ಬೆಳಗಾವಿ, [ಮೇ.24]: ಲೋಕಸಭಾ ಫಲಿತಾಂಶ ಬಳಿಕ ರಾಜೀನಾಮೆ ನೀಡುತ್ತೇನೆಂದು ಹೇಳಿರುವ ಕಾಂಗ್ರೆಸ್ ರೆಬೆಲ್ ಶಾಸಕ ರಮೇಶ್ ಜಾರಕಿಹೊಳಿ ಬಿಜೆಪಿ ಸೇರುವುದು ಖಚಿತವಾದಂತಿದೆ. 

ಇದಕ್ಕೆ ಪೂರಕವೆಂಬಂತೆ ಬಿಜೆಪಿ ಮುಖಂಡರ ಬ್ಯಾನರ್​ನಲ್ಲಿ ಕಾಂಗ್ರೆಸ್​​ ರೆಬೆಲ್​ ಶಾಸಕ ರಮೇಶ್​ ಜಾರಕಿಹೊಳಿ ಫೋಟೊ ಕಾಣಿಸಿಕೊಂಡಿದ್ದು, ಕಾಂಗ್ರೆಸ್ ತೊರೆಯುತ್ತಾರೆ ಎನ್ನುವುದಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ನೂತನ ಸಂಸದರಾಗಿ ಅಣ್ಣಸಾಹೇಬ್ ಜೊಲ್ಲೆ ಆಯ್ಕೆಯಾಗಿದ್ದು, ಅವರಿಗೆ ಅಭಿನಂದನೆ ಸಲ್ಲಿಸಲು ಸ್ಥಳೀಯ ಬಿಜೆಪಿ ಮುಖಂಡರು ನಿಪ್ಪಾಣಿ ಪಟ್ಟಣದಲ್ಲಿ ಬ್ಯಾನರ್​ ಹಾಕಿಸಿದ್ದಾರೆ. 

ಈ ಬ್ಯಾನರ್​ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇನ್ನಿತರ ಬಿಜೆಪಿ ಮುಖಂಡರ ಫೋಟೊ ಹಾಕಿಸಿದ್ದರು. 

ಈ ಫೋಟೊಗಳ ಜತೆ ರಮೇಶ್​ ಜಾರಕಿಹೊಳಿ ಫೋಟೊ ಕಾಣಿಸಿಕೊಂಡಿದ್ದು, ರಮೇಶ್​ ಜಾರಕಿಹೊಳಿ, ಅಣ್ಣಸಾಹೇಬ್ ಜೊಲ್ಲೆ ಪರ ಪರೋಕ್ಷವಾಗಿ ಕೆಲಸ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ. 

ಇದ್ರಿಂದ ಜಿಲ್ಲಾ ಕಾಂಗ್ರೆಸ್ ಮುಖಂಡರಿಗೆ ಹಾಗೂ ಪರಾಜಿತ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿಗೆ ಇರಿಸು ಮುರುಸಾಗಿದೆ. ಈ ಫೋಟೋ ರಮೇಶ್​ ಜಾರಕಿಹೊಳಿ ಕಾಂಗ್ರೆಸ್​ ಬಿಟ್ಟು ಬಿಜೆಪಿ ಸೇರುತ್ತಾರಾ  ಎನ್ನುವ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.