ಬೆಂಗಳೂರು(ಅ.17): ಕೆಲ ದಿನಗಳ ಹಿಂದೆ ಆಂಧ್ರ ಹಳ್ಳಿಯ ಪ್ರಸನ್ನ ಲೇಔಟ್‌ನಲ್ಲಿ ನಡೆದಿದ್ದ ಕೂಲಿ ಕಾರ್ಮಿಕ ಕೇದಾರ್‌ ಸಹಾನಿ ಕೊಲೆ ಪ್ರಕರಣ ಸಂಬಂಧ ಮೃತನ ಸ್ನೇಹಿತನನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಉತ್ತರಪ್ರದೇಶ ಮೂಲದ ರಾಹುಲ್‌ ಕುಮಾರ್‌ ಅಲಿಯಾಸ್‌ ಚೋಟಾಲಾಲ್‌ (25) ಬಂಧಿತ. ಪತ್ನಿಯೊಂದಿಗೆ ಸಲುಗೆ ಬೇಡ ಎಂದಿದ್ದ ಕೇದಾರ್‌ ಸಹಾನಿಯನ್ನು ಆರೋಪಿ ಕೊಲೆ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ. 

ಎರಡು ತಿಂಗಳಿಂದ ಆಂಧ್ರ ಹಳ್ಳಿಯ ಪ್ರಸನ್ನ ಲೇಔಟ್‌ನಲ್ಲಿ ನಿರ್ಮಾಣ ಹಂತದ ಅಪಾರ್ಟ್‌ಮೆಂಟ್‌ನಲ್ಲಿ ಕೇದಾರ್‌ ಹಾಗೂ ರಾಹುಲ್‌ ಪೇಟಿಂಗ್‌ ಕೆಲಸ ಮಾಡುತ್ತಿದ್ದರು. ಅದೇ ಕಟ್ಟಡದ ಆವರಣದಲ್ಲೇ ಅವರು ನೆಲೆಸಿದ್ದರು. ಆ ಅಪಾರ್ಟ್‌ಮೆಂಟ್‌ನ ಮತ್ತೊಂದು ಕೊಠಡಿಯಲ್ಲಿ ಟೈಲ್ಸ್‌ ಕೆಲಸ ಮಾಡುತ್ತಿದ್ದ ಬೆಟ್ಟಸ್ವಾಮಿ ನೆಲೆಸಿದ್ದ. ಒಂದೇ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಮೂವರಲ್ಲೂ ಆತ್ಮೀಯತೆ ಬೆಳೆದಿತ್ತು. ರಾತ್ರಿ ಮದ್ಯ ಸೇವಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಮನೆಗೆ ಬರ್ತಿದ್ದ ಬಿಜೆಪಿ ನಾಯಕನ ಮೇಲೆ ಗುಂಡಿನ ಸುರಿಮಳೆ

ಇತ್ತೀಚೆಗೆ ತನ್ನ ಜತೆ ಗೆಳೆಯ ರಾಹುಲ್‌ ಸ್ನೇಹದ ವಿಚಾರ ತಿಳಿದು ಕೇದಾರ್‌ ಆಕ್ಷೇಪ ವ್ಯಕ್ತಪಡಿಸಿದ್ದ. ತನ್ನ ಮಡದಿ ತಂಟೆಗೆ ಬಂದರೆ ಸರಿ ಇರುವುದಿಲ್ಲ ಎಂದು ಆತ ಎಚ್ಚರಿಕೆ ನೀಡಿದ್ದ. ಇದರಿಂದ ಕೆರಳಿದ ರಾಹುಲ್‌, ಸೆ.5ರಂದು ರಾತ್ರಿ ಕೇದಾರ್‌ಗೆ ಕಂಠಮಟ್ಟಾ ಮದ್ಯ ಕುಡಿಸಿದ. ಬಳಿಕ ಆತನ ತಲೆ ಮೇಲೆ ಅಡುಗೆ ಸಿಲಿಂಡರ್‌ ಎತ್ತಿ ಹಾಕಿ ಹತ್ಯೆಗೈದು ಬಳಿಕ ಅಪಾರ್ಟ್‌ಮೆಂಟ್‌ ಸಮೀಪದ ಪೊದೆಯಲ್ಲಿ ಮೃತದೇಹ ಎಸೆದು ಪರಾರಿಯಾಗಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.