ಮಂಗಳೂರು(ಅ.24): ಕಾಸರಗೋಡಿನ ಗಡಿನಾಡ ಕನ್ನಡ ಮಾಧ್ಯಮ ಶಾಲೆಗಳಿಗೆ ಮಲಯಾಳಿ ಭಾಷಿಕ ಶಿಕ್ಷಕರ ನೇಮಕಗೊಳಿಸುವ ಮೂಲಕ ವಿವಾದಕ್ಕೆ ನಾಂದಿ ಹಾಡಿದ್ದ ಕೇರಳ ಲೋಕಸೇವಾ ಆಯೋಗ(ಪಿಎಸ್‌ಸಿ) ಈಗ ಕ್ಲರ್ಕ್ ಹುದ್ದೆಯ ಲಿಖಿತ ಪರೀಕ್ಷೆಯಲ್ಲೂ ಕನ್ನಡಿಗರಿಗೆ ವಂಚನೆ ಎಸಗಿದೆ. ಇದರೊಂದಿಗೆ ಕನ್ನಡಿಗರ ಮೇಲೆ ತನ್ನ ಗದಾಪ್ರಹಾರ ಮುಂದುವರಿಸಿದೆ.

ಪಿಎಸ್‌ಇ ಮಂಗಳವಾರ ಎಲ್‌ಡಿ(ಲೋವರ್‌ ಡಿಪಾರ್ಟ್‌ಮೆಂಟ್‌) ಕ್ಲರ್ಕ್ ಹುದ್ದೆಗೆ ನಡೆಸಿದ ಪರೀಕ್ಷೆಯಲ್ಲಿ ಗಡಿನಾಡ ಕನ್ನಡಿಗ ಅಭ್ಯರ್ಥಿಗಳಿಗೆ ಕನ್ನಡ ಭಾಷೆ ವಿಷಯದಲ್ಲಿ ದಿಢೀರನೆ ಅಂಕ ಕಡಿತಗೊಳಿಸುವ ಮೂಲಕ, ಸರ್ಕಾರಿ ಹುದ್ದೆಗಳಿಂದ ಕನ್ನಡಿಗರನ್ನು ದೂರ ಇರಿಸುವ ಕುತಂತ್ರ ನಡೆಸಿದೆ.

ಏಕಾಏಕಿ 20 ಅಂಕ ಕಡಿತ:

ಎಲ್‌ಡಿ ಕ್ಲರ್ಕ್ ಹುದ್ದೆಗೆ 2016ರಲ್ಲಿ ಪಿಎಸ್‌ಇ ಅಧಿಸೂಚನೆ ಹೊರಡಿಸಿತ್ತು. ಇದರ ಪರೀಕ್ಷೆಯನ್ನು ಮಂಗಳವಾರ ನಡೆಸಿದ್ದು, ಅಧಿಸೂಚನೆ ಪ್ರಕಾರ ಒಟ್ಟು 100 ಅಂಕಗಳಲ್ಲಿ ತಲಾ 40 ಅಂಕ ಕನ್ನಡ ಮತ್ತು ಮಲಯಾಳಂ ಭಾಷೆಗೆ, ಉಳಿದ 20 ಅಂಕ ಆಂಗ್ಲ ಭಾಷೆಗೆ ಎಂದು ತಿಳಿಸಲಾಗಿತ್ತು. 2014ರಲ್ಲಿ ವಿವಿಧ ಹುದ್ದೆಗಳಿಗೆ ನೇಮಕಗೊಳಿಸಲು ಹೊರಡಿಸಿದ ಅಧಿಸೂಚನೆ ಹಾಗೂ ಲಿಖಿತ ಪರೀಕ್ಷೆಯಲ್ಲೂ ಇದೇ ಮಾನದಂಡ ಅನ್ವಯಿಸಲಾಗಿತ್ತು. ಗಡಿನಾಡು ಕಾಸರಗೋಡಿಗೆ ಸಂಬಂಧಿಸಿ ಕನ್ನಡ ಮತ್ತು ಮಲಯಾಳಿ ಭಾಷೆಗೆ ಪರೀಕ್ಷೆಯ ಅಂಕಗಳಲ್ಲಿ ಸಮಾನ ಪ್ರಾತಿನಿಧ್ಯ ನೀಡಲಾಗಿತ್ತು.

ದೈವಾರಾಧನೆಗೆ ಅವಹೇಳನ: ಆಯುಕ್ತರಿಗೆ ದೂರು

ಆದರೆ, ಅಧಿಸೂಚನೆಯಲ್ಲಿ ನಮೂದಿಸಿದ್ದರೂ ಈ ಬಾರಿ ಪರೀಕ್ಷೆ ನಡೆಸುವಾಗ ಕನ್ನಡಕ್ಕೆ 20 ಅಂಕವನ್ನು ದಿಢೀರನೆ ಕಡಿತಗೊಳಿಸಿರುವುದು ಅಭ್ಯರ್ಥಿಗಳ ಗಮನಕ್ಕೆ ಬಂದಿದೆ. ಕನ್ನಡದ ಬದಲು ಮಲಯಾಳಂ ವಿಷಯಕ್ಕೆ 20 ಅಂಕ ಅಧಿಕವಾಗಿ ಸೇರಿಸಲಾಗಿದೆ. ಅಂದರೆ ಕನ್ನಡಕ್ಕೆ ಕೇವಲ 20 ಅಂಕ ಹಾಗೂ ಮಲಯಾಳಂಗೆ 60 ಅಂಕ ಎಂದು ಏಕಾಏಕಿ ನಿಗದಿಪಡಿಸಿ ಪರೀಕ್ಷೆ ನಡೆಸಲಾಗಿದೆ.

ಪರೀಕ್ಷಾ ಕೇಂದ್ರವೂ ದೂರ:

ಪಿಎಸ್‌ಇ ಪರೀಕ್ಷೆಗೆ ಒಟ್ಟು 8 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ಶೇ.80ರಷ್ಟುಮಂದಿ ಗಡಿನಾಡ ಕನ್ನಡಿಗರೇ ಇದ್ದರು. ಅ.21ರಂದು ನಡೆದ ಉಪಚುನಾವಣೆ ನೆಪವೊಡ್ಡಿ ಮಂಜೇಶ್ವರದಲ್ಲಿ ಪರೀಕ್ಷಾ ಕೇಂದ್ರ ತೆರೆಯದಿರಲು ನಿರ್ಧರಿಸಿತ್ತು. 6 ಸಾವಿರ ಮಂದಿಗೆ ಕಣ್ಣೂರಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ್ದರೆ, ಕೇವಲ 2 ಸಾವಿರ ಮಂದಿಗೆ ಮಾತ್ರ ಕಾಸರಗೋಡಿನಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ಬೆಳಗ್ಗೆ 7.30ಕ್ಕೆ ಪರೀಕ್ಷೆ ನಿಗದಿಯಾಗಿದ್ದು, ಕಾಸರಗೋಡು ಜಿಲ್ಲೆಯಿಂದ ಸುಮಾರು 100 ಕಿ.ಮೀ.ಗಳಷ್ಟುದೂರದ ಕಣ್ಣೂರಿಗೆ ತೆರಳಿ ಪರೀಕ್ಷೆಗೆ ಹಾಜರಾದವರು ಕೇವಲ 300 ಮಂದಿ.

ಕನ್ನಡಿಗರಿಗೆ ವಂಚನೆ:

ಪಿಎಸ್‌ಇ ಲಿಖಿತ ಪರೀಕ್ಷೆಯಲ್ಲಿ ಕನ್ನಡ ಭಾಷೆಗೆ ಬರೇ 20 ಅಂಕ ಎಂದು ನಿಗದಿಪಡಿಸಿ ಮಲಯಾಳಂಗೆ 60 ಅಂಕ ಮಾಡಿರುವುದರಿಂದ ಕನ್ನಡಿಗ ಅಭ್ಯರ್ಥಿಗಳು ಸರ್ಕಾರಿ ಕೆಲಸದಿಂದ ವಂಚಿತಗೊಳ್ಳುವಂತಾಗಲಿದೆ. ನೇಮಕಾತಿ ವೇಳೆ ಕಟ್‌ ಆಫ್‌ ಅಂಕಗಳ ನಿರ್ಧರಿಸುವಾಗ ಮಲಯಾಳಿ ಅಭ್ಯರ್ಥಿಗಳಿಗೆ ನೆರವಾಗಲಿದ್ದು, ನಮಗೆ ಕಷ್ಟವಾಗಲಿದೆ. ಮಲಯಾಳಿ ಅಭ್ಯರ್ಥಿಗಳಿಗೆ ನೆರವಾಗಲೆಂಬ ದುರಾಲೋಚನೆಯಿಂದ ಈ ರೀತಿ ಮಾಡಲಾಗಿದೆ ಎಂದು ಕನ್ನಡದ ಅಭ್ಯರ್ಥಿಗಳು ಆರೋಪಿಸಿದ್ದಾರೆ. ಲಿಖಿತ ಪರೀಕ್ಷೆಯಲ್ಲಿ ಕ್ಲರ್ಕ್ ಹುದ್ದೆಗೆ ಬೇಕಾದ ಪ್ರಶ್ನೆಯನ್ನು ಕೇಳದೆ, ಕೇವಲ ಸಾಮಾನ್ಯ ಜ್ಞಾನದ ಕುರಿತ ಪ್ರಶ್ನೆಗಳನ್ನು ಕೇಳಲಾಗಿದೆ ಎಂದೂ ದೂರಿದ್ದಾರೆ.

ತಮಿಳು ಭಾಷೆಗಿಲ್ಲ ಕಡಿತ!

ಪಿಎಸ್‌ಇ ಕೇರಳ ಗಡಿನಾಡಿನಲ್ಲಿ ತಮಿಳು ಭಾಷೆಯಲ್ಲೂ ಲಿಖಿತ ಪರೀಕ್ಷೆ ನಡೆಸುತ್ತಿದೆ. ತಮಿಳು ಭಾಷಾ ವಿಷಯದಲ್ಲಿ ಅಂಕ ಕಡಿತಗೊಳಿಸಿಲ್ಲ. ಅದರಲ್ಲಿ 40 ಅಂಕ ತಮಿಳು ಭಾಷೆ ಪರೀಕ್ಷೆಗೆ ಮೀಸಲಿರಿಸಲಾಗಿದೆ. ಕೇರಳದ ಫಾಲ್ಘಾಟ್‌, ತಿರುವನಂತಪುರ ಹಾಗೂ ಇಡ್ಕಿದು ಜಿಲ್ಲೆಗಳಲ್ಲಿ ತಮಿಳರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಸರ್ಕಾರಿ ಇಲಾಖೆಗಳಿಗೆ ನೇಮಕಾತಿ ಪರೀಕ್ಷೆಯಲ್ಲಿ ತಮಿಳು ಭಾಷೆ ಅಂಕಗಳಲ್ಲಿ ಈ ರೀತಿ ತಾರತಮ್ಯ ಎಸಗಿಲ್ಲ ಎಂದು ಮೂಲಗಳು ತಿಳಿಸಿವೆ.

ಕನ್ನಡಿಗರನ್ನು ಕೇರಳದಲ್ಲಿ ಸರ್ಕಾರಿ ಉದ್ಯೋಗದಿಂದ ದೂರ ಇಡುವ ಪ್ರಯತ್ನದ ಫಲವಾಗಿ ಪಿಎಸ್‌ಇ ದಿಢೀರನೆ ಕನ್ನಡ ಭಾಷೆ ಪರೀಕ್ಷೆಗೆ ಅಂಕಗಳನ್ನು ಕಡಿತಗೊಳಿಸಿದೆ. ಈ ಹಿನ್ನೆನೆಲೆಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗಲಿದ್ದು, ಆದ್ದರಿಂದ ಮತ್ತೊಮ್ಮೆ 40 ಅಂಕ ಮಾನದಂಡದಲ್ಲೇ ಕನ್ನಡ ಭಾಷಾ ಪರೀಕ್ಷೆಯನ್ನು ನಡೆಸಬೇಕು ಎಂದು ನೊಂದ ಅಭ್ಯರ್ಥಿ ವಿಷ್ಣುಪ್ರಕಾಶ್‌ ಮುಳ್ಳೇರಿಯಾ ಹೇಳಿದ್ದಾರೆ.

ಮಂಗಳೂರು: ಶ್ರೀರಾಮ ಸೇನೆ ಸದಸ್ಯರಿಂದ ಆಟೋ ಚಾಲಕನ ಮೇಲೆ ತಲವಾರು ದಾಳಿ

ಪಿಎಸ್‌ಇ ನಡೆಸಿದ ಲಿಖಿತ ಪರೀಕ್ಷೆಯಲ್ಲಿ ಕನ್ನಡಿಗ ಅಭ್ಯರ್ಥಿಗಳಿಗೆ ಅನ್ಯಾಯ ಎಸಗಿರುವ ಕುರಿತು ಅ.25ರಂದು ಮಧ್ಯಾಹ್ನ 2.30ಕ್ಕೆ ಕಾಸರಗೋಡಿನಲ್ಲಿ ನೊಂದ ಕನ್ನಡಿಗ ಅಭ್ಯರ್ಥಿಗಳ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಮುಂದಿನ ಹೋರಾಟದ ರೂಪುರೇಷೆ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕಾಸರಗೋಡು ಕನ್ನಡ ಹೋರಾಟ ಸಮಿತಿ ಕಾರ್ಯದರ್ಶಿ ಭಾಸ್ಕರ ಕುಂಬಳೆ ಹೇಳಿದ್ದಾರೆ.

-ಆತ್ಮಭೂಷಣ್‌