡುವ ರಸ್ತೆಯಲ್ಲಿ ಹೊಂಡಗಳೇ ತುಂಬಿವೆ. ಈ ರಸ್ತೆ ವ್ಯಾಪ್ತಿಗೆ ಮೂವರು ಕಾರ್ಪೊರೇಟರ್‌ಗಳು ಬರುತ್ತಾರೆ. ಯಾರೂ ರಸ್ತೆ ರಿಪೇರಿ ಮಾಡಿಲ್ಲ. ಇದನ್ನು ವಿರೋಧಿಸಿ ಬ್ಯಾನರುಗಳನ್ನು ಹಾಕಿದ್ದೇವೆ ಎಂದಿದ್ದಾರೆ.
ರಸ್ತೆ ಅಭಿವೃದ್ಧಿ ಮಾಡದವರಿಗೆ ಓಟು ಹಾಕುವುದು ಬಿಟ್ಟು ನೋಟಾ ಮತ ಚಲಾಯಿಸುವಂತೆ ಜನರಿಗೆ ಮನೆ ಮನೆಗೆ ಹೋಗಿ ಮನವಿ ಮಾಡಲಿದ್ದೇವೆ. ಕರಪತ್ರಗಳನ್ನೂ ಹಂಚಲಿದ್ದೇವೆ ಎಂದು ಅವರು ಹೇಳಿದ್ದಾರೆ.
ಮುಗಿದಿಲ್ಲ ಮಳೆ ಅಬ್ಬರ: ಅ. 25ರವರೆಗೆ ಈ ಜಿಲ್ಲೆಗಳಲ್ಲಿ ರೆಡ್ ಅಲರ್ಟ್