500 ರು.ಗೆ ತಾನು ಹೆತ್ತ ಮಗಳನ್ನೇ ಮಾರಲು ಮುಂದಾದ ಮಹಿಳೆ : ಕಳ್ಳಸಾಗಣೆ ಸುಳಿವು
- ಕೇವಲ 500 ರು.ಗೆ ತಾನು ಹೆತ್ತ ಮಗಳನ್ನೇ ಮಾರಲು ಮುಂದಾದ ಮಹಿಳೆ
- ಮಕ್ಕಳ ಕಲ್ಯಾಣ ಸಮಿತಿಯಿಂದ ಮಗುವಿನ ರಕ್ಷಣೆ
- ತನಿಖೆ ನಡೆಸಿದಾಗ ಬೇರೆಯದ್ದೆ ಟ್ವಿಸ್ಟ್
ಮಥುರಾ (ಮೇ.24): ಹೆತ್ತ ತಾಯಿಯೇ ಕೇವಲ 500 ರುಪಾಯಿಗೆ ತನ್ನ ಮಗಳನ್ನೇ ಮಾರಲು ಹೊರಟಿದ್ದ ಘಟನೆ ಮಥುರೆಯಲ್ಲಿ ನಡೆದಿದೆ. ಆದರೆ ಇದರ ಹಿಂದೆ ಮಾನವ ಕಳ್ಳಸಾಗಣೆಯ ಶಂಕೆಯೂ ವ್ಯಕ್ತವಾಗಿದೆ.
ಮಾನಸಿಕ ಅಸ್ವಸ್ಥತೆ ಹೊಂದಿದ್ದಂತೆ ಕಾಣುವ 35 ವರ್ಷದ ತಾಯಿ ತಾನು ಹೆತ್ತ 5 ವರ್ಷದ ಮಗಳನ್ನು 500 ರುಪಾಯಿಗೆ ಮಾರಲು ಮುಂದಾಗಿದ್ದಾಳೆ. ಶನಿವಾರ ಸಂಜೆ ಈ ಘಟನೆ ನಡೆದಿದ್ದು, ಈ ವೇಳೆ ಆಕೆಯ ಕೃತ್ಯ ತಿಳಿದು ಸ್ಥಳಕ್ಕಾಗಮಿಸಿದ ಮಕ್ಕಳ ಕಲ್ಯಾಣ ಸಮಿತಿ 5 ವರ್ಷದ ಬಾಲಕಿ ಹಾಗೂ ಆಕೆಯ 7 ವರ್ಷದ ಸಹೋದರಿಯನ್ನು ರಕ್ಷಿಸಿ ಸರ್ಕಾರಿ ಮಕ್ಕಳ ವಸತಿ ನಿಲಯದಲ್ಲಿ ಇರಿಸಿದೆ.
ಬಳಿಕ ಮಹಿಳೆಯನ್ನು ವಶಕ್ಕೆ ಪಡೆದು ಅಕ್ರಮ ಮಾನವ ಕಳ್ಳಸಾಗಣಿಕೆ ಶಂಕೆ ಹಿನ್ನೆಲೆ ತನಿಖೆ ನಡೆಸಿದ್ದು ಈ ವೇಳೆ ಮತ್ತೊಂದು ಕೃತ್ಯ ಬೆಳಕಿಗೆ ಬಂದಿದೆ. ಆಕೆ 6 ವರ್ಷಗಳ ಹಿಂದೆಯೂ ತನ್ನ ಹಿರಿಯ ಮಗಳನ್ನು ಪಂಜಾಬ್ ಕುಟುಂಬ ಒಂದಕ್ಕೆ ಮಾರಿದ್ದಳೆನ್ನುವುದು ತಿಳಿದು ಬಂದಿದೆ.
ಹೆತ್ತ ತಂದೆ ಶವ ಬೇಡ, ಆತನ ಬಳಿಯಿರುವ ದುಡ್ಡು ಬೇಕು! ..
ಘಟನೆ ವಿವರ : ಮಕ್ಕಳ ಸಹಾಯವಾಣಿ ಜಿಲ್ಲಾ ಸಂವಹನಾಧಿಕಾರಿ ನರೇಂದ್ರ ಮರಿಹಾರ್ ಈ ಪ್ರಕರಣದ ಬಗ್ಗೆ ವಿವರಿಸಿದ್ದು, ಶನಿವಾರ ಸಂಜೆ ಕರೆಯೊಂದು ಬಂದಿದ್ದು ರಾಜ್‌ವಿರ್ ಕೌರ್ ಎಂಬ ಮಹಿಳೆ 500 ರು.ಗೆ ತನ್ನ ಮಗಳನ್ನು ಮಾರಾಟ ಮಾಡುತ್ತಿದ್ದಾರೆಂದು ತಿಳಿಸಿದರು. ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮಗುವನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಬಳಿಕ ಮಗುವಿಗೆ ಕೋವಿಡ್ ಟೆಸ್ಟ್ ಕೂಡ ಮಾಡಲಾಗಿದ್ದು ವರದಿ ನೆಗೆಟಿವ್ ಬಂದಿದೆ. ಬಳಿಕ ಆಕೆಯನ್ನು ಮಕ್ಕಳ ರಕ್ಷಣಾ ನಿಲಯದಲ್ಲಿ ಇರಿಸಲಾಯಿತು ಎಂದು ತಿಳಿಸಿದರು.
ಇನ್ನು ಆಕೆಯಿಂದ ಮೊಬೈಲ್ ಸಂಖ್ಯೆಯೊಂದು ಪತ್ತೆಯಾಗಿದ್ದು ಅದಕ್ಕೆ ಕರೆ ಮಾಡಿದಾಗ ಜಸ್ಸಾ ಸಿಂಗ್ ಎಂಬಾತ ಉತ್ತರಿಸಿದ್ದಾನೆ. ತಾನು ಪಂಜಾಬ್ ಮೂಲದವನಾಗಿದ್ದು ಆ ಮಹಿಳೆ ತನ್ನ ಪತ್ನಿ, ಆಕೆ ಇಬ್ಬರು ಹುಡುಗಿಯರ ಜೊತೆ ಕಳೆದ ನಾಲ್ಕು ತಿಂಗಳ ಹಿಂದೆ ಕಾಣೆಯಾಗಿದ್ದಳು ಎಂದಿದ್ದಾರೆ. ಅಲ್ಲದೇ ಆಕೆಯನ್ನು ಹಾಗೂ ಹಿರಿಯ ಮಗಳನ್ನು 6 ವರ್ಷಗಳ ಹಿಂದೆಯೇ 40 ಸಾವಿರ ಕೊಟ್ಟು ಖರೀದಿ ಮಾಡಿದ್ದು, ಚಿಕ್ಕ ಹುಡುಗಿ ನಮ್ಮಿಬ್ಬರ ಮಗಳು ಎಂದಿದ್ದಾನೆ.
ಸದ್ಯ ಜಸ್ಸಾ ಸಿಂಗ್ ನನ್ನು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದ್ದು ಇದರಲ್ಲಿ ಮಾನವ ಕಳ್ಳ ಸಾಗಣಿಕೆಯ ಶಂಕೆ ವ್ಯಕ್ತವಾಗುತ್ತಿದೆ ಎಂದು ನರೇಂದ್ರ ಪರಿಹಾರ್ ಹೇಳಿದರು.
ಅಲ್ಲದೇ ಈ ಸಂಬಂಧ ಹೆಚ್ಚಿನ ತನಿಖೆ ನಡೆಸಿ ಕಾನೂನಾತ್ಮಕ ಕ್ರಮ ಕೈಗೊಳ್ಳುವುದಾಗಿಯೂ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.