* ಗ್ರಾಮೀಣ ಭಾಗದಲ್ಲಿ ಕೌಟುಂಬಿಕ ದೌರ್ಜನ್ಯ ಹೆಚ್ಚಳ* ಮಹಿಳಾ ಆಯೋಗದ ಮಾಹಿತಿಯಿಂದ ಬಯಲು* ನಗರ ಪ್ರದೇಶಕ್ಕೆ ಹೋಲಿಸಿದರೆ ಗ್ರಾಮೀಣ ಭಾಗದಲ್ಲೇ ಹೆಚ್ಚು

ವರದಿ: ಮಾರುತೇಶ್ ಹುಣಸನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು

ಬೆಂಗಳೂರು, (ಮಾ.19): ಎಲ್ಲಾ ಕ್ಷೇತ್ರಗಳಲ್ಲೂ ಪುರುಷರಿಗೆ ಸರಿಸಮಾನವಾಗಿ ಮಹಿಳೆಯರು ಮುಂದೆ ಬರುತ್ತಿದ್ದರೂ, ಅವರ ಮೇಲೆ ದೌರ್ಜನ್ಯ, ಶೋಷಣೆ ನಿಂತಿಲ್ಲ. ಇದರಿಂದಾಗಿ ಕೌಟುಂಬಿಕ ಕಲಹಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. 

ಹೌದು... ನಗರ ಪ್ರದೇಶಕ್ಕೆ ಹೋಲಿಸಿದರೆ ಗ್ರಾಮೀಣ ಭಾಗದಲ್ಲೇ ಮಹಿಳೆಯರ ಮೇಲೆ ಕೌಟುಂಬಿಕ ದೌರ್ಜನ್ಯ ನಡೆಯುತ್ತಿದೆ ಎನ್ನುವುದು ಮಹಿಳಾ ಆಯೋಗದ ಮಾಹಿತಿಯಿಂದ ಬಯಲಾಗಿದೆ.

Bizarre News: ಪತ್ನಿಗೆ ಅದೇ ಇಲ್ಲ.. ಡೀವೋರ್ಸ್‌ ಕೊಡಿ ಪ್ಲೀಸ್..ಸುಪ್ರೀಂ ಮೆಟ್ಟಿಲೇರಿದ ಗಂಡ!

ಮಹಿಳಾ ಆಯೋಗದಲ್ಲಿ ದಾಖಲಾಗಿರುವ ಪ್ರಕರಣಗಳ ಮಾಹಿತಿ ನೋಡಿದಾಗ ಗ್ರಾಮೀಣ ಪ್ರದೇಶದಲ್ಲಿ ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಹೆಚ್ಚು ದಾಖಲಾಗಿದೆ. ಇನ್ನು ನಗರ ಪ್ರದೇಶದಲ್ಲಿ ಲಿವಿಂಗ್ ರಿಲೇಷನ್ ಶಿಪ್, ಲವ್ ಅಫೆರ್, ಸೈಬರ್ ಕ್ರೈಂ ನಂತಹ ಪ್ರಕರಣಗಳು ಹೆಚ್ಚು ದಾಖಲಾಗಿವೆ. ಈ ಕುರಿತು ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಮಾಹಿತಿ ನೀಡಿದ್ದಾರೆ 

ಕಳೆದ‌ ಎರಡು ವರ್ಷದಿಂದ ಈ ತನಕ ಮಹಿಳಾ ಆಯೋಗದಲ್ಲಿ 4,692 ದೂರುಗಳನ್ನ ಸ್ವೀಕೃತಿಯಾಗಿದೆ. ಇದರಲ್ಲಿ 1,890 ಪ್ರಕರಣಗಳು ಇತ್ಯರ್ಥವಾಗಿ ಮುಕ್ತಾಯಗೊಂಡದ್ದು, ಬಾಕಿ 2,802 ದೂರುಗಳು ಚಾಲ್ತಿಯಲ್ಲಿ ಇವೆ. ಮಹಿಳಾ ಆಯೋಗಕ್ಕೆ ರಕ್ಷಣೆ ಕೋರಿ ಬಂದ ಪ್ರಕರಣಗಳೇ ಹೆಚ್ಚಾಗಿವೆ. ಆಸ್ತಿ ವಿವಾದದಿಂದ ಹಿಡಿದು ಕೆಲಸದ ಸ್ಥಳದಲ್ಲಿ ಕಿರುಕುಳ ಆದಾಗ ಮಹಿಳೆಯರು ರಕ್ಷಣೆ ಕೋರಿ ಅಯೋಗದ ಮೆಟ್ಟಿಲೇರಿದ್ದಾರೆ.

 ಖಾಸಗಿ ಕಂಪನಿಗಳಿಗೆ ನೋಟಿಸ್
ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ, ಅಧಿನಿಯಮ 2013ರ ಅನ್ವಯ ಸರ್ಕಾರಿ/ಖಾಸಗಿ ಕಛೇರಿಗಳಲ್ಲಿ ಆಂತರಿಕ ದೂರು ಸಮಿತಿಯನ್ನು ರಚಿಸುವುದು ಹಾಗೂ ಜಿಲ್ಲಾ ಮಟ್ಟದಲ್ಲಿ, ಸ್ಥಳೀಯ ದೂರು ಸಮಿತಿಯನ್ನು ರಚಿಸುವುದು ಕಡ್ಡಾಯವಾಗಿದೆ. ಈಗಾಗಲೇ 401 ಸರ್ಕಾರಿ ಕಛೇರಿಗಳಲ್ಲಿ, 1198 ಖಾಸಗಿ ಸಂಸ್ಥೆಗಳಲ್ಲಿ ಆಂತರಿಕ ದೂರು ಸಮಿತಿ ರಚನೆ ಆಗಿದೆ. 

ಒಟ್ಟು 31 ಜಿಲ್ಲೆಗಳಲ್ಲಿ ಸ್ಥಳೀಯ ದೂರು ಸಮಿತಿಯನ್ನು ರಚಿಸಲಾಗಿದ್ದು, 98 ಇಲಾಖೆಗಳಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಈಗಾಗಲೇ 5 ಸಾವಿರ ಕಂಪನಿಗಳಿಗೆ ಆಂತರಿಕ ದೂರು ಸಮಿತಿ ರಚಿಸಲು ಮಹಿಳಾ ಆಯೋಗ ಪತ್ರ ಬರೆದಿದೆ. ಆದರಂತೆ ಸುಮಾರು 1198 ಕಂಪನಿಯಿಂದ ಆಂತರಿಕ ದೂರು ಸಮಿತಿ ರಚಿಸಿರುವ ಬಗ್ಗೆ ಮಹಿಳಾ ಆಯೋಗ ಮಾಹಿತಿ ನೀಡಿದೆ. ಉಳಿದ ಸಂಸ್ಥೆಗಳಿಗೂ ಸಮಿತಿ ರಚಿಸುವಂತೆ ಸೂಚನೆ ನೀಡಲಾಗಿದೆ.

ಅಷ್ಟಕ್ಕೂ ಕೌಟುಂಬಿಕ ದೌರ್ಜನ್ಯ ಎಂದರೇನು?
ಒಂದು ಕುಟುಂಬ ವ್ಯವಸ್ಥೆಯಲ್ಲಿ ಮದುವೆಯ ನಂತರ ಅಥವಾ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಯ ಮೇಲೆ ನಡೆವ ಹಿಂಸೆಯನ್ನೇ ಕೌಟುಂಬಿಕ ದೌರ್ಜನ್ಯ ಎಂದು ಕರೆಯಲಾಗುತ್ತದೆ. ಉದಾ: ಒಬ್ಬ ಮಹಿಳೆಯ ಮೇಲೆ ವರದಕ್ಷಿಣೆಗಾಗಿ ಆಕೆಯ ಪತಿ ಮತ್ತು ಕುಟುಂಬದ ಇನ್ನಿತರರು ಮಾನಸಿಕ ಮತ್ತು ದೈಹಿಕವಾಗಿ ನಡೆಸುವ ಹಿಂಸೆ. ನೇರಳೆ ಬಣ್ಣದ ರಿಬ್ಬನ್ ಕೌಟುಂಬಿಕ ದೌರ್ಜನ್ಯ ತಡೆಯ ಸಂಕೇತ.

ಯಾವ್ಯಾವ ಪ್ರಕರಣಗಳು ಎಷ್ಟೆಷ್ಟು?
ಪ್ರಕರಣ- ಸ್ವೀಕೃತಿ- ಮುಕ್ತಾಯ- ಚಾಲ್ತಿ 

1) ಕೌಟುಂಬಿಕ ದೌರ್ಜನ್ಯ- 1070-330-740
2) ರಕ್ಷಣೆ- 1337-736-601
3) ವರದಕ್ಷಿಣಿ ಕಿರುಕುಳ- 227-41-186
4) ಲೈಂಗಿಕ ಕಿರುಕುಳ- 62- 17- 45
5) ಕೆಲಸದ ಸ್ಥಳದಲ್ಲಿ ಕಿರುಕುಳ- 200-34-166
6) ಪ್ರೇಮ ಪ್ರಕರಣ- 77-19-58
7) ಆಸ್ತಿ ವಿವಾದ- 160-82-78
8) ಪೊಲೀಸ್ ದೌರ್ಜನ್ಯ- 154-39-115
9) ಹಣ ವಂಚನೆ- 91-56-35
10) ಇತರೆ- 1230-515-715

2005 ರ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ
ಭಾರತದಲ್ಲಿ ದೌರ್ಜನ್ಯಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಭಾರತ ಸರ್ಕಾರ 2005 ರಲ್ಲಿ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯನ್ನು ಜಾರಿಗೆ ತಂದಿತ್ತು.
ಈ ಕಾಯ್ದೆಯ ಪ್ರಕಾರ ಕಾನೂನು ಮಗಿಳೆಗೆ ಈ ಕೆಳಗಿನಂತೆ ನ್ಯಾಯ ನೀಡಬಹುದು.
* ಗಂಡನ ಮನೆಯಿಂದ ಹೊರಬರದೆ, ಅಲ್ಲಿಯೇ ಉಳಿಯಲು ಹೇಳಬಹುದು, ಮತ್ತು ಆಕೆಯ ಮೇಲೆ ದೌರ್ಜನ್ಯ ನಡೆಸದಂತೆ ಎಚ್ಚರಿಕೆ ನೀಡಬಹುದು.
* ಒಂದು ವೇಳೆ ದೌರ್ಜನ್ಯಕ್ಕೊಳಗಾದ ಮಹಿಳೆಗೆ ಗಂಡನ ಆಸ್ತಿಯಲ್ಲಿ ಪಾಲಿಲ್ಲದಿದ್ದರೂ ಮನೆಯ ಒಂದು ಭಾಗವನ್ನು ಆಕೆಗೆ ನೀಡುವಂತೆ ಹೇಳುವುದು.
* ಆಕೆಯನ್ನು ಮನೆಯಿಂದ ಹೊರಹಾಕುವಂತಿಲ್ಲ ಮತ್ತು ಆಕೆಗೆ ಉದ್ಯೋಗ ಸ್ಥಳದಲ್ಲೂ ತೊಂದರೆ ನೀಡುವಂತಿಲ್ಲ
* ಆರೋಪಿ ದೌರ್ಜನ್ಯಕ್ಕೊಳಗಾದ ವ್ಯಕ್ತಿಗೆ ಯಾವುದೇ ರೀತಿಯ ದೂರವಾಣಿ ಕರೆ, ಮೌಖಿಕವಾಗಿ, ಲಿಖಿತವಾಗಿ, ವಿದ್ಯುನ್ಮಾನ ಮಾಧ್ಯಮದ ಮೂಲಕ ಸಂದೇಶ ಕಳಿಸುವುದನ್ನು ನಿಷೇಧಿಸಬಹುದು.
* ತಿಂಗಳ ಜೀವನಾಂಶ ಕೇಳಬಹುದು. ಮತ್ತು ದೌರ್ಜನ್ಯದಿಂದ ಉಂಟಾದ ನಷ್ಟ ಮತ್ತು ತೊಂದರೆಗಳಿಗೆ ಪರಿಹಾರ ನೀಡುವುದು.
* ದೌರ್ಜನ್ಯದಿಂದ ಮಾನಸಿಕ, ಭಾವನಾತ್ಮಕ ಒತ್ತಡ ಉಂಟಾಗಿದ್ದರೆ ಪರಿಹಾರ ಕೇಳಬಹುದು.
* ಈ ಕಾನೂನಿನಡಿ ಕಾನೂನುಬಾಹಿರ ಕೃತ್ಯ ಎಸಗಿದ್ದರೆ 1 ವರ್ಷ ಸೆರೆವಾಸದ ಶಿಕ್ಷೆ ಮತ್ತು 20,000 ರೂ.ವರೆಗೆ ದಂಡ ವಿಧಿಸಬಹುದು.