ಕಾರಟಗಿ(ಅ.18): ಬ್ಯಾಂಕ್‌ ಉದ್ಯೋಗಿಗಳಾಗಿರುವ ನೂತನ ದಂಪತಿ ಕೊಲೆಯ ಯತ್ನ ಶನಿವಾರ ಸಂಜೆಯ ಬಳಿಕ ಜರುಗಿದೆ. ಘಟನೆಯಲ್ಲಿ ಪತ್ನಿ ಸ್ಥಳದಲ್ಲೇ ಮೃತಪಟ್ಟರೆ, ಪತಿ ಅರೆ ಪ್ರಜ್ಞಾವಸ್ಥೆಯಲ್ಲಿ ಸಾವು, ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಘಟನೆಯು ಪಟ್ಟಣದ ಜನರಲ್ಲಿ ತಲ್ಲಣ ಮೂಡಿಸಿದೆ.

ಮೃತ ಬ್ಯಾಂಕ್‌ ಉದ್ಯೋಗಿ ತ್ರಿವೇಣಿ ಹಾಗೂ ಗಂಭೀರ ಗಾಯಗೊಂಡವರು ವಿನೋದ. ವಿನೋದ ಅವರು ಇಲ್ಲಿಯ ಬ್ಯಾಂಕ್‌ವೊಂದರಲ್ಲಿ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತ್ರಿವೇಣಿ ಬಳ್ಳಾರಿ ಜಿಲ್ಲೆಯ ಸಿರುಗುಪ್ಪದ ಬ್ಯಾಂಕ್‌ ಉದ್ಯೋಗಿ. ಇವರಿಬ್ಬರೂ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಉತ್ತೂರು, ಕಾಕನಕಟ್ಟೆ ಗ್ರಾಮಗಳಿಗೆ ಸೇರಿದವರು ಎಂದು ಪೊಲೀಸ್‌ ಹಾಗೂ ಬ್ಯಾಂಕ್‌ನ ಮೂಲಗಳು ತಿಳಿಸಿವೆ.

ಪತ್ನಿಯೊಂದಿಗೆ ಸಲುಗೆ ಬೇಡ ಎಂದಿದ್ದಕ್ಕೆ ಸಿಲಿಂಡರ್‌ ಎತ್ತಿಹಾಕಿ ಹತ್ಯೆಗೈದ ಗೆಳೆಯ..!

ತ್ರಿವೇಣಿ ಅವರು ಬ್ಯಾಂಕ್‌ ಕೆಲಸ ಮುಗಿಸಿ ಸಿರುಗುಪ್ಪದಿಂದ ಪಟ್ಟಣಕ್ಕೆ ಬಂದು ಪತಿ ವಿನೋದ ಜತೆ ದ್ವಿಚಕ್ರ ವಾಹನದಲ್ಲಿ ಸಿಬಿಎಸ್‌ ನಗರದಲ್ಲಿಯ ನಿವಾಸಕ್ಕೆ ತೆರಳುವ ಸಮಯದಲ್ಲಿ ಘಟನೆ ಜರುಗಿದೆ. ಕೊಲೆಗಡುಕರು ದ್ವಿಚಕ್ರ ವಾಹನದಲ್ಲಿ ಆಗಮಿಸಿ, ಬಲವಾದ ರಾಡ್‌ನಿಂದ ಹೊಡೆದಿದ್ದಾರೆ. ತ್ರಿವೇಣಿ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟರು. ಪ್ರಜ್ಞೆ ಕಳೆದುಕೊಂಡ ವಿನೋದ ಅವರನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಘಟನೆ ನಡೆದ ಸ್ಥಳದಲ್ಲಿ ನಿವಾಸಿಯೊಬ್ಬರು ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ. ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕೊಲೆ ನಡೆದಿರುವ ಸ್ಥಳದಲ್ಲಿ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ನೂರಾರು ಜನರು ಜಮಾವಣೆಗೊಂಡಿದ್ದರು. ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸಪಟ್ಟರು. ಘಟನೆಗೆ ಕಾರಣ ತಿಳಿದುಬಂದಿಲ್ಲ.