ತೋಕಸಂದ್ರ ಗ್ರಾಮದ ಸರ್ಕಾರಿ ಆಸ್ಪತ್ರೆಯ ಮಹಿಳಾ ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಹೊರಗುತ್ತಿಗೆ ನೌಕರನನ್ನು ಸಾರ್ವಜನಿಕರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಮಹಿಳೆಯೊಬ್ಬರ ಸಮಯಪ್ರಜ್ಞೆಯಿಂದ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಹಾರೋಹಳ್ಳಿ: ಸರ್ಕಾರಿ ಆಸ್ಪತ್ರೆಯ ಶೌಚಾಲಯದೊಳಗೆ ರಹಸ್ಯವಾಗಿ ಕ್ಯಾಮೆರಾ ಇಟ್ಟು ಮಹಿಳೆಯರ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಆಘಾತಕಾರಿ ಘಟನೆ ತೋಕಸಂದ್ರ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದ್ದು ಆರೋಪಿಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಅದೇ ಸರ್ಕಾರಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಳೆದ ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಶ್ರೀಧರ್ ಎಂಬ ಕಾಮುಕನೇ ಬಂಧಿತ ಆರೋಪಿ.
ಘಟನೆ ಬಯಲಿಗೆ ಬಂದಿದ್ದು ಹೇಗೆ?
ಮಹಿಳೆಯೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಪತಿಯೊಂದಿಗೆ ಬಂದಿದ್ದರು.ಈ ವೇಳೆ ಶೌಚಾಲಯಕ್ಕೆ ಹೋಗಿದ್ದ ಮಹಿಳೆಗೆ ಅಲ್ಲಿ ರಹಸ್ಯ ಕ್ಯಾಮೆರಾ ಇಟ್ಟಿರುವುದು ಕಣ್ಣಿಗೆ ಬಿದ್ದಿದೆ. ಇದರಿಂದ ಆ ಕ್ಷಣ ಬೆಚ್ಚಿಬಿದ್ದ ಮಹಿಳೆ ಪತಿಯ ಬಳಿ ಹೋಗಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪತಿ ಶೌಚಾಲಯದಲ್ಲಿ ಪರಿಶೀಲಿಸಿದಾಗ ಅಲ್ಲಿ ಕ್ಯಾಮೆರಾ ಇಟ್ಟಿರುವುದು ಬಯಲಿಗೆ ಬಂದಿದೆ.
ಮಹಿಳಾ ರೋಗಿಗಳ ಮೇಲೆ ಕಾಮುಕನ ವಿಕೃತಿ
ಆಸ್ಪತ್ರೆಯಲ್ಲಿ ಹೊರಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದ ಆರೋಪಿ ಶ್ರೀಧರ್ ಆಸ್ಪತ್ರೆಗೆ ಬರುವ ಮಹಿಳಾ ರೋಗಿಗಳೇ ಟಾರ್ಗೆಟ್. ಚಿಕಿತ್ಸೆ ಬರುವ ರೋಗಿಗಳ ಶೌಚಾಕ್ಕೆ ಹೋದ ರಹಸ್ಯವಾಗಿ ವಿಡಿಯೋ ರೆಕಾರ್ಡ್ ಆಗುತ್ತಿದ್ದು ಯಾರ ಗಮನಕ್ಕೂ ಬಂದಿರಲಿಲ್ಲ. ಆದರೀಗ
ಮಹಿಳೆ ನೀಡಿದ ಮಾಹಿತಿಯ ಮೇರೆಗೆ ಆಕೆಯ ಪತಿ ಹಾಗೂ ಆಸ್ಪತ್ರೆ ಸಿಬ್ಬಂದಿ ವೈದ್ಯರ ಗಮನಕ್ಕೆ ತಂದಿದ್ದಾ ಶೌಚಾಲಯ ಪರಿಶೀಲಿಸಿದಾಗ ಕಾಮುಕನ ಕೃತ್ಯ ಬಯಲಾಗಿದೆ.
ಸಾರ್ವಜನಿಕರಿಂದ ಧರ್ಮದೇಟು
ಘಟನೆಯಿಂದ ಕೋಪಗೊಂಡ ಸಾರ್ವಜನಿಕರು ಕಾಮುಕ ಶ್ರೀಧರ್‌ನನ್ನು ಹಿಡಿದ ಧರ್ಮದೇಟು ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಆರೋಪಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದು ಘಟನೆ ಸಂಬಂಧ ಆರೋಪಿ ವಿರುದ್ಧ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕ್ಯಾಮೆರಾದಲ್ಲಿ ಎಷ್ಟು ವಿಡಿಯೋಗಳು ದಾಖಲಾಗಿವೆ, ಅವುಗಳನ್ನು ಎಲ್ಲಿಗೆ ಕಳುಹಿಸಲಾಗಿದೆ, ಮತ್ತಾರಾದರೂ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರಿದಿದೆ.
ಮಹಿಳೆಯರ ಸುರಕ್ಷತೆ ಬಗ್ಗೆ ಮತ್ತೆ ಆತಂಕ
ಇತ್ತೀಚೆಗೆ ಇಂಥ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಶಾಲೆ, ಕಾಲೇಜು, ಹಾಸ್ಟೆಲ್, ಸಾರ್ವಜನಿಕ ಶೌಚಾಲಯ, ಆಸ್ಪತ್ರೆ ಹೀಗೆ ಮಹಿಳೆಯರು ಸುರಕ್ಷಿತ ಎಂದು ಭಾವಿಸುವ ಸ್ಥಳಗಳಲ್ಲಿಯೇ ಇಂತಹ ಘಟನೆಗಳು ಮರುಕಳಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ತೋಕಸಂದ್ರ ಸರ್ಕಾರಿ ಆಸ್ಪತ್ರೆಯ ಈ ಘಟನೆ ಮಹಿಳೆಯರ ಖಾಸಗಿತನ ಮತ್ತು ಸುರಕ್ಷತೆ ಗಂಭೀರ ಪ್ರಶ್ನೆಗಳು ಎತ್ತಿದೆ.


