ಉತ್ತರ ಪ್ರದೇಶ(ಜು.04): ನಟೊರಿಯಸ್ ರೌಡಿ ವಿಕಾಸ್ ದುಬೆ ಮನೆ ಮೇಲೆ ದಾಳಿ ಮಾಡಿ ಸೆರೆ ಹಿಡಿಯಲು ಹೋದ ಪೊಲೀಸರಿಗೆ ಆಘಾತ ಕಾದಿತ್ತು. ಡಿಎಸ್‌ಪಿ ಸೇರಿದಂತೆ 8 ಪೊಲೀಸರ ಮೇಲೆ ಗುಂಡಿ ಹಾರಿಸಿ ವಿಕಾಸ್ ದುಬೆ ಪರಾರಿಯಾಗಿದ್ದ. 8 ಪೊಲೀಸರ ಹತ್ಯೆ ಮಾಡಿದ ವಿಕಾಸ್ ದುಬೆಯನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಲು ಉತ್ತರ ಪ್ರದೇಶದಲ್ಲಿ ಒತ್ತಾಯ ಕೇಳಿ ಬರುತ್ತಿದೆ. ಇದರ ಬೆನ್ನಲ್ಲೇ ವಿಕಾಸ್ ದುಬೆ ತಾಯಿ, ನನ್ನ ಮಗನಿಗೆ ಯಾವುದೇ ಕ್ಷಮೆ ಇಲ್ಲ, ಆತನನ್ನು ಕೊಂದು ಬಿಡಿ ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.

ಹಿಡಿಯಲು ಬಂದ 8 ಜನ ಪೊಲೀಸರನ್ನೇ ಹತ್ಯೆ ಮಾಡಿದ ರೌಡಿ ವಿಕಾಸ್ ದುಬೆ! ಯಾರೀತ.

ನನ್ನ ಮಗ ವಿಕಾಸ್ ತಕ್ಷಣವೇ ಪೊಲೀಸರಿಗೆ ಶರಣಾಗಬೇಕು. ಇಲ್ಲವಾದಲ್ಲಿ ಪೊಲೀಸರೇ ಎನ್‌ಕೌಂಟರ್ ಮಾಡಲಿದ್ದಾರೆ. ಒಂದು ವೇಳೆ ಪೊಲೀಸರು ಆತನನ್ನು ಹಿಡಿದರೆ ನಿರ್ದಯವಾಗಿ ಕೊಂದು ಬಿಡಿ. ಆತ ಕಠಿಣ ಶಿಕ್ಷೆ ಅರ್ಹ ಎಂದು ರೌಡಿಶೀಟರ್ ವಿಕಾಸ್ ದುಬೆ ತಾಯಿ ಸರಳಾ ದೇವಿ ಹೇಳಿದ್ದಾರೆ.

ಅಮಾಯಕ ಪೊಲೀಸರನ್ನು ಹತ್ಯೆ ಮಾಡಿರುವುದು ಕ್ಷಮಿಸಲಾರದ ತಪ್ಪು. ಎನ್‌ಕೌಂಟರ್ ಕುರಿತ ಸುದ್ದಿಯನ್ನು ನೋಡಿದ ನನಗೆ ತೀವ್ರ ಬೇಸರವಾಗಿದೆ. ಮಗನನ್ನು ಎನ್‌ಕೌಂಟರ್ ಮಾಡುವುದೇ ಸೂಕ್ತ ಎಂದು ಸರಳಾ ದೇವಿ ಆಗ್ರಹಿಸಿದ್ದಾರೆ.

ರಾಜಕೀಯ ಮುಖಂಡರ ಪರಿಚಯದ ಬಳಿಕ ವಿಕಾಸ್ ದುಬೆ ಕ್ರೈಂ ಲೋಕದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ರಾಜನಾಥ್ ಸಿಂಗ್ ಸರ್ಕಾರದಲ್ಲಿದ್ದ  ಸಚಿವ ಸಂತೋಶ್ ಶುಕ್ಲಾರನ್ನು ಗಂಡಿಕ್ಕಿ ಹತ್ಯೆ ಮಾಡಿದ್ದಾನೆ. ಚುನಾವಣೆಗೆ ನಿಲ್ಲಲು ತಯಾರಿ ಮಾಡಿಕೊಳ್ಳುತ್ತಿದ್ದ. ಮಗನಿಂದ ನಮ್ಮ ಕುಟುಂಬಕ್ಕೆ ಸಮಸ್ಯೆಯಾಗುತ್ತಿದೆ. ಮನೆಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ ಎಂದು ಸರಳಾ ದೇವಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಕಳೆದ ನಾಲ್ಕು ತಿಂಗಳಿನಿಂದ ನಾನು ವಿಕಾಸ್ ದುಬೆಯನ್ನು ಬೇಟಿಯಾಗಿಲ್ಲ. ಕಿರಿಯ ಪುತ್ರನೊಂದಿಗೆ ಲಕ್ನೋದಲ್ಲಿ ವಾಸವಿದ್ದೇನೆ ಎಂದು ಸರಳಾ ದೇವಿ ಹೇಳಿದ್ದಾರೆ.