*  28 ವರ್ಷದ ಸಚಿನ್‌ ಎಂಬಾತನ ಕೊಲೆಗೆ ಕಾರಣ ಬದನೆಕಾಯಿ*  ಗೆಳೆಯರಿಂದಲೇ ಕೊಲೆಗೀಡಾದ ಸಚಿನ್‌*  ಬದನೆಕಾಯಿ ಕಳ್ಳತನದ ಬಗ್ಗೆ ಹೊಲದ ಮಾಲೀಕನಿಗೆ ತಿಳಿಸಿದ್ದ ಸಚಿನ್‌

ಶಹಾಪುರ(ಜೂ.02): ತಾಲೂಕಿನ ಚಾಮನಾಳ ಗ್ರಾಮದ ಹೊಲವೊಂದರಲ್ಲಿ ಸೋಮವಾರ ಮೇ 30 ರಂದು ಯುವಕ ಸಚಿನ್‌ ಎಂಬಾತನನ್ನು ಸೀರೆಯೊಂದನ್ನು ಕುತ್ತಿಗೆಗೆ ಸುತ್ತಿ ಕೊಲೆ ಮಾಡಲಾಗಿತ್ತು. ಈ ಪ್ರಕರಣ ಗೋಗಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿತ್ತು. ಈ ಪ್ರಕರಣದ ಬೆನ್ನು ಹತ್ತಿದ ಪೊಲೀಸರ ತಂಡ ಆರೋಪಿಗಳಿಬ್ಬರನ್ನು ಬುಧವಾರ ಬಂಧಿ​ಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಆರೋಪಿಗಳಿಬ್ಬರೂ ಕೊಲೆಯಾದ ಸಚಿನ್‌ ಮುರುಕುಂದ ಈತನ ಸ್ನೇಹಿತರೇ ಆಗಿದ್ದು, ಕುಡಿದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಸಚಿನ್‌ನನ್ನು ಕಲ್ಲಿನಿಂದ ಹೊಡೆದು ಸೀರೆಯಿಂದ ಕುತ್ತಿಗೆಗೆ ಸುತ್ತಿ ಉಸಿರು ಗಟ್ಟಿಸಿ ಕೊಲೆಗೈಯಲಾಗಿದೆ ಎಂದು ಎಸ್ಪಿ ಡಾ. ವೇದಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಂದ್ರಕಾಂತ ರಾಠೋಡ್‌ (28), ಹಳ್ಳೆಪ್ಪ ಮಾದರ (24) ಬಂಧಿತ ಆರೋಪಿಗಳು. ಆರೋಪಿ ಚಂದ್ರು ಚಾಮನಾಳ ಗ್ರಾಮದ ಸೀತಾರಾಮ ರಾಠೋಡ ಎಂಬ ರೈತನ ಹೊಲದಲ್ಲಿ ಬೆಳೆಸಲಾಗಿದ್ದ ಬದನೆ ಕಾಯಿಗಳನ್ನು ಕಳವು ಮಾಡಿಕೊಂಡು ಹೋಗಿದ್ದ ಎನ್ನಲಾಗಿದೆ. ಈ ವಿಷಯ ತಿಳಿದಿದ್ದ ಸಚಿನ್‌ ಮಾಲೀಕ ಸೀತಾರಾಮ ಅವರಿಗೆ ಚಂದ್ರು ತಮ್ಮ ಹೊಲದಲ್ಲಿ ಬೆಳೆದ ಬದನೆಕಾಯಿ ಕಳುವು ಮಾಡಿಕೊಂಡು ಹೋಗಿರುವ ವಿಚಾರ ತಿಳಿಸಿದ್ದಾನೆ ಎನ್ನಲಾಗಿದೆ. ಆಗ ಬದನೆಕಾಯಿ ಮಾಲೀಕ ಸೀತಾರಾಮ ಆರೋಪಿ ಚಂದ್ರುಗೆ ತರಾಟೆಗೆ ತೆಗೆದುಕೊಂಡಿದ್ದ.

Belagavi Crime: ಹೊಡೆತಕ್ಕೆ ಪತ್ನಿ ಮೃತಪಟ್ಟಿದ್ದಾಳೆ ಎಂದು ತಿಳಿದು ಪತಿ ಆತ್ಮಹತ್ಯೆ!

ಈ ವಿಷಯಕ್ಕೆ ಸ್ನೇಹಿತರ ಮಧ್ಯೆ ಗಲಾಟೆ ಶುರುವಾಗಿದ್ದು, ಚಂದ್ರು ಮತ್ತು ಹಳ್ಳೆಪ್ಪ ಇಬ್ಬರು ಸಚಿನ್‌ ಜೊತೆ ಕುಡಿದ ಅಮಲಿನಲ್ಲಿ ಜಗಳವಾಡಿದ್ದಾರೆ. ಸಚಿನ್‌ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರಿಂದ ಕೊಲೆಗೈದಿರುವದಾಗಿ ಆರೋಪಿಗಳು ತಿಳಿಸಿದ್ದಾರೆ ಎಂದು ಜಿಲ್ಲಾ ಎಸ್ಪಿ ತಿಳಿಸಿದ್ದಾರೆ.

ಆರೋಪಿಗಳ ಬಂಧನಕ್ಕೆ ಯಾದಗಿರಿ ಡಿವೈಎಸ್ಪಿ ಜೇಮ್ಸ್‌ ಮಿನೇಜೆಸ್‌ ಮಾರ್ಗದರ್ಶನದಲ್ಲಿ ಗ್ರಾಮೀಣ ಠಾಣೆಯ ಸಿಪಿಐ ಚನ್ನಯ್ಯ ಹಿರೇಮಠ, ಗೋಗಿ ಠಾಣೆಯ ಪಿಎಸ್‌ಐ ಅಯ್ಯಪ್ಪ, ಭೀಗುಡಿ ಠಾಣೆಯ ಪಿಎಸ್‌ಐ ಸಂತೋಷ ರಾಠೋಡ ಸೇರಿದಂತೆ ಇತರೆ ಪೊಲೀಸರ ತಂಡ ಆರೋಪಿಗಳನ್ನು ಬಂ​ಧಿಸುವಲ್ಲಿ ಯಶಸ್ವಿಯಾಗಿದ್ದಾರೆ.