ಹಾಸನ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನೇ ಕೊಂದ ಹೆಂಡ್ತಿ!
14 ವರ್ಷಗಳ ಹಿಂದೆ ವಿವಾಹವಾಗಿದ್ದ ಲೋಕೇಶ್ ಪತ್ನಿ ಸವಿತಾ ಹಾಗೂ ತನ್ನ ಇಬ್ಬರು ಹೆಣ್ಣು ಮಕ್ಕಳ ಜೊತೆ ಕುಂಬಾರಹಳ್ಳಿಯಲ್ಲಿ ವಾಸವಿದ್ದರು. ಮದುವೆಯಾಗಿ ಮೂರು ವರ್ಷದವರೆಗೂ ಪತಿ ಜೊತೆ ಚೆನ್ನಾಗಿದ್ದ ಸವಿತಾ ನಂತರ ಹಾದಿ ತಪ್ಪಿದ್ದಳು. ಎದುರು ಮನೆಯ ಅರುಣ್ ಎಂಬಾತನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದಳು.

ಹಾಸನ(ಜ.19): ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಕೊಲ್ಲಲು ಪತ್ನಿಯೇ ತನ್ನ ಪ್ರಿಯಕರನಿಗೆ ಸುಪಾರಿ ಕೊಟ್ಟು ಕೊಲೆಗೈದ ವಿಚಾರ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಮರುವನಹಳ್ಳಿ- ಮಡಬ ರಸ್ತೆಯಲ್ಲಿ ಗುರುವಾರ ರಾತ್ರಿ ನಡೆದಿದ್ದ ಕೊಲೆ ಪ್ರಕರಣದ ತನಿಖೆ ವೇಳೆ ಬೆಳಕಿಗೆ ಬಂದಿದೆ. ಲೋಕೇಶ ಅಲಿಯಾಸ್, ನಂಜುಂಡೇಗೌಡ ಕೊಲೆಯಾದ ದುರ್ದೈವಿಯಾಗಿದ್ದಾರೆ.
14 ವರ್ಷಗಳ ಹಿಂದೆ ವಿವಾಹವಾಗಿದ್ದ ಲೋಕೇಶ್ ಪತ್ನಿ ಸವಿತಾ ಹಾಗೂ ತನ್ನ ಇಬ್ಬರು ಹೆಣ್ಣು ಮಕ್ಕಳ ಜೊತೆ ಕುಂಬಾರಹಳ್ಳಿಯಲ್ಲಿ ವಾಸವಿದ್ದರು. ಮದುವೆಯಾಗಿ ಮೂರು ವರ್ಷದವರೆಗೂ ಪತಿ ಜೊತೆ ಚೆನ್ನಾಗಿದ್ದ ಸವಿತಾ ನಂತರ ಹಾದಿ ತಪ್ಪಿದ್ದಳು. ಎದುರು ಮನೆಯ ಅರುಣ್ ಎಂಬಾತನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದಳು. ಮದುವೆಯಾಗಿ ಇಬ್ಬರು ಮಕ್ಕಳಿದ್ದು, ಪತ್ನಿಯಿಂದ ದೂರವಿದ್ದ ಆರೋಪಿ ಅರುಣ ಅಲಿಯಾಸ್, ಅಶೋಕನ ಜತೆ ಅಕ್ರಮ ಸಂಬಂಧ ಹೊಂದಿದ್ದಳು.
ಗ್ರಾಮಸ್ಥರು ಸವಿತಾ- ಅರುಣ ನಡುವಿನ ಅಕ್ರಮ ಸಂಬಂಧದ ವಿಷಯ ತಿಳಿದಿದ್ದರು. ಪತಿ ಲೋಕೇಶ್ ಕೂಡ ಅಕ್ರಮ ಸಂಬಂಧ ವಿಷಯ ತಿಳಿದು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕುಟುಂಬಸ್ಥರು ಹಲವಾರು ಬಾರಿ ರಾಜೀ, ಪಂಚಾಯ್ತಿ ನಡೆಸಿ ಹೊಂದಿಕೊಂಡು ಹೋಗುವಂತೆ ತಿಳಿ ಹೇಳಿದ್ದರು.
ಬಾವನ ಜತೆ ಲವ್ವಿ ಡವ್ವಿ, ಗಂಡನ ಹತ್ಯೆಗೆ ಪತ್ನಿ ಸ್ಕೆಚ್: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಬಿತ್ತು ಹೆಣ!
ಆದರೂ ಸವಿತಾ ಬದಲಾಗದೆ ತನ್ನ ಚಾಳಿ ಮುಂದುವರೆಸಿದ್ದಳು. ಇಷ್ಟಾಗಿಯೂ ಲೋಕೇಶ್ ತನ್ನ ಎರಡು ಹೆಣ್ಣುಮಕ್ಕಳಿಗಾಗಿ ಎಲ್ಲವನ್ನೂ ಸಹಿಸಿಕೊಂಡಿದ್ದರು.
ಪತಿಯ ಕೊಲೆಗೆ ಪತ್ನಿಯ ಸಂಚು:
ಕೆಲ ದಿನಗಳ ಹಿಂದೆ ಅರುಣ ಮತ್ತವನ ತಂಡ ಲೋಕೇಶನ ಮೇಲೆ ದಾಳಿ ನಡೆಸಿದ್ದರು. ಅದೃಷ್ಟವಶಾತ್ ಲೋಕೇಶ್ ಬಚಾವಾಗಿದ್ದರು. ಮೂರನೇ ಬಾರಿ ಮಿಸ್ ಆಗಬಾರದು ಎಂದು ಸವಿತಾ ಮತ್ತು ಅರುಣ ಸಂಚು ಹೂಡಿದ್ದು ಗುರುವಾರ ಸಂಜೆ ಲೋಕೇಶ್ ರೈತರಿಂದ ಹಾಲು ಸಂಗ್ರಹ ಮಾಡಿಕೊಂಡು ಮರುವನಹಳ್ಳಿ- ಮಡಬ ಮಾರ್ಗ ಮಧ್ಯೆ ಮಹೀಂದ್ರಾ ಜಿತೋ ವಾಹನದಲ್ಲಿ ಬರುತ್ತಿದ್ದಾಗ ಆರೋಪಿಗಳು ಸಂಚು ರೂಪಿಸಿದ್ದರು.
ಬ್ಯಾಡರಹಳ್ಳಿಗೆ ಹೋಗುವ ರಸ್ತೆ ಮಧ್ಯೆದಲ್ಲಿ ಮರದ ಪಟ್ಟಿಗೆ ಉದ್ದವಾದ 50ಕ್ಕೂ ಹೆಚ್ಚು ಮೊಳೆ ಚುಚ್ಚಿ ರಸ್ತೆಗೆ ಇಟ್ಟು ಹುಲ್ಲು ಮುಚ್ಚಿದ್ದರು. ಇದ್ಯಾವುದನ್ನೂ ತಿಳಿಯದ ಲೋಕೇಶ ಎಂದಿನಂತೆ ಹಾಲು ಅಳೆಸಿಕೊಂಡು ಗುರುವಾರ ರಾತ್ರಿ 8.30ರ ಸುಮಾರಿಗೆ ಮಹೀಂದ್ರಾ ಜಿತೋ ವಾಹನದಲ್ಲಿ ತೆರಳುತ್ತಿದ್ದ ವೇಳೆ ರಸ್ತೆಯಲ್ಲಿ ಚಕ್ರಕ್ಕೆ ಮೊಳೆ ಸಿಕ್ಕಿ ವಾಹನ ಪಂಚರ್ ಆಗಿದೆ. ತಕ್ಷಣವೇ ಕೆಳಗಿಳಿದು ಮೊಳೆ ಹೊಡೆದಿದ್ದ ಮರದ ಪಟ್ಟಿಯನ್ನು ವಾಹನಕ್ಕೆ ಹಾಕಿಕೊಂಡ ಲೋಕೇಶ್ ಸ್ನೇಹಿತ ತಮ್ಮಯ್ಯ ಎಂಬುವವರಿಗೆ ಕರೆ ಮಾಡಿ ವಾಹನ ಪಂಚರ್ ಆಗಿರುವುದನ್ನು ತಿಳಿಸಿ, ಬೇಗ ಸ್ಥಳಕ್ಕೆ ಬರಲು ಹೇಳಿ ವಾಹನದಲ್ಲಿ ಕುಳಿತಿದ್ದರು.
ನೌಕರಿಗೆ ಹೋದ ಹೆಂಡತಿಯ ನಡವಳಿಕೆ ಬದಲಾಯ್ತು: ಪತ್ನಿ ಬಗ್ಗೆ ಕನಸು ಕಂಡವನು ನೇಣಿಗೆ ಶರಣಾದ!
ಈ ವೇಳೆ ಏಕಾಏಕಿ ದಾಳಿ ನಡೆಸಿದ ಅರುಣ್ ಮತ್ತು ಸಂಗಡಿಗರು ಲೋಕೇಶನ ಕಣ್ಣಿಗೆ ಖಾರದಪುಡಿ ಎರಚಿ ಮಾರಕಾಸ್ತ್ರಗಳಿಂದ ಸಾಯುವವರೆಗೂ ಮನಬಂದಂತೆ ಕೊಚ್ಚಿ, ಪರಾರಿಯಾಗಿದ್ದಾರೆ.
ಗಂಡನ ಕೊಲೆಯಾಗಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ಸವಿತಾ ಕುಸಿದು ಬಿದ್ದಂತೆ ನಾಟಕವಾಡಿದ್ದಳು. ಸವಿತಾ ಮುಖಕ್ಕೆ ನೆರೆಹೊರೆಯವರು ನೀರು ಚುಮುಕಿಸಿದರೂ ಅರ್ಧಗಂಟೆ ಮೇಲೆಳೆದ ಭಾರೀ ನಾಟಕವಾಡಿದ್ದಳು. ಲೋಕೇಶ ಸಹೋದರಿಯರು ಹಾಗೂ ಗ್ರಾಮಸ್ಥರ ಮಾಹಿತಿ ಮೇರೆಗೆ ಸವಿತಾಳನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾಗ ಈ ಸತ್ಯ ಹೊರಬಿದ್ದಿದೆ. ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಉಳಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.