ಬೆಂಗಳೂರು: ಪ್ರೀತಿ ನಿರಾಕರಿಸಿದವಳಿಗೆ ಚಾಕು ಇರಿದು ಆತ್ಮಹತ್ಯೆಗೆ ಯತ್ನಿಸಿದ ಪಾಗಲ್ ಪ್ರೇಮಿ
ತಡೆಯಲು ಬಂದ ಪೊಲೀಸ್ ಪೇದೆ ಮೇಲೂ ಚಾಕುವಿನಿಂದ ಹಲ್ಲೆ, ಬಾಗೇಪಲ್ಲಿಯಿಂದ ಆನೇಕಲ್‌ಗೆ ಬಂದು ಕೆಲಸ ಮಾಡುತ್ತಿದ್ದ ವಿಚ್ಛೇದಿತೆ, ಆಕೆಗೆ ಪ್ರೀತಿಸುವಂತೆ ಕಾಟ ಕೊಡುತ್ತಿದ್ದ ಅದೇ ಗ್ರಾಮದ ಶ್ರೀನಿವಾಸ, ಬಸ್ ಏರಲು ನಿಂತಿದ್ದವಳಿಗೆ ಪ್ರೀತಿಸುವಂತೆ ಕಾಟ ಕೊಡಲು ಆರಂಭ, ಒಪ್ಪದಿದ್ದಾಗ ಚಾಕು ತೆಗೆದು ಆಕೆಯ ಮೇಲೆ ತೀವ್ರ ಹಲ್ಲೆ ನಡೆಸಿದ, ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ಯುವಕ.
ಆನೇಕಲ್(ಸೆ.14): ತನ್ನ ಪ್ರೀತಿಯನ್ನು ಒಪ್ಪಿಕೊಳ್ಳದ ಯುವತಿಗೆ ಚಾಕುವಿನಿಂದ ಇರಿದು ನಂತರ ತಾನೂ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಅತ್ತಿಬೆಲೆ ಠಾಣಾ ವ್ಯಾಪ್ತಿಯ ಬಸ್ ನಿಲ್ದಾಣದಲ್ಲಿ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಮೂಲದ ಜಯಲಕ್ಷ್ಮಿ ಇರಿತಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೇ ಊರಿನ ಶ್ರೀನಿವಾಸ ಹುಚ್ಚು ಪ್ರೀತಿಯ ತೆವಲಿಗೆ ಬಿದ್ದು ತನ್ನನ್ನು ತಾನೇ ಇರಿದುಕೊಂಡು ಪೊಲೀಸರ ಅತಿಥಿಯಾಗಿದ್ದಾನೆ. ಘಟನೆಯಲ್ಲಿ ಅತ್ತಿಬೆಲೆ ಪೊಲೀಸ್ ಠಾಣೆಯ ಮುಖ್ಯ ಪೇದೆ ಬೀರಪ್ಪ ಅವರಿಗೂ ಗಾಯಗಳಾಗಿವೆ.
ಪತಿಯಿಂದ ದೂರವಾದ ಜಯಲಕ್ಷ್ಮಿ ಆನೇಕಲ್‌ನ ಹೋಟಲ್‌ನಲ್ಲಿ ಕೆಲಸ ಮಾಡುತ್ತಾ ಬದುಕು ಕಟ್ಟಿಕೊಂಡಿದ್ದರು. ಬಾಗೇಪಲ್ಲಿಯಿಂದ ಆನೇಕಲ್‌ಗೆ ಬಂದ ಶ್ರೀನಿವಾಸ, ತಾನು ಬದುಕು ಕೊಡಲು ಸಿದ್ಧನಿದ್ದೇನೆ. ತನ್ನನ್ನು ವರಿಸಬೇಕು ಎಂದು ಮಹಿಳೆಗೆ ಒತ್ತಾಯಿಸುತ್ತಿದ್ದ. ಪಾಗಲ್ ಪ್ರೇಮಿ ಮಂಗಳವಾರವೂ ಸಹಾ ಜಯಲಕ್ಷ್ಮಿಯನ್ನು ಪ್ರೀತಿಸುವಂತೆ ಒತ್ತಾಯಿಸಿದ್ದಾನೆ. ಮದುವೆಗೆ ಒಪ್ಪದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದಾನೆ. ಅಲ್ಲದೆ ತನ್ನ ಕೈಗಳನ್ನು ಗಾಜಿನಿಂದ ಕೊಯ್ದುಕೊಂಡು ಆಕೆಗೆ ಎಚ್ಚರಿಕೆ ನೀಡಿದ್ದ.
ಅಪ್ರಾಪ್ತ ಯುವತಿಯನ್ನ ಮದುವೆಯಾಗಿ ಸಂಕಷ್ಟಕ್ಕೆ ಸಿಲುಕಿದ ಹಾಡ್ಯಾ ಗ್ರಾಮ ಪಂಚಾಯತಿ ಉಪಾಧ್ಯಕ್ಷ!
ಈತನ ಕಾಟದಿಂದ ತಪ್ಪಿಸಿಕೊಂಡು ಹೋಗಲು ತನ್ನ ಗೆಳತಿಯ ಜೊತೆ ಸೇರಿ ಅತ್ತಿಬೆಲೆಯಿಂದ ಬಾಗೇಪಲ್ಲಿಗೆ ತೆರಳಲು ಬಸ್ ನಿಲ್ದಾಣದಲ್ಲಿ ಜಯಲಕ್ಷ್ಮಿ ನಿಂತಿದ್ದಾಗ ಅಲ್ಲಿಗೆ ಬಂದ ಶ್ರೀನಿವಾಸ ಮತ್ತೆ ತನ್ನ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. ಅಲ್ಲಿ ನೆರೆದಿದ್ದ ಜನ ಇವರ ಗಲಾಟೆ ತಡೆದು ಪೊಲೀಸರಿಗೆ ದೂರು ನೀಡಲು ಹೇಳಿದ್ದಾರೆ. ಅಲ್ಲದೆ ಪೊಲೀಸರಿಗೆ ದೂರವಾಣಿ ಮೂಲಕ ಠಾಣೆಗೆ ತಿಳಿಸಿದರು.
ಅಷ್ಠರಲ್ಲಿ ಶ್ರೀನಿವಾಸ ಮೊದಲೇ ಅಡಗಿಸಿಟ್ಟಿದ್ದ ಚಾಕುವಿನಿಂದ ಜಯಲಕ್ಷ್ಮಿ ಮೇಲೆ ಹಲ್ಲೆ ನಡೆಸಿದ್ದಾನೆ. ಸ್ಥಳದಲ್ಲಿದ್ದ ಕೆಲವರು ಪ್ರಾಣಾಪಾಯವನ್ನು ಲೆಕ್ಕಿಸದೆ ಜಯಲಕ್ಷ್ಮಿಯನ್ನು ಕಾಪಾಡುವ ಪ್ರಯತ್ನ ಮಾಡಿದರು. ಅಷ್ಟರಲ್ಲಿ ಅಲ್ಲಿಗೆ ಬಂದ ಮುಖ್ಯ ಪೇದೆ ಬೀರಪ್ಪ ಅವರ ಮಾತನ್ನೂ ಲೆಕ್ಕಿಸದೇ ಅವರಿಗೂ ಚಾಕುವಿನಿಂದ ಇರಿದು ಗಾಯಗೊಳಿಸಿ, ತಾನು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ.
ಸ್ಥಳಕ್ಕೆ ಧಾವಿಸಿ ಬಂದ ಪಿಎಸ್‌ಐ ನಾರಾಯಣರಾವ್ ಆರೋಪಿ ಶ್ರೀನವಾಸನನ್ನು ಬಂಧಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ನ್ಯಾಯಾಂಗ ಬಂಧನಕ್ಕೆ ಕಳಿಸಿದರು. ಇನ್‌ಸ್ಪೆಕ್ಟರ್ ವಿಶ್ವನಾಥ್ ಆಸ್ಪತ್ರೆಗೆ ತೆರಳಿ ಬೀರಪ್ಪ ಅವರ ಯೋಗಕ್ಷೇಮ ವಿಚಾರಿಸಿ ಕೆಚ್ದೆದೆಯಿಂದ ಕೆಲಸ ನಿರ್ವಹಿಸಿದ್ದಕ್ಕೆ ಶ್ಲಾಘನೆ ವ್ಯಕ್ತಪಡಿಸಿ ಧೈರ್ಯ ಹೇಳಿದರು.