8 ಪೊಲೀಸರ ಹತ್ಯೆಗೈದ ರೌಡಿ ಶೀಟರ್ ದುಬೆ ಆಪ್ತ ಎನ್‌ಕೌಂಟರ್‌ಗೆ ಬಲಿ!
ಉತ್ತರ ಪ್ರದೇಶದ ಎಂಟು ಮಂದಿ ಪೊಲೀಸರನ್ನು ಹತ್ಯೆಗೈದಿದ್ದ ವಿಕಾಸ್ ದುಬೆ ಆಪ್ತ ಎನ್‌ಕೌಂಟರ್‌ಗೆ ಬಲಿ| ವಿಕಾಸ್ ದುಬೆ ನೆರಳೆಂದೇ ಕರೆಸಿಕೊಳ್ಳುತ್ತಿದ್ದ ಅಮರ್ ದುಬೆ ಬಲಿ| ಪೊಲೀಸರ ಎಫ್‌ಐಆರ್‌ನಲ್ಲೂ ಇತ್ತು ಅಮರ್ ಹೆಸರು
ಲಕ್ನೋ(ಜು.08): ಉತ್ತರ ಪ್ರದೇಶದ ಕಾನ್ಪುರದಲ್ಲಿ ಎಂಟು ಮಂದಿ ಪೊಲೀಸರ ಹತ್ಯೆಗೈದು ಪರಾರಿಯಾಗಿದ್ದ ವಿಕಾಸ್ ದುಬೆ ನೆರಳೆಂದೇ ಬಣ್ಣಿಸಲಾಗುತ್ತಿದ್ದ ಆಪ್ತ ಅಮರ್ ದುಬೆ ಎನ್‌ಕೌಂಟರ್‌ಗೆ ಬಲಿಯಾಗಿದ್ದಾನೆ.
ಇಂದು ಮುಂಜಾನೆ ಹಮೀರ್‍ಪುರ್ ಜಿಲ್ಲೆಯಲ್ಲಿ ವಿಶೇಷ ಕಾರ್ಯಪಡೆ(ಎಸ್‍ಟಿಎಫ್) ನಡೆಸಿದ ಎನ್‌ಕೌಂಟರ್‌ನಲ್ಲಿ ರೌಡಿ ಶೀಟರ್ ವಿಕಾಸ್ ದುಬೆ ಆಪ್ತ ಅಮರ್ ದುಬೆ ಬಲಿಯಾಗಿದ್ದಾನೆ. ಇನ್ನು ಈಗಾಗಲೇ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಅಮರ್ ಹೆಸರು ಕೂಡಾ ಉಲ್ಲೇಖವಾಗಿತ್ತು ಎಂಬುವುದು ಉಲ್ಲೇಖನೀಯ.
8 ಪೊಲೀಸರ ಕೊಂದ ದುಬೆಗೆ ಪೊಲೀಸರೇ ಮಾಹಿತಿದಾರರು!
ಇನ್ನು ಈಗಾಗಲೇ ಹರ್ಯಾಣದ ಫರಿದಾಬಾದ್‌ನ ಹೋಟೆಲಿನಲ್ಲಿ ಅವಿತಿದ್ದ ವಿಕಾಸ್ ದುಬೆ ಸಹಚರರಾಗಿದ್ದ ಮೂವರನ್ನು ಬಂಧಿಸಿಲಾಗಿದೆ. ಅಲ್ಲದೆ ಶಂಕಿತರ ಬಳಿಯಿಂದ ಆಯುಧ ಹಾಗೂ ಮದ್ದುಗುಂಡುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಪೊಲೀಸರ ತಂಡ 60 ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ ವಿಕಾಸ್ ದುಬೆಯನ್ನು ಬಂಧಿಸಲೆಂದು ಖಚಿತ ಮಾಹಿತಿ ಮೇರೆಗೆ ಜುಲೈ 2ರಂದು ರಾತ್ರಿ ದಿಕ್ರು ಗ್ರಾಮಕ್ಕೆ ತೆರಳಿತ್ತು. ಈ ವಿಚಾರ ಮೊದಲೇ ತಿಳಿದಿದ್ದ ವಿಕಾಸ್ ದುಬೆ ಬೆಂಬಲಿಗರು ರಸ್ತೆಗೆ ಅಡ್ಡಲಾಗಿ, ಕಲ್ಲು ಹಾಗೂ ಇಟ್ಟಿಗೆಗಳನ್ನು ಇಟ್ಟಿದ್ದರು. ಇದನ್ನು ತೆರವುಗೊಳಿಸಿ ಪೊಲೀಸರು ದುಬೆ ಅವಿತಿದ್ದ ಮನೆಯತ್ತ ಆಗಮಿಸುತ್ತಿದ್ದರು.
ನನ್ನ ಮಗನನ್ನು ಕೊಂದು ಬಿಡಿ; 8 ಪೊಲೀಸರಿಗೆ ಗುಂಡಿಕ್ಕಿದ ವಿಕಾಸ್ ದುಬೆಗೆ ಕ್ಷಮೆ ಇಲ್ಲ ಎಂದ ತಾಯಿ!
ಆದರೆ ಈ ವೇಳೆ ವಿಕಾಸ್ ಸಹಚರರು ಪೊಲೀಸರ ಮೇಲೆ ಗುಂಡಿನ ಮಳೆ ಸುರಿಸಿದ್ದಾರೆ. ಪರಿಣಾಮ ಡಿವೈಎಸ್ಪಿ ದೇವೇಂದ್ರ ಮಿಶ್ರಾ, ಮೂವರು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳು ಹಾಗೂ 4 ಪೊಲೀಸರು ಹೀಗೆ ಒಟ್ಟು ಎಂಟು ಮಂದಿ ಮೃತಪಟ್ಟಿದ್ದರು. ಇದೇ ಸಂದರ್ಭದಲ್ಲಿ ದುಬೆ ಬೆಂಬಲಿಗರು ಪೊಲೀಸರ ಬಳಿಯಿದ್ದ ಎಕೆ-47 ರೈಫಲ್ ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ದಿದ್ದರು.