‘ಹಳ್ಳಿ ಬದೆಗೆಲ್ಲಾ ಎಷ್ಟೋ ರೋಗಿಗಳ್ ಹಾಸ್ಪಿಟಲ್‌ಗೆ ಹೋಪುಕ್ ಆಯ್ದೆ ಹಾಂಗೆ ಸತ್ತ್ ಹೋತಿದ್ರ್. ನಂಗೆ ಮುಂದೆ ಡಾಕ್ಟ್ರ ಐಕ್ ಅಂದೇಳಿ ಭಾರೀ ಆಸಿ ಇತ್ತ್. ಯೋಗ ಮಾಡುದ್ರ್ ಒಟ್ಟಿಗ್ ನಾನ್ ಕಷ್ಟ ಪಟ್ ಡಾಕ್ಟ್ರ್ ಓದಿ ಹಳ್ಳಿಯಲ್ಲಿಪ್ಪು ರೋಗಿಗಳಿಗೆಲ್ಲಾ ಫ್ರೀಯಾಗಿ ಔಷಧಿ ಕೊಡ್ತೆ...’

- ಹೀಗೆ ಹೇಳುವ ಪುಟಾಣಿ ಧನ್ವಿ ಪೂಜಾರಿ ಸಾಧನೆ ಸಾಮಾನ್ಯದ್ದಲ್ಲ. ಮಲೇಷ್ಯಾದಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ಇಂಡಿಯನ್ ಬಟರ್‌ಫ್ಲೈ ಎಂಬ ಬಿರುದು ಗಳಿಸಿದ್ದಾಳೆ. ಬಹುಮುಖ ಪ್ರತಿಭೆ
ತ್ರಾಸಿಯ ಡಾನ್ ಬೋಸ್ಕೊ ಶಾಲೆಯಲ್ಲಿ 6 ನೇ ತರಗತಿಯಲ್ಲಿ ಕಲಿಯುತ್ತಿರುವ 11 ರ ಹರೆಯದ ಧನ್ವಿ ಬಹುಮುಖ ಪ್ರತಿಭೆ. ಸುಮಾರು 20 ಯೋಗಾಸನಗಳಲ್ಲಿ ಉತ್ಕೃಷ್ಟತೆ ಸಾಧಿಸಿದ್ದಾಳೆ.

ಚಾಕ್ ಪೀಸ್ ನಿಂದ ವರ್ಲ್ಡ್‌ಕಪ್ ಕಲಾಕೃತಿ: ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಗೆ ಕಾರ್ಕಳದ ಸುರೇಂದ್ರ

ಕಲಿಕೆಯಲ್ಲೂ ಮುಂದಿರುವುದರ ಜತೆಗೆ ನೃತ್ಯ ವೈವಿಧ್ಯಗಳಲ್ಲಿ ಕುಂದಾಪುರದ ಪ್ರವೀಣ್ ನೇತೃತ್ವದ ಮಿರಾಕಲ್ ಡಾನ್ಸ್ ಗ್ರೂಪ್‌ನಲ್ಲಿ ಪರಿಣತಿ ಪಡೆದಿದ್ದಾಳೆ. ನಟನಾ ಚಾತುರ್ಯ, ಯಕ್ಷಗಾನ, ಭರತನಾಟ್ಯ, ಸ್ಕೇಟಿಂಗ್, ಏಕಪಾತ್ರ ಅಭಿನಯ ಮುಂತಾದ ಕ್ಷೇತ್ರಗಳಲ್ಲಿ ಈಕೆಗೆ ಪ್ರಾವೀಣ್ಯತೆ ಇದೆ. ಧನ್ವಿ ಮರವಂತೆಯ ಚಂದ್ರಶೇಖರ ಪೂಜಾರಿ-ಜ್ಯೋತಿ ದಂಪತಿಯ ಪುತ್ರಿ ಈಕೆ. ಅಣ್ಣ ವೇದಾಂತ್ ಜತೆ ಜಗಳಾಡುತ್ತಾ ಡಾನ್ಸು, ಯೋಗ ಅಂದಾಗ ಮರುಳಾಗುತ್ತಾ ಇರುವ ಈ ಹುಡುಗಿ ಮಲೇಷ್ಯಾದ ಕೌಲಾಲಂಪುರದಲ್ಲಿ ಅಥ್ಲೆಟಿಕ್ ಯೋಗ ಚಾಂಪಿಯನ್‌ಶಿಪ್ ವಿಭಾಗದಲ್ಲಿ ಚಿನ್ನದ ಪದಕ ಮತ್ತು ಆರ್ಟಿಸ್ಟಿಕ್ ಯೋಗ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾಳೆ.

ದಿನನಿತ್ಯ ಬೆಳಗ್ಗೆ ಆರು ಗಂಟೆಯಿಂದ ಎಂಟು ಗಂಟೆಯವರೆಗೆ ಹಾಗೂ ರಾತ್ರಿ ಸಮಯ ಸಿಕ್ಕಲ್ಲಿ ಅಭ್ಯಾಸ ಮಾಡುತ್ತಿದ್ದೆ. ಮಲೇಷ್ಯಾ ಸ್ಪರ್ಧೆಯಲ್ಲಿ 7 ದೇಶಗಳು ಭಾಗವಹಿಸಿದ್ದವು. ಆರಂಭದಲ್ಲಿ ಕೊಂಚ ಭಯ ಇತ್ತು. ಗುರುವಿಲ್ಲದೆ ಯೋಗ ತರಬೇತಿ ನಡೆಸಿದ್ದು, ಮಲೇಷ್ಯಾಕ್ಕೆ ತೆರಳುವ ಮುನ್ನ ಸುಬ್ಬಯ್ಯ ದೇವಾಡಿಗ ಮಾರ್ಗದರ್ಶನ ನೀಡಿದರು. ಮಲೇಷ್ಯಾದಲ್ಲಿ ಎಲ್ಲರೂ ನನ್ನ ಬಳಿ ಸೆಲ್ಫಿ ಕೇಳಿದ್ದರು. ನಾನಲ್ಲಿ ಡ್ಯಾನ್ಸ್ ಮಾಡುತ್ತಿದ್ದಂತೆಯೇ ನನಗೆ ‘ಇಂಡಿಯನ್ ಬಟರ್ ಫ್ಲೈ’ ಹೆಸರಿಟ್ಟರು.

- ಧನ್ವಿ