ಬೆಂಗಳೂರು(ಜ.30): ವಂಚನೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಯುವರಾಜ್‌ ಅಲಿಯಾಸ್‌ ಸ್ವಾಮಿ ಆಂಧ್ರಪ್ರದೇಶದಲ್ಲಿರುವ ಕಾಳಹಸ್ತಿ ದೇವಸ್ಥಾನ ಟ್ರಸ್ಟ್‌ನ ಮಾಜಿ ಅಧ್ಯಕ್ಷರೊಬ್ಬರಿಗೆ ಒಂದೂವರೆ ಕೋಟಿ ರು. ಪಂಗನಾಮ ಹಾಕಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಕಾಳಹಸ್ತಿ ದೇವಾಲಯ ಟ್ರಸ್ಟ್‌ನ ಮಾಜಿ ಅಧ್ಯಕ್ಷ ಆನಂದ ಕುಮಾರ್‌ ವಂಚನೆಗೊಳಗಾದವರು. ಈ ಸಂಬಂಧ ಹೈಗ್ರೌಂಡ್ಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದ್ದು, ಪ್ರಕರಣವನ್ನು ಸಿಸಿಬಿ ಪೊಲೀಸರಿಗೆ ವರ್ಗಾವಣೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಸಚಿವರ ಲೆಟರ್‌ ಹೆಡ್‌ ಬಳಕೆ ಮಾಡುತ್ತಿದ್ದ ಯುವರಾಜ್‌

ಯುವರಾಜ್‌ ಸ್ವಾಮಿ ಆಗಾಗ್ಗೆ ಆಂಧ್ರಪ್ರದೇಶದಲ್ಲಿರುವ ಕಾಳಹಸ್ತಿ ದೇವರ ದರ್ಶನಕ್ಕೆ ಹೋಗುತ್ತಿದ್ದ. ಈ ವೇಳೆ ಟ್ರಸ್ಟ್‌ನ ಮಾಜಿ ಅಧ್ಯಕ್ಷ ಆನಂದ್‌ ಕುಮಾರ್‌ ಪರಿಚಯವಾಗಿತ್ತು. ಈ ವೇಳೆ ಆರೋಪಿಯು ಆನಂದ್‌ ಅವರಿಗೆ ‘ನಿಮಗೆ ಕೇಂದ್ರದಲ್ಲಿ ರೇಷ್ಮೆ ಮಂಡಳಿ ಅಧ್ಯಕ್ಷ ಹುದ್ದೆ ಕೊಡಿಸುತ್ತೇನೆ’ ಎಂದು ಹೇಳಿದ್ದ. ಈತ ಹಲವು ರಾಷ್ಟ್ರೀಯ ನಾಯಕರೊಂದಿಗೆ ತೆಗೆಸಿಕೊಂಡಿದ್ದ ಫೋಟೋ ನೋಡಿ ಆನಂದ್‌ ಅವರು ಆರೋಪಿಯನ್ನು ನಂಬಿದ್ದರು. ಇದ್ದಕ್ಕಿದ್ದಂತೆ ಆನಂದ್‌ ಅವರಿಗೆ ಕರೆ ಮಾಡಿದ್ದ ಸ್ವಾಮಿ, ‘ಬೆಂಗಳೂರಿಗೆ ಬಂದು ಬಿಡಿ, ಇಲ್ಲಿ ಮುಖ್ಯವಾದ ಚರ್ಚೆಯಾಗಿದೆ. ನೀವು ಬಂದರೆ ಒಂದು ವಾರದಲ್ಲಿ ರೇಷ್ಮೆ ಮಂಡಳಿ ಅಧ್ಯಕ್ಷರಾಗುತ್ತೀರಾ’ ಎಂದು ಹೇಳಿದ್ದ.

ನಕಲಿ ಸ್ವಾಮಿಯ ಮಾತು ನಂಬಿದ ಆನಂದ್‌ ಅವರು ಬೆಂಗಳೂರಿನ ಪಂಚತಾರಾ ಹೋಟೆಲ್‌ವೊಂದರಲ್ಲಿ ಆರೋಪಿಯನ್ನು ಭೇಟಿಯಾಗಿ ಒಂದೂವರೆ ಕೋಟಿ ರು. ನೀಡಿದ್ದರು. ಇದಾದ ಬಳಿಕ ಆರೋಪಿ ಯಾವುದೇ ಹುದ್ದೆಯನ್ನು ಕೊಡಿಸಿರಲಿಲ್ಲ. ಹಣ ವಾಪಸ್‌ ನೀಡುವಂತೆ ದೂರುದಾರರು ಕೇಳಿದ್ದಕ್ಕೆ ‘ನೀನು ಇಷ್ಟು ನಗದು ಎಲ್ಲಿಂದ ಸಂಪಾದನೆ ಮಾಡಿದ್ದು?’ ಎಂದು ಹೆದರಿಸಿದ್ದ. ಇದಕ್ಕೆ ಹೆದರಿದ ಆನಂದ್‌ ದೂರು ನೀಡಿರಲಿಲ್ಲ. ಈತನ ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಠಾಣೆಗೆ ದೂರು ನೀಡಿದರು ಎಂದು ಹೈಗ್ರೌಂಡ್ಸ್‌ ಠಾಣೆ ಪೊಲೀಸರು ಮಾಹಿತಿ ನೀಡಿದರು.