Online fraud : ಆನ್ಲೈನ್ ವಂಚನೆ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಜನರು ಬೇರೆ ಬೇರೆ ಆಸೆಗೆ ಬಿದ್ದು, ಮೋಸಗಾರರನ್ನು ನಂಬಿ ಹಣ ಹೂಡಿಕೆ ಮಾಡ್ತಿದ್ದಾರೆ. ಇಲ್ಲೊಬ್ಬ ಯುವಕನಿಗೆ ಮದುವೆ, ಷೇರುಮಾರುಕಟ್ಟೆ ಎರಡರದ್ದೂ ಸಹವಾಸ ಬೇಡ ಎನ್ನುವಂತಾಗಿದೆ.
ಮದುವೆ ಹೆಸರಿನಲ್ಲಿ ಮೋಸ ಹೋಗುವವರ ಸಂಖ್ಯೆ ಹೆಚ್ಚಾಗ್ತಿದೆ. ಮದುವೆಗೆ ಅದ್ಧೂರಿ ವಧು ದಕ್ಷಿಣೆ ತೆಗೆದುಕೊಂಡು, ಮದುವೆಯಾದ ಒಂದೋ ಎರಡೋ ದಿನದಲ್ಲೇ ಮನೆ ಖಾಲಿ ಮಾಡಿ ಅನೇಕ ಮಹಿಳೆಯರು ವರನಿಗೆ ಕೈಕೊಡ್ತಿದ್ದಾರೆ. ಮದುವೆ ಈಗ ಬ್ಯುಸಿನೆಸ್ ಆಗಿ ಮಾರ್ಪಟ್ಟಿದೆ. ಇಲ್ಲೊಬ್ಬ ಯುವಕ ಕೂಡ ಯುವತಿ ನಂಬಿ ಹಣ ಕಳೆದುಕೊಂಡಿದ್ದಾನೆ.
ಮದುವೆ, ಹಣದ ಆಸೆ ತೋರಿಸಿ ಪಂಗನಾಮ
ಓಲ್ಡ್ ಅಲ್ವಾಲ್ನ ಖಾಸಗಿ ಉದ್ಯೋಗಿಯೊಬ್ಬರಿಗೆ ಮದುವೆಯಾಗುವ ಆಸೆ ತೋರಿಸಿ ಯುವತಿ ಕೈಕೊಟ್ಟಿದ್ದಾಳೆ. ಆಕೆ ಷೇರು ಬ್ಯುಸಿನೆಸ್ ನಲ್ಲಿ ಲಾಭತಂದುಕೊಡೋದಾಗಿ ನಂಬಿಸಿದ್ದಳು. ಮ್ಯಾರೇಜ್ ವೆಬ್ಸೈಟ್ ಮೂಲಕ ಹುಡುಗಿ ಹಾಗೂ ಉದ್ಯೋಗಿಗೆ ಸಂಪರ್ಕ ಬೆಳೆದಿತ್ತು. ದೂರಿನ ಪ್ರಕಾರ, ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಅಕೌಂಟೆಂಟ್ ಒಬ್ಬರನ್ನು ನಂದಿತಾ ರೆಡ್ಡಿ ಎಂಬ ಮ್ಯಾಟ್ರಿಮೋನಿ ವೆಬ್ಸೈಟ್ ಮೂಲಕ ಸಂಪರ್ಕಿಸಿದ್ದಾಳೆ.
ಡ್ರಗ್ಸ್ ದಾಳಿಯಲ್ಲಿ ಸಿಕ್ಕಿಬಿದ್ದ ಖ್ಯಾತ ನಟಿ ಅಂಜು ಕೃಷ್ಣ; ಸಿನಿಲೋಕದಲ್ಲಿ ಬಹುದೊಡ್ಡ ಜಾಲ ಪತ್ತೆ ಆಯ್ತಾ?
ಮ್ಯಾಟ್ರಿಮೋನಿ ವೆಬ್ಸೈಟ್ ನಲ್ಲಿ ಇಬ್ಬರ ಚಾಟಿಂಗ್ ಶುರುವಾಗಿದೆ. ನಂತ್ರ ವಾಟ್ಸಾಪ್ ಸಂಖ್ಯೆ ಎಕ್ಸ್ಚೇಂಜ್ ಆಗಿದೆ. ಇಬ್ಬರೂ ಸುಮಾರು ಮೂರು ತಿಂಗಳ ಕಾಲ ಚಾಟ್ ಮಾಡಿದ್ದಾರೆ. ಮಹಿಳೆ ಮೂಲತಃ ವಿಜಯವಾಡದವರಾಗಿದ್ದು, ಪ್ರಸ್ತುತ ಯುಕೆಯಲ್ಲಿ ಸ್ಟಾಕ್ ಟ್ರೇಡಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿರೋದಾಗಿ ಹೇಳಿಕೊಂಡಿದ್ದಳು. ಮಾತಿನ ಮೂಲಕವೇ ಅಕೌಂಟೆಂಟ್ ವಿಶ್ವಾಸವನ್ನು ಗಳಿಸಿದ್ದಳು. ವೀಡಿಯೊ ಕರೆಗಳನ್ನು ಮಾಡ್ತಿದ್ದ ಯುವತಿ, ಬರೀ ಯುವಕನನ್ನು ಮಾತ್ರವಲ್ಲ ಅವರ ಮನೆಯವರನ್ನೂ ಬುಟ್ಟಿಗೆ ಹಾಕಿಕೊಂಡಿದ್ದಳು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ರೆ ಲಾಭ ಹೆಚ್ಚು ಬರುತ್ತೆ, ಮದುವೆ ನಂತ್ರ ಭವಿಷ್ಯ ಉಜ್ವಲವಾಗಿರುತ್ತೆ ಅಂತ ನಂಬಿಸಿ ಅಕೌಂಟೆಂಟ್ ಗೆ ಪಂಗನಾಮ ಹಾಕಿದ್ದಾಳೆ.
ಮುಂದುವರಿದ ಭಾಗವಾಗಿ, ಅನುಭವಿ ಟ್ರೇಡರ್ ನಾನು ಅಂತ ನಂಬಿಸಿದ ಯುವತಿ, ಗೂಗಲ್ ಪ್ಲೇ ಸ್ಟೋರ್ನಿಂದ ತನ್ನ ಕಂಪನಿಗೆ ಲಿಂಕ್ ಮಾಡಲಾಗಿದ್ದ ಅರ್ಜಿಯನ್ನು ಡೌನ್ಲೋಡ್ ಮಾಡಿಸಿದ್ದಾಳೆ. ಯುವತಿ ಮಾತನ್ನು ಸಂಪೂರ್ಣವಾಗಿ ನಂಬಿದ ಯುವಕ, ಆರಂಭದಲ್ಲಿ 50,000 ರೂಪಾಯಿ ಹೂಡಿಕೆ ಮಾಡಿದ್ದಾರೆ. ಇಲ್ಲಿ ಬಂದ ಲಾಭವನ್ನು ನೋಡಿ ಯುವಕನ ನಂಬಿಕೆ ಹೆಚ್ಚಾಗಿದೆ. ಕಂತಿನಲ್ಲಿ ಹೂಡಿಕೆ ಮುಂದುವರೆಸಿದ್ದಾರೆ. ಅಂತಿಮವಾಗಿ ಒಟ್ಟು 6.35 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಾರೆ. ಆ್ಯಪ್ ನಲ್ಲಿ ಸುಮಾರು 20 ಲಕ್ಷ ರೂಪಾಯಿ ಲಾಭ ತೋರಿಸಿದೆ. ಆದ್ರೆ ಹಣ ವಾಪಸ್ ಪಡೆಯಲು ಸಾಧ್ಯವಾಗ್ಲಿಲ್ಲ. ಆಪ್ ನಲ್ಲಿರುವ ಲಾಭದ ಹಣ ಪಡೆಯಬೇಕು ಅಂದ್ರೆ ಶೇಕಡಾ 30ರಷ್ಟು ತೆರಿಗೆ ಪಾವತಿಸಬೇಕು ಎಂಬ ವಿಷ್ಯ ಯುವಕನಿಗೆ ಕೊನೆಯಲ್ಲಿ ತಿಳಿಸಿದೆ. ಹೂಡಿಕೆ ಹಣವನ್ನು ವಾಪಸ್ ಪಡೆಯಲು ಮುಂದಾದ ಯುವಕ, ತೆರಿಗೆ ಕಟ್ಟಲು ಸಿದ್ಧರಾಗಿದ್ದರು. ತೆರಿಗೆ ಹಣ ಪಾವತಿಸಿ, ಉಳಿದ ಹಣವನ್ನು ಖಾತೆಗೆ ವರ್ಗಾಯಿಸುವಂತೆ ಯುವತಿಗೆ ವಿನಂತಿ ಮಾಡಿದ್ದಾರೆ. ಆದ್ರೆ ಹಣ ಕೇಳ್ತಿದ್ದಂತೆ ಯುವತಿ ವರಸೆ ಬದಲಾಗಿದೆ. ಅಲ್ಲಿಂದ ಯುವತಿ ಸಂಪರ್ಕ ಕಟ್ ಆಗಿದೆ. ಯುವತಿ ಫೋನ್ ಸ್ವಿಚ್ ಆಫ್ ಬರ್ತಿದೆ.
ಇಷ್ಟೆಲ್ಲ ಆಗಿ 6.35 ಲಕ್ಷ ರೂಪಾಯಿ ಕಳೆದುಕೊಂಡ್ಮೇಲೆ ಯುವಕನಿಗೆ ತಾನು ಮೋಸ ಹೋಗಿದ್ದೇನೆ ಎಂಬುದು ಅರಿವಿಗೆ ಬಂದಿದೆ. ಬಲಿಪಶು ಮಲ್ಕಾಜ್ಗಿರಿ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸೈಬರ್ ಕ್ರೈಮ್ ಸಂಖ್ಯೆ ದಿನೇ ದಿನೇ ಹೆಚ್ಚಾಗ್ತಿದೆ. ಈ ಬಗ್ಗೆ ಸರ್ಕಾರ, ಬ್ಯಾಂಕ್ ಗಳು ಸೂಚನೆ ನೀಡ್ತಿದ್ರೂ ಜನರು ಹಣದ ಆಸೆಗೆ ಬಿದ್ದು ಮೋಸ ಹೋಗ್ತಿದ್ದಾರೆ.


