Chikkamagaluru: ಕಾಫಿನಾಡಲ್ಲಿ ಕಾಡು ಪ್ರಾಣಿಗಳ ದಾಳಿಗೆ ಮತ್ತೊಂದು ಬಲಿ: ಕಾಡುಕೋಣ ತಿವಿದು ವ್ಯಕ್ತಿ ಸಾವು
ಕಾಫಿನಾಡಲ್ಲಿ ಕಾಡುಪ್ರಾಣಿಗಳ ದಾಳಿ ಹೊಸತೇನಲ್ಲ. ವನ್ಯ ಮೃಗಗಳ ದಾಳಿಗೆ ಪ್ರಾಣತೆತ್ತವರು ಇದ್ದಾರೆ. ಬದುಕುಳಿದವರು ಇದ್ದಾರೆ. ಆದರೆ, ಕಾಫಿನಾಡ ಇತಿಹಾಸದಲ್ಲಿ ಕಾಡುಕೋಣಕ್ಕೆ ರೈತ ಬಲಿಯಾಗಿದ್ದು ಇದೇ ಮೊದಲು.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಡಿ.29): ಕಾಫಿನಾಡಲ್ಲಿ ಕಾಡುಪ್ರಾಣಿಗಳ ದಾಳಿ ಹೊಸತೇನಲ್ಲ. ವನ್ಯ ಮೃಗಗಳ ದಾಳಿಗೆ ಪ್ರಾಣತೆತ್ತವರು ಇದ್ದಾರೆ. ಬದುಕುಳಿದವರು ಇದ್ದಾರೆ. ಆದರೆ, ಕಾಫಿನಾಡ ಇತಿಹಾಸದಲ್ಲಿ ಕಾಡುಕೋಣಕ್ಕೆ ರೈತ ಬಲಿಯಾಗಿದ್ದು ಇದೇ ಮೊದಲು. ಜಿಲ್ಲೆಯ ಕಳಸ ತಾಲ್ಲೂಕಿನ ತೋಟದೂರು ಸಮೀಪದ ಕುಳಿಹಿತ್ಲು ಗ್ರಾಮದ ನತದೃಷ್ಟ ರೈತ ಸೋಮಶೇಖರ್ ಕಾಡುಕೋಣ ದಾಳಿಗೆ ಮೃತರಾದ ದುರ್ದೈವಿ. ಕುಳಿಹಿತ್ಲು ಗ್ರಾಮದಲ್ಲಿ ಇವರಿಗಿರೋ ಅರ್ಧ ಎಕರೆ ತೋಟದಲ್ಲಿ ಇಂದು ಮುಂಜಾನೆ ಕೆಲಸಕ್ಕೆ ಹೋಗಿದ್ದರು.
ಅಡಿಕೆ ತೋಟದಲ್ಲಿ ಎಂದಿನಂತೆ ಕೆಲಸ ಮಾಡುವಾಗ ಕಾಡುಕೋಣ ಏಕಾಏಕಿ ದಾಳಿ ಮಾಡಿದೆ. ಮೃತ ಸೋಮಶೇಖರ್ ತಕ್ಷಣ ಓಡಿಹೋಗಲು ಯತ್ನಿಸಿದರು ಕೂಡ ಕಾಡುಕೋಣ ಹಠಕ್ಕೆ ಬಿದ್ದಂತೆ ಅವರ ಹಿಂದೆಯೇ ಓಡಿ ಹೋಗಿ ತಿವಿದು ಕೊಂದಿದೆ. ಸೋಮಶೇಖರ್ ಕೂಗುತ್ತಾ ಓಡಿದ್ದಾರೆ. ಅವರು ಕೂಗುತ್ತಿದ್ದಂತೆ ತೋಟದ ಮತ್ತೊಂದು ಕಡೆಯಿಂದ ಸಹೋದರ ಓಡಿ ಬಂದಿದ್ದಾರೆ. ತಕ್ಷಣ ನೀರು ಕುಡಿಸಿ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸುವಷ್ಟರಲ್ಲಿ ಪ್ರಾಣಪಕ್ಷಿ ಹಾರಿಹೋಗಿದೆ. ವಿಷಯ ತಿಳಿದ ಜನ ತೋಟದಲ್ಲಿ ಜಮಾಯಿಸಿ ಸ್ಥಳಕ್ಕೆ ಬಂದ ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.
Chikkamagaluru: ನರ್ಸ್ ನಿರ್ಲಕ್ಷ್ಯಕ್ಕೆ 4 ತಿಂಗಳ ಮಗು ಸಾವು: ಮುಗಿಲು ಮುಟ್ಟಿದ ಆಕ್ರಂದನ
ಕಾಫಿನಾಡಿಗರ ಜೀವಕ್ಕೆ ವನ್ಯ ಮೃಗಗಳೇ ಕಂಟಕ: ಕಾಫಿನಾಡಿಗರ ಜೀವಕ್ಕೆ ವನ್ಯಮೃಗಗಳೇ ಕಂಟಕವಾಗ್ತಿವೆ ಎನ್ನುವ ಪ್ರಶ್ನೆ ಉದ್ಬವವಾಗಿದೆ. ಹುಲಿಗೆ ಜೀವ ತೆತ್ತಾಯ್ತು. ಕಾಡಾನೆ ದಾಳಿಗೆ ಹತ್ತಾರು ಜನ ಉಸಿರು ಚೆಲ್ಲಾಯ್ತು. ಕರಡಿ ದಾಳಿಗೆ ಕೈ-ಕಾಲು ಕಳೆದುಕೊಂಡವರು ಇದ್ದಾರೆ. ಈಗ ಕಾಡುಕೋಣ ಸರದಿ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಏಕೆಂದರೆ ತೋಟದೂರು ಭಾಗದಲ್ಲಿ ಕಾಡಾನೆ ಹಾವಳಿ ಇದೆ. ಬೆಳಗ್ಗೆ 10-11 ಗಂಟೆ ಸುಮಾರಿಗೆ ಆನೆಗಳು ಬರುತ್ತಾವೆ ಅಂದರೆ ನಂಬಬಹುದು. ಆ ಭಯ ಸ್ಥಳಿಯರಿಗೂ ಇದೆ. ಆದ್ರೆ, ಕಾಡುಕೋಣ ದಾಳಿ ಮಾಡಿರೋದು ಈ ಭಾಗದ ಜನರಿಗೆ ಮತ್ತಷ್ಟು ಭಯ ತರಿಸಿದೆ.
ಸ್ಥಳಾಂತರ ಮಾಡಿ ಇಲ್ಲವೇ ಅರಣ್ಯವನ್ನಾಗಿಸಿ: ಕಾಡುಕೋಣದ ದಾಳಿಯಿಂದ ಸೋಮಶೇಖರ್ ದೇಹ ಸಂಪೂರ್ಣ ರಕ್ತಮಯವಾಗಿತ್ತು. ಕಾಡುಕೋಣದ ದಾಳಿಯ ಸ್ವರೂಪ ಘೋರವಾಗಿದ್ದು ಸ್ಥಳಿಯರ ಆಕ್ರೋಶಕ್ಕೂ ಕಾರಣವಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಬರ್ತಿದ್ದಂತೆ ತಾಳ್ಮೆ ಕಳೆದುಕೊಂಡಿದ್ದ ಸ್ಥಳಿಯರು ಅಧಿಕಾರಿಗಳಿಗೆ ಮನಸ್ಸೋ-ಇಚ್ಛೆ ಕ್ಲಾಸ್ ತೆಗೆದುಕೊಂಡಿದ್ದರು. ವನ್ಯಮೃಗಗಳು ಹಾಗೂ ಮಾನವ ಸಂಘರ್ಷ ಆಗಾಗ್ಗೆ ನಡೆಯುತ್ತಲೇ ಇದೆ. ಇದಕ್ಕೆ ಅರಣ್ಯ ಇಲಾಖೆಯ ಬೇಜವಾಬ್ದಾರಿಯೇ ನೇರ ಕಾರಣ ಎಂದು ಆಕ್ರೋಶ ಹೊರಹಾಕಿದ್ದಾರೆ. ಕಾಡು ಪ್ರಾಣಿಗಳು ಬರದಂತೆ ನೋಡಿಕೊಳ್ಳಿ.
ಚಿಕ್ಕಮಗಳೂರು ಎಂ.ಜಿ.ರಸ್ತೆ ಅಗಲೀಕರಣ: ಕಟ್ಟಡ ಮಾಲೀಕರು-ಪ.ಪಂ. ನಡುವೆ ಜಟಾಪಟಿ
ಇಲ್ಲ ನಮಗೆ ಸ್ಥಳಾಂತರ ಮಾಡಿ ನಮ್ಮ ಜಮೀನುಗಳನ್ನ ಬಿಟ್ಟು ಹೋಗ್ತೀವಿ ಅರಣ್ಯವನ್ನಾಗಿಸಿ ಎಂದು ಸ್ಥಳೀಯರಾದ ವಿಜಯ್ ಕುಮಾರ್ ಆಗ್ರಹಿಸಿದ್ದಾರೆ. ಒಟ್ಟಾರೆ, ಕಾಫಿನಾಡಲ್ಲಿ ಕಳೆದ ಆರು ತಿಂಗಳಲ್ಲಿ ನಾಲ್ಕೈದು ಜನ ಕಾಡಾನೆ ದಾಳಿಗೆ ಜೀವ ಕಳೆದುಕೊಂಡಿದ್ದಾರೆ. ಯತೇಚ್ಛವಾಗಿ ಅರಣ್ಯ ಪ್ರದೇಶ ಹೊಂದಿರುವ ಕಾಫಿನಾಡ ಕಾಡಂಚಿನ ಗ್ರಾಮಗಳಲ್ಲಿ ವನ್ಯಮೃಗ-ಮಾನವ ಸಂಘರ್ಷ ಹೊಸತು ಅಲ್ಲ. ಆದ್ರೆ, ಈ ರೀತಿ ಕಾಡುಕೋಣಕ್ಕೆ ಜೀವತೆತ್ತಿರೋದು ನಿಜಕ್ಕೂ ದುರಂತ ಹಾಗೂ ಭವಿಷ್ಯವೂ ಭಯಗೊಂಡಿದೆ. ಇಷ್ಟು ದಿನ ಹುಲಿ-ಚಿರತೆ-ಆನೆಗಳಿಗೆ ಹೆದರುತ್ತಿದ್ವಿ. ಇನ್ಮುಂದೆ ಕಾಡುಕೋಣಕ್ಕೂ ಭಯಪಡೋದಾದ್ರೆ ಕಾಡಂಚಿನ ಗ್ರಾಮಗಳ ಜನರ ಬದುಕು ಹೇಗೆಂದು ಹಳ್ಳಿಗರಲ್ಲಿ ಆತಂಕ ಶುರುವಾಗಿದೆ.