ಬೆಂಗಳೂರು [ಜ.13]:  ಜೀವನದಲ್ಲಿ ಜಿಗುಪ್ಸೆಗೊಂಡು ಅಪಾರ್ಟ್‌ಮೆಂಟ್‌ನ ಮೂರನೇ ಮಹಡಿಯಿಂದ ಜಿಗಿದು ಎಂಸಿಎ ಪದವೀಧರನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಂಬೂ ಸವಾರಿ ದಿಣ್ಣೆ ಸಮೀಪ ನಡೆದಿದೆ.

ಪಂಚವಟಿ ಬಿಡಿಎ ಅಪಾರ್ಟ್‌ಮೆಂಟ್‌ ನಿವಾಸಿ ಕೆ.ಜಿ.ಗಿರೀಶ್‌ (28) ಮೃತ ದುರ್ದೈವಿ. ತನ್ನ ಸ್ನೇಹಿತರ ಜತೆ ನೆಲೆಸಿದ್ದ ಗಿರೀಶ್‌, ಶುಕ್ರವಾರ ರಾತ್ರಿ 7.30ರ ಸುಮಾರಿಗೆ ಫ್ಲ್ಯಾಟ್‌ನಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣವೇ ಆತನನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ತೀವ್ರ ರಕ್ತಸ್ರಾವದಿಂದ ಗಿರೀಶ್‌ ಮೃತಪಟ್ಟಿದ್ದಾನೆ.

ಮುಳಬಾಗಿಲು ಪಟ್ಟಣದ ಗಿರೀಶ್‌, ಒಂದೂವರೆ ವರ್ಷದಿಂದ ಪಂಚವಟಿ ಆಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದ. ತಮ್ಮ ಸ್ನೇಹಿತರಾದ ಕಿರಣ್‌ ಮತ್ತು ಮಹೇಶ್‌ ಜತೆ ಸೇರಿ ಆತ, ಸಾಫ್ಟ್‌ವೇರ್‌ ಕಂಪನಿ ಸ್ಥಾಪಿಸಲು ಯೋಜಿಸಿದ್ದ. ಇದಕ್ಕಾಗಿ ಈ ಮೂವರು ಸ್ನೇಹಿತರು ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದರು.

ಉಗ್ರರಿಗೆ ಆಶ್ರಯ: ಚಾಮರಾಜನಗರದಲ್ಲಿ ಇಬ್ಬರು ಮೌಲ್ವಿಗಳ ಬಂಧನ..

ಫ್ಲ್ಯಾಟ್‌ನಲ್ಲಿ ರಾತ್ರಿ ಗೆಳೆಯರು, ಮೊಬೈಲ್‌ನಲ್ಲಿ ಗೇಮ್‌ ಆಡುತ್ತಾ ಕುಳಿತಿದ್ದರು. ಆಗ ಹೊರಗೆ ಹೋಗಿ ಬರುವೆ ಎಂದು ಎದ್ದು ಬಂದ ಗಿರೀಶ್‌, ಏಕಾಏಕಿ ಕಾರಿಡಾರ್‌ನಿಂದ ಕೆಳಗೆ ಹಾರಿದ್ದಾನೆ. ಕೂಡಲೇ ಸ್ಥಳೀಯರು, ಅತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇತ್ತೀಚಿಗೆ ಮಾನಸಿಕ ಖಿನ್ನೆತೆಯಿಂದ ಬಳಲುತ್ತಿದ್ದ ಅವರು, ಇದೇ ಯಾತನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಕೋಣನಕುಂಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.