ರಾಣಿಬೆನ್ನೂರು/ಹುಬ್ಬಳ್ಳಿ(ಅ.11): ರೈಲ್ವೆ ಹಳಿಗೆ ಬಿದ್ದು ಮೃತಪಟ್ಟಿದ್ದ ಎಂದು ಭಾವಿಸಲಾಗಿದ್ದ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. ಲಾಕ್‌ಡೌನ್‌ ವೇಳೆ ಮನೆಯಲ್ಲೇ ಇದ್ದ ಪತಿ ತಮ್ಮ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆ ಎಂದು ಪ್ರಿಯಕರನ ಜೊತೆಗೂಡಿದ ಪತ್ನಿಯೆ ಆತನನ್ನು ಕೊಲೆ ಮಾಡಿರುವುದು ರೈಲ್ವೆ ಪೊಲೀಸರಿಂದ ತನಿಖೆ ವೇಳೆ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ತಾಲೂಕಿನ ಗಂಗಾಜಲ ತಾಂಡಾದ ಶೋಭಾ ಚಂದ್ರಪ್ಪ ಲಮಾಣಿ ಹಾಗೂ ಮೆಡ್ಲೇರಿ ಗ್ರಾಮದ ಡಿಳ್ಳೆಪ್ಪ ಯಮನಪ್ಪ ತಳವಾರ ಬಂಧಿಸಲಾಗಿದೆ. ಇವರು ಸದ್ಯ ನ್ಯಾಯಾಂಗದ ವಶಕ್ಕೆ ನೀಡಲಾಗಿದೆ.

ಘಟನೆ ಹಿನ್ನೆಲೆ:

ಮೇ 10ರಂದು ರಾಣಿಬೆನ್ನೂರು ಮತ್ತು ಚಳಿಗೇರಿ ರೈಲ್ವೆ ನಿಲ್ದಾಣದ ಮಧ್ಯೆ ಅಪರಿಚಿತ ಶವ ಪತ್ತೆಯಾಗಿತ್ತು. ಆ ಸಮಯದಲ್ಲಿ ಪೊಲೀಸರಿಗೆ ಇದು ಆಕಸ್ಮಿಕ ಸಾವಲ್ಲ ಕೊಲೆಯಾಗಿರಬಹುದು ಎಂಬ ಅನುಮಾನ ಉಂಟಾಗಿತ್ತು. ಹೀಗಾಗಿ ಪ್ರಕರಣವನ್ನು ನ್ಯಾಯಾಲಯದ ಅನುಮತಿ ಮೇರೆಗೆ ಸಿಆರ್‌ಪಿಸಿ 174(ಸಿ) ಗೆ ಪರಿವರ್ತನೆ ಮಾಡಿಕೊಳ್ಳಲಾಗಿತ್ತು. ಮರುದಿನ ಹುಬ್ಬಳ್ಳಿಯ ಕಿಮ್ಸ್‌ ಶವಾಗಾರಕ್ಕೆ ಭೇಟಿ ನೀಡಿದ ಶೋಭಾ, ಶವ ಗುರುತಿಸಿ ಈತ ತನ್ನ ಪತಿ ಚಂದ್ರಪ್ಪ ಲಮಾಣಿ ಎಂದು ಗುರುತಿಸಿದ್ದರು. ಅಲ್ಲದೆ ಇವರಿಗೆ ಕುಡಿತದ ಚಟವಿತ್ತು. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದರು.

ಮನೆಗೆ ಬರ್ತಿದ್ದ ಬಿಜೆಪಿ ನಾಯಕನ ಮೇಲೆ ಗುಂಡಿನ ಸುರಿಮಳೆ

ಆದರೆ, ಮರಣೋತ್ತರ ಪರೀಕ್ಷೆ ಬಳಿಕ ಕಿಮ್ಸ್‌ ವೈದ್ಯರು ಬೇರೆಯದೆ ವರದಿ ನೀಡಿದ್ದರು. ಇದರ ಆಧಾರದ ಮೇಲೆ ತನಿಖೆ ಕೈಗೊಂಡಾಗ ಪ್ರಕರಣ ತಿರುವು ಪಡೆದಿದೆ. ಗಂಗಾಜಲ ತಾಂಡಾದ ಮೃತ ಚಂದ್ರಪ್ಪ ಗೌಂಡಿ ಕೆಲಸ ಮಾಡಿಕೊಂಡಿದ್ದ. ಕೆಲಸದ ನಿಮಿತ್ತ ತಿಂಗಳಾನುಗಟ್ಟಲೆ ಬೇರೆ ಊರುಗಳಿಗೆ ಹೋಗಿ ಬಂದು ಮಾಡುತ್ತಿದ್ದ. ಈ ವೇಳೆ ಮೃತನ ಹೆಂಡತಿ ಶೋಭಾ ಮತ್ತು ಡಿಳ್ಳೆಪ್ಪನ ನಡುವೆ ಅನೈತಿಕ ಸಂಬಂಧ ಏರ್ಪಟ್ಟಿದೆ.

ಲಾಕ್‌ಡೌನ್‌ ವೇಳೆಯಲ್ಲಿ ಕೆಲಸವಿಲ್ಲದ ಕಾರಣ ಚಂದ್ರಪ್ಪ ಮನೆಯಲ್ಲೇ ಇದ್ದ. ಈ ವೇಳೆ ಪತ್ನಿಯ ಅನೈತಿಕ ಸಂಬಂಧ ವಿಷಯ ಚಂದ್ರುವಿಗೆ ಗೊತ್ತಾಗಿ ಗಲಾಟೆ ನಡೆದಿದೆ. ಆಗ ಶೋಭಾ ಮತ್ತು ಡಿಳ್ಳೆಪ್ಪ ಸೇರಿಕೊಂಡು ಚಂದ್ರುವಿಗೆ ಮದ್ಯಪಾನ ಮಾಡಿಸಿ, ನಗರದ ದೊಡ್ಡ ಕೆರೆಯ ಬಳಿ ಕರೆದೊಯ್ದು ಕುತ್ತಿಗೆಗೆ ಹಗ್ಗದಿಂದ ಬಿಗಿದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆಗೈದಿದ್ದಾರೆ. ನಂತರ ಯಾರಿಗೂ ಅನುಮಾನ ಬಾರದಿರಲಿ ಎಂಬ ದುರುದ್ದೇಶದಿಂದ ಶವವನ್ನು ರೈಲ್ವೆ ಹಳಿಗೆ ಹಾಕಿ ಹೋಗಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಎಲ್ಲ ಸಂಗತಿ ಆರೋಪಿಗಳು ಬಾಯಿಬಿಟ್ಟಿದ್ದಾರೆ.

ಹುಬ್ಬಳ್ಳಿ ರೈಲ್ವೆ ಸಿಪಿಐ ಎಂ. ಕಾಲಿಮಿರ್ಚಿ, ಪಿಎಸ್‌ಐ ಸತ್ಯಪ್ಪ ಮುಕ್ಕಣ್ಣನವರ ಮಾರ್ಗದರ್ಶನದಲ್ಲಿ ಸ್ಥಳೀಯ ರೈಲ್ವೆ ಮುಖ್ಯಪೇದೆ ಆರ್‌.ಎಚ್‌. ಗುಳೇದ ಮತ್ತು ಸಿಬ್ಬಂದಿ ತನಿಖೆ ಕೈಗೊಂಡು ಪ್ರಕರಣ ಭೇದಿಸಿದ್ದಾರೆ.