ನೋಡಲು ಸುಂದರವಾಗಿಲ್ಲ ಅಂತ ಹೆಂಡ್ತಿಗೆ ಕಿರುಕುಳ: ಗಂಡನ ಕಾಟ ತಾಳದೆ ಮಹಿಳೆ ಆತ್ಮಹತ್ಯೆ
* ಶಾಜಿಮಾ ಬಾನು ಎಂಬಾಕೆಯೇ ಮೃತಪಟ್ಟ ದುರ್ದೈವಿ
* ಕಿರುಕುಳಕ್ಕೆ ಬೇಸತ್ತು ಹೋಗಿದ್ದ ಶಾಜಿಮಾ
* ಚಿಕಿತ್ಸೆ ಫಲಿಸದೇ ಶಾಜಿಮಾ ಬಾನು ಸಾವು
ಬೆಂಗಳೂರು(ಮೇ.12): ಗಂಡನ ಕಿರುಕುಳ ತಾಳಲಾರದೇ ಹೆಂಡ್ತಿ ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ಆರ್.ಟಿ.ನಗರದಲ್ಲಿ ನಿನ್ನೆ(ಬುಧವಾರ) ನಡೆದಿದೆ. ಶಾಜಿಮಾ ಬಾನು ಎಂಬಾಕೆಯೇ ಮೃತಪಟ್ಟ(Death) ದುರ್ದೈವಿಯಾಗಿದ್ದಾಳೆ.
ನಗರದ ಆರ್.ಟಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದ ಇಮ್ರಾನ್ ಹಾಗೂ ಶಾಜಿಯಾ ಬಾನು 10 ವರ್ಷದ ಹಿಂದೆ ಮದುವೆಯಾಗಿ(Marriage) ಸುಖವಾಗಿ ಸಂಸಾರ ನಡೆಸ್ತಿದ್ರು. ಈ ದಂಪತಿಗೆ ಮುದ್ದಾದ ಮೂರು ಮಕ್ಕಳಿವೆ. ಶಾಜಿಯಾ ಬಾನು ತಂದೆ ಇರುವವರೆಗೆ ಎಲ್ಲವೂ ಚೆನ್ನಾಗಿಯೇ ಇತ್ತು. ಆದ್ರೆ ಅವರ ಮರಣದ ನಂತರ ಶಾಜಿಯಾ-ಇಮ್ರಾನ್ ದಾಂಪತ್ಯದಲ್ಲಿ ಬಿರುಕುಂಟಾಗಿತ್ತು. ಮಾವನ ಅಗಲಿಕೆ ನಂತರ ಇಮ್ರಾನ್ ವರ್ತನೆಯಲ್ಲಿ ತುಂಬಾ ಬದಲಾವಣೆಯಾಗಿತ್ತು. ಮಡದಿ ಶಾಜಿಯಾಗೆ ಕಾಟ ಕೊಡೋಕೆ ಆರಂಭಿಸಿದ್ದ ಅಂತ ಆರೋಪ ಮಾಡ್ತಾರೆ ಶಾಜಿಯಾ ಸಂಬಂಧಿಕರು.
ಗಂಡನ ಮನೆಯಲ್ಲಿ ಟಾಯ್ಲೆಟ್ ಇಲ್ಲದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ!
ಗಂಡ ಇಮ್ರಾನ್ ನೀನು ನನಗೆ ತಕ್ಕ ಹೆಂಡತಿಯಲ್ಲ. ಸುಂದರವಾಗಿಲ್ಲ. ಕಪ್ಪಗಿದ್ದೀಯಾ ಅಂತೆಲ್ಲ ಹೀಯಾಳಿಸೋಕೆ ಆರಂಭಿಸಿದ್ದನಂತೆ. ಅಲ್ಲದೆ ಅದಕ್ಕೆ ಸರಿಯಾಗಿ ಶಾಜಿಯಾ ಅತ್ತೆ ಸಹ ಇದೇ ವಿಷಯವಾಗಿ ಆಗಾಗ ಜಗಳ ಮಾಡುತ್ತಾ, ಸೊಸೆಯನ್ನು ತವರಿಗಟ್ಟುತ್ತಿದ್ದಳಂತೆ. ಅಲ್ಲದೆ ಮಕ್ಕಳನ್ನೂ(Children) ಸಹ ಶಾಜಿಯಾ ಜೊತೆ ಸೇರಲು ಬಿಡುತ್ತಿರಲಿಲ್ಲವಂತೆ. ಇದರಿಂದ ಬೇಸತ್ತು ಹೋಗಿದ್ದ ಶಾಜಿಯಾ ಕಳೆದ ಏ. 20ರಂದು ಮನೆಯಲ್ಲಿದ್ದ ಸ್ಯಾನಿಟೈಜರ್(Sanitizer) ಸುರಿದುಕೊಂಡು ಬೆಂಕಿ(Fire) ಹಚ್ಚಿಕೊಂಡಿದ್ದಳಂತೆ. ಚಿಕಿತ್ಸೆ ಫಲಿಸದೇ ಶಾಜಿಮಾ ಬಾನು ಸಾವನ್ನಪ್ಪಿದ್ದಾಳೆ.
ಈ ಬಗ್ಗೆ ಮಾತನಾಡಿದ ಮೃತಳ ತಾಯಿ ಹಸೀನಾ ಬಾನು, ನೀನು ನೋಡಲು ಚೆನ್ನಾಗಿಲ್ಲ, ಕಪ್ಪಗಿದ್ದೀಯಾ ಅಂತ ಹೇಳುತ್ತಾ, ಮಕ್ಕಳನ್ನೂ ನೋಡಲು ಬಿಡುತ್ತಿರಲಿಲ್ಲ. ಅತ್ತೆ ಶಾಜಿಯಾಳನ್ನು ಗಂಡನ ಜೊತೆ ಮಾತನಾಡಲೂ ಬಿಡುತ್ತಿರಲಿಲ್ಲ. ಇನ್ನು ಶಾಜಿಯಾ ತಂದೆಯ ಮರಣದ ನಂತರ ಹೀಗೆ ಕಾಟ ಕೊಡಲು ಪ್ರಾರಂಭಿಸಿದ್ದರು. ಶಾಜಿಯಾ ಬಾನು ಹೀಗೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಅವರ ಅತ್ತೆ ಹಾಗೂ ಗಂಡ ಇಮ್ರಾನ್ ಎಂದು ಆರೋಪಿಸುತ್ತಿದ್ದಾರೆ(Allegation). ಅವರು ಕೊಡುತ್ತಿದ್ದ ಕಿರುಕುಳದಿಂದಲೇ(Harassment) ಶಾಜಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ ಎನ್ನುತ್ತಿದ್ದಾರೆ. ಇನ್ನು ಈ ಜಗಳದಲ್ಲಿ ಮೂರು ಮಕ್ಕಳು ಅಮ್ಮನ ಪ್ರೀತಿಯಿಂದ ವಂಚಿತರಾಗಿದ್ದಾರೆ. ಆರ್.ಟಿ.ನಗರ ಪೊಲೀಸ್(Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.