Mangaluru crimes: ಪತ್ನಿ ಕೊಲೆಗೈದ ಪ್ರಕರಣ ನ್ಯಾಯಾಲಯದಲ್ಲಿ ಸಾಬೀತು
ಪತ್ನಿ ಮೇಲೆ ಹಲ್ಲೆ ಮಾಡಿ ಕೊಲೆಗೈದ ಪತಿಯನ್ನು ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಅಪರಾಧಿ ಎಂದು ಪರಿಗಣಿಸಿ ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣವನ್ನು ಜೂ.16ರಂದು ಪ್ರಕಟಿಸಲಿದೆ.
ಮಂಗಳೂರು (ಜೂ.17) ಪತ್ನಿ ಮೇಲೆ ಹಲ್ಲೆ ಮಾಡಿ ಕೊಲೆಗೈದ ಪತಿಯನ್ನು ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಅಪರಾಧಿ ಎಂದು ಪರಿಗಣಿಸಿ ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣವನ್ನು ಜೂ.16ರಂದು ಪ್ರಕಟಿಸಲಿದೆ.
ಧರ್ಮಸ್ಥಳ ಸಮೀಪದ ನೆರಿಯ ಗ್ರಾಮದ ನಿವಾಸಿ ಮ್ಯಾಥ್ಯು ಎಂಬವರ ಪುತ್ರ ಜಾನ್ಸನ್ ಕೆ.ಎಂ. (41) ಅಪರಾಧಿ. ಈತ ತನ್ನ ಪತ್ನಿ ಸೌಮ್ಯ ಫ್ರಾನ್ಸಿಸ್ (36) ಅವರೊಂದಿಗೆ 2021ರ ಜ.7ರಂದು ರಾತ್ರಿ 7.30ರಿಂದ 8.30ರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿ, ದೊಣ್ಣೆಯಿಂದ ಹಲ್ಲೆ ಮಾಡಿದ್ದ. ಗಾಯಗೊಂಡು ಅಸ್ವಸ್ಥಳಾದ ಪತ್ನಿಯನ್ನು ಕಕ್ಕಿಂಜೆಯ ಆಸ್ಪತ್ರೆಗೆ ಕೊಂಡೊಯ್ದಿದ್ದ. ಗಾಯ ಗಂಭೀರವಿದ್ದ ಹಿನ್ನೆಲೆಯಲ್ಲಿ ಅಲ್ಲಿಂದ ಉಜಿರೆಯ ಆಸ್ಪತ್ರೆಗೆ ತರಲಾಗಿದ್ದು ಅಲ್ಲಿ ಆಕೆ ಮೃತರಾಗಿದ್ದರು. ಈ ಕುರಿತು ಸೌಮ್ಯ ಅವರ ಸೋದರ ಸನೋಜ್ ಫ್ರಾನ್ಸಿಸ್ ಬೆಳ್ತಂಗಡಿ ಠಾಣೆಯಲ್ಲಿ ದೂರು ನೀಡಿದ್ದರು.
ಇದೆಂಥಾ ವಿಚಿತ್ರ... ಸಾಯಲು ಹೊರಟವಳ ರಕ್ಷಿಸಿ ತಾನೇ ಕೊಂದ ಗಂಡ
ಈ ಪ್ರಕರಣವು ಬಳಿಕ ಧರ್ಮಸ್ಥಳ ಠಾಣೆಗೆ ವರ್ಗಾಯಿಸಲ್ಪಟ್ಟಿತ್ತು. ಈ ಕುರಿತು ತನಿಖೆ ಕೈಗೆತ್ತಿಕೊಂಡ ಬೆಳ್ತಂಗಡಿ ವೃತ್ತದ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಸಲ್ಲಿಸಿದ್ದರು.
ನ್ಯಾಯಾಲಯದಲ್ಲಿ 23 ಸಾಕ್ಷಿದಾರರು ಸಾಕ್ಷಿ ನುಡಿದಿದ್ದರು, 40 ದಾಖಲೆಗಳನ್ನು ಹಾಜರುಪಡಿಸಲಾಗಿತ್ತು. ಮರಣೋತ್ತರ ವರದಿಯ ಪ್ರಕಾರ ಹಳೆಯ ಗಾಯಗಳೂ ಇದ್ದ ಕಾರಣ ಮಹಿಳೆ ಮೇಲೆ ಹಿಂದೆಯೂ ಹಿಂಸಾತ್ಮಕ ಹಲ್ಲೆ ನಡೆದಿದೆ ಎಂದು ವರದಿ ಕೊಡಲಾಗಿತ್ತು. ಸರ್ಕಾರದ ಪರವಾಗಿ ಜುಡಿತ್ ಒ.ಎಂ. ಕ್ರಾಸ್ತಾ ವಾದ ಮಂಡಿಸಿದ್ದರು.
ವಿವಾಹಿತೆ ನಾಪತ್ತೆ: ದೂರು
ಬಂಟ್ವಾಳ: ಟೈಲರ್ ಅಂಗಡಿಗೆ ಹೋಗಿ ಬರುವುದಾಗಿ ಮನೆಯಿಂದ ತೆರಳಿದ ವಿವಾಹಿತ ಮಹಿಳೆ ಮೇ ತಿಂಗಳಿನಿಂದ ನಾಪತ್ತೆಯಾಗಿದ್ದಾಳೆ ಎಂದು ಮನೆಯವರು ತಡವಾಗಿ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಿ. ಮೂಡ ಗ್ರಾಮದ ಮುಗ್ದಲ್ ಗುಡ್ಡೆ ನಿವಾಸಿ ವಾಣಿಶ್ರೀ ನಾಪತ್ತೆಯಾದ ಮಹಿಳೆ.
ವಾಣಿಶ್ರೀ ಅವರನ್ನು 10 ವರ್ಷಗಳ ಹಿಂದೆ ವೇಣೂರಿನ ಯೋಗೀಶ್ ಎಂಬಾತನಿಗೆ ಮದುವೆ ಮಾಡಿ ಕೊಡಲಾಗಿತ್ತು. ಗಂಡ ಹಾಗೂ ಇಬ್ಬರು ಮಕ್ಕಳ ಜೊತೆ ಬಂಟ್ವಾಳದ ತಾಯಿ ಮನೆಯಲ್ಲಿ ವಾಸವಾಗಿದ್ದರು. ಮೇ 21ರಂದು ವಾಣಿಶ್ರೀ ಅವರು ಹಳೆಯಂಗಡಿಯ ಪರಿಚಿತ ವ್ಯಕ್ತಿ ವರುಣ್ ಎಂಬಾತನ ಜೊತೆ ಹೋಗಿದ್ದಳು. ಆದರೆ ಮರುದಿನ ಮಂಗಳೂರಿನಿಂದ ಮಗಳನ್ನು ಕರೆದುಕೊಂಡು ಬರಲಾಗಿತ್ತು. ಈ ಘಟನೆ ನಡೆದು ನಾಲ್ಕು ದಿನದ ಬಳಿಕ ಟೈಲರ್ ಅಂಗಡಿಗೆ ಹೋಗಿಬರುತ್ತೇನೆ ಎಂದು ಮನೆಯಲ್ಲಿ ಧರಿಸಿದ ಬಟ್ಟೆಯಲ್ಲಿ ಹೋದವಳು ವಾಪಸ್ ಬಂದಿಲ್ಲ ಎಂದು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಈಕೆಯ ತಾಯಿ ಸುನಂದಾ ಅವರು ದೂರು ನೀಡಿದ್ದಾರೆ.
ಹುಡುಗಿಯೊಂದಿಗೆ ಅನೈತಿಕ ಸಂಬಂಧ: ಪತ್ನಿಯನ್ನು ಕೊಲೆಗೈದು ಆತ್ಮಹತ್ಯೆ ಎಂದು ಬಿಂಬಿಸಿದ ಪತಿ
ಸುರತ್ಕಲ್: ಚೂರಿ ಇರಿತ, ವ್ಯಕ್ತಿ ಗಂಭೀರ ಗಾಯ
ಮೂಲ್ಕಿ: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾನ ಸಮೀಪದ ಜನತಾ ಕಾಲೋನಿಯಲ್ಲಿ ಮುಹಮ್ಮದ್ ಶಾಫಿ (35) ಎಂಬವರಿಗೆ ಚೂರಿಯಿಂದ ಇರಿಯಲಾಗಿದ್ದು ಗಂಭೀರವಾಗಿ ಗಾಯಗೊಂಡ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ಥಳೀಯ ನಿವಾಸಿ ಮುಹಮ್ಮದ್ ತ್ವಾಹಿರ್ (24) ಹಲ್ಲೆ ನಡೆಸಿದ್ದಾನೆ. ಗುರುವಾರ ರಾತ್ರಿ ಕಾನ ಜನತಾ ಕಾಲೋನಿಯ ಮಸೀದಿಯ ಬಳಿ ಇಬ್ಬರ ನಡುವೆ ಜಗಳವಾಗಿದ್ದು, ತ್ವಾಹಿರ್ ಚೂರಿಯಲ್ಲಿ ಇರಿದು ಪರಾರಿಯಾಗಿದ್ದಾನೆ. ಮುಹಮ್ಮದ್ ಶಾಫಿ ಅವರ ಬೆನ್ನು ಮತ್ತು ಕೈಗೆ ಚೂರಿ ಇರಿತದಿಂದ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ .ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.