Husband murdered for sexual demands: ಕೊಪ್ಪಳ ಮುನಿರಾಬಾದ್ ಬಳಿ, ಅತಿಯಾದ ಕಾಮಕ್ಕೆ ಒತ್ತಾಯಿಸುತ್ತಿದ್ದ ಸರ್ಕಾರಿ ನೌಕರ ಪತಿಯನ್ನು ಪತ್ನಿಯೇ ಒನಕೆಯಿಂದ ಹೊಡೆದು ಕೊಲೆಗೈದಿದ್ದಾಳೆ. ಪತಿಯ ಕಾಟದಿಂದ ಬೇಸತ್ತು ಈ ಕೃತ್ಯ ಎಸಗಿರುವುದಾಗಿ ಪತ್ನಿ ಪೊಲೀಸರ ಬಳಿ ಒಪ್ಪಿಕೊಂಡಿದ್ದು, ಆಕೆಯನ್ನು ಬಂಧಿಸಲಾಗಿದೆ.
ಕೊಪ್ಪಳ (ಸೆ.28): ಅತಿಯಾಗಿ ಕಾಮಕ್ಕೆ ಒತ್ತಾಯಿಸುತ್ತಿದ್ದ ಪತಿಯನ್ನು ಪತ್ನಿಯೇ ಒನಕೆಯಿಂದ ತಲೆಗೆ ಹೊಡೆದು ಕೊಲೆಗೈದಿರುವ ಘಟನೆ ಕೊಪ್ಪಳ ತಾಲೂಕಿನ ಮುನಿರಾಬಾದ ಬಳಿಯ ಪಂಪಾವನ ಸಮೀಪದ ಸರ್ಕಾರಿ ವಸತಿ ಗೃಹದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ರಮೇಶ (51) ಹತ್ಯೆಯಾದ ಪತಿ. ಈತನ ಪತ್ನಿ ಮಹಾದೇವಿಯನ್ನು ಪೊಲೀಸರು ಬಂಧಿಸಿದ್ದಾರೆ. ರಮೇಶ ಮುನಿರಾಬಾದ್‌ನಲ್ಲಿರುವ ಕೆಪಿಸಿಟಿಎಲ್‌ನಲ್ಲಿ ಆಪರೇಟರ್ ಆಗಿ ಸರ್ಕಾರಿ ಉದ್ಯೋಗದಲ್ಲಿದ್ದ. ಮೃತ ರಮೇಶ ಮನೆಯಲ್ಲಿ ಪದೇ ಪದೇ ಜಗಳ ಮಾಡುವುದು ಹಾಗೂ ಅಶ್ಲೀಲ ವಿಡಿಯೋ ತೋರಿಸಿ, ಇದೇ ರೀತಿ ಸಂಭೋಗ ಮಾಡೋಣ ಎಂದು ಪತ್ನಿಯನ್ನು ಒತ್ತಾಯಿಸುತ್ತಿದ್ದ. ಇದರಿಂದ ಪತ್ನಿ ಬೇಸತ್ತಿದ್ದಳು.
ಇದನ್ನೂ ಓದಿ: ನಟಿಯನ್ನು ಮಂಚಕ್ಕೆ ಕರೆದ ನಿರ್ದೇಶಕ; ಭಯದಿಂದ ನಿದ್ರೆ ಮಾತ್ರೆ ಸೇವಿಸಿದ ಸ್ಟಾರ್ ನಟಿ!
ಶುಕ್ರವಾರ ರಾತ್ರಿ 11ರ ಸುಮಾರಿಗೆ ದಂಪತಿ ನಡುವೆ ಜಗಳ ಶುರುವಾಗಿದೆ. ಮಾತಿಗೆ ಮಾತು ಬೆಳೆದು ಅದು ವಿಕೋಪಕ್ಕೆ ಹೋಗಿದೆ. ಆಗ ಪತ್ನಿ ಮಹಾದೇವಿ ಕೈಗೆ ಸಿಕ್ಕ ಒನಕೆಯಿಂದ ಪತಿಯ ತಲೆಗೆ ಹೊಡೆದಿದ್ದಾಳೆ. ಒನಕೆ ಏಟಿಗೆ ಪತಿ ನೆಲಕ್ಕೆ ಕುಸಿದು ಸ್ಥಳದಲ್ಲೇ ಸಾವನಪ್ಪಿದ್ದಾರೆ.
ಪತಿಯ ಕಾಟದಿಂದ ಬೇಸತ್ತು ಕೊಲೆ ಮಾಡಿರುವುದಾಗಿ ಪೊಲೀಸರ ವಿಚಾರಣೆಯಲ್ಲಿ ಈತನ ಪತ್ನಿ ಒಪ್ಪಿಕೊಂಡಿದ್ದಾಳೆ. ಮೃತನ ಪುತ್ರಿ ರಾಜೇಶ್ವರಿ ನೀಡಿದ ದೂರಿನ ಅನ್ವಯ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ. ಕೊಲೆ ಮಾಡಿದ ಪತ್ನಿಯನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
