ವಿಜಯಪುರ ಜಿಲ್ಲೆಯ ಹಲಸಂಗಿ ಗ್ರಾಮದಲ್ಲಿ, ಮುಸುಕುಧಾರಿ ದರೋಡೆಕೋರರು ನಡುಹಗಲೇ ಚಿನ್ನದಂಗಡಿಗೆ ನುಗ್ಗಿ ಗನ್ ಪಾಯಿಂಟ್‌ನಲ್ಲಿ ದರೋಡೆ ನಡೆಸಿದ್ದಾರೆ. ಗಾಳಿಯಲ್ಲಿ ಗುಂಡು ಹಾರಿಸಿ, ವಿಡಿಯೋ ಮಾಡುತ್ತಿದ್ದ ಯುವಕನ ಕಾಲಿಗೆ ಗುಂಡಿಕ್ಕಿ, 205 ಗ್ರಾಂ ಚಿನ್ನ ಹಾಗೂ 1 ಕೆ.ಜಿ ಬೆಳ್ಳಿ ದೋಚಿ ಪರಾರಿಯಾಗಿದ್ದಾರೆ.
ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್ ವಿಜಯಪುರ
ವಿಜಯಪುರ (ಜ.26) ಚಿನ್ನದ ದರ ಗಗನ ಮುಖಿಯಾಗ್ತಿದ್ದಂತೆ, ಖದೀಮರ ಕಣ್ಣು ಈಗ ಚಿನ್ನದಂಗಡಿಗಳ ಮೇಲೆ ಬಿದ್ದಿದೆ. ಗ್ರಾಮೀಣ ಪ್ರದೇಶಗಳ ಚಿನ್ನದಂಗಡಿ ದರೋಡೆ ಮಾಡೋದು ಸುಲಭ ಎನ್ನುವ ಕಾರಣಕ್ಕೋ ಏನೋ ಹಳ್ಳಿಗಳಲ್ಲಿರೋ ಸಣ್ಣಪುಟ್ಟ ಚಿನ್ನದಂಗಡಿಗಳನ್ನ ಟಾರ್ಗೆಟ್ ಮಾಡಿ ಖದೀಮರು ಹೆದರಿಸಿ ಬೆದರಿಸಿ ಚಿನ್ನ ದೋಚುತ್ತಿದ್ದಾರೆ.. ಅದ್ರಲ್ಲು ಭೀಮಾತೀರದ ಕುಖ್ಯಾತಿಗೆ ಪಾತ್ರವಾಗಿರೋ ವಿಜಯಪುರ ಜಿಲ್ಲೆಯಲ್ಲು ಇಂಥದ್ದೆ ಸಿನಿಮೀಯ ರೀತಿಯಲ್ಲಿ ಚಿನ್ನದಂಗಡಿ ದರೋಡೆ ಮಾಡಲಾಗಿದೆ...

ಗನ್ ಪಾಯಿಂಟ್‌ನಲ್ಲಿ ಚಿನ್ನ ದರೋಡೆ ; ಬೆಚ್ಚಿ ಬೀಳಿಸಿದ ದೃಶ್ಯ..!
ಈಗ 24 ಕ್ಯಾರೆಟ್ ಚಿನ್ನದ ದರ 1.60 ಗಡಿಯನ್ನ ದಾಟಿದೆ. ಬೆನ್ನಲ್ಲೆ ಈಗ ಕಳ್ಳ ಖದೀಮರ ಕಣ್ಣು ಚಿನ್ನದ ಮೇಲೆ ಬಿದ್ದಿದೆ. ಚಿನ್ನದ ದರ ಏರಿಕೆಯಾದ ಬಳಿಕ ರಾಜ್ಯದ ಮೂಲೆ ಮೂಲೆಯಲ್ಲು ಚಿನ್ನ ದರೋಡೆ, ಸರಗಳ್ಳತನದಂತ ಪ್ರಕರಣಗಳೇ ಹೆಚ್ಚಾಗ್ತಿವೆ. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ಚಿನ್ನದಂಗಡಿಯನ್ನೆ ಖದೀಮರು ಲೂಟಿ ಮಾಡಿದ್ದಾರೆ. ಮಟಮಟ ಮಧ್ಯಾಹ್ನ ಕಯ್ಯಲ್ಲಿ ಗನ್ ಹಿಡಿದು ಮಹಾರುದ್ರ ಕಂಚಗಾರ್ ಎಂಬುವರ ಅಂಗಡಿಗೆ ನುಗ್ಗಿದ ಇಬ್ಬರು ಮುಸುಕುಧಾರಿಗಳು ಅಂಗಡಿಯಲ್ಲಿನ ಚಿನ್ನವನ್ನೆಲ್ಲ ದೋಚಿದ್ದಾರೆ. ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ್ದಾರೆ.

ವಿಡಿಯೋ ಮಾಡ್ತಿದ್ದವನ ಬಲ ಮೊಳಕಾಲಿಗೆ ಬಿತ್ತು ಗುಂಡು..!
ಈ ವೇಳೆ ದರೋಡೆ ದೃಶ್ಯ ಸೆರೆ ಹಿಡಿಯಬೇಕು ಎಂದು ಮೊಬೈಲ್ ಹಿಡಿದು ನಿಂತಿದ್ದ ಆತ್ಮಲಿಂಗ ಹೂಗಾರ್ ಎಂಬಾತನ ಬಲಗಾಲಿಗೂ ಗುಂಡು ಬಿದ್ದಿದ್ದು, ಆತನನ್ನ ಬಿಎಲ್ಡಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನೂ ದರೋಡೆಯ ಭಯಾನಕ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಗುರುತು ಮರೆಮಾಚಿ ದರೋಡೆ, ಹೆಲ್ಮೆಟ್, ಬ್ಲೌಜ್ ಬಳಕೆ..!
ಇನ್ನೂ ದರೋಡೆಗೆ ಬಂದವರು ಗುರುತು ಪತ್ತೆಯಾಗದಿರಲಿ ಎಂದು ತಲೆಗೆ ಹೆಲ್ಮೆಟ್, ಕಪ್ಪು ಬಣ್ಣದ ಜಾಕೇಟ್ ಧರಿಸಿದ್ದರು, ಪಿಂಗರ್ ಪ್ರಿಂಟ್ ಸಹ ಮೂಡದಂತೆ ಕೈಗೆ ಬ್ಲೌಜ್ ಧರಿಸಿದ್ದರು. ದರೋಡೆಗೆ ಕಪ್ಪು ಬಣ್ಣದ ಯುನಿಕಾರ್ನ್ ಬೈಕ್ ಬಳಕೆ ಮಾಡಿದ್ದಾರೆ. ಅಂಗಡಿಗೆ ನುಗ್ಗಿದವರು ಮೊದಲು ಸ್ಥಳೀಯರನ್ನ ಗನ್ ತೋರಿಸಿ ಹೆದರಿಸಿದ್ದಾರೆ.

205 ಗ್ರಾಂ ಚಿನ್ನ ; 1 ಕೆ.ಜಿ ಬೆಳ್ಳಿ ದರೋಡೆ ..!
ಅಜ್ಜಿಯೊಬ್ಬಳಿಗೆ ಗನ್ ತೋರಿಸುವ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನೂ ಪ್ರಾಥಮಿಕ ತನಿಖೆಯಲ್ಲಿ 205 ಗ್ರಾಂ ಚಿನ್ನಾಭರಣ, ಒಂದು ಕೆ.ಜಿ ಬೆಳ್ಳಿಯನ್ನ ದರೋಡೆ ಮಾಡಿರೋದು ಬೆಳಕಿಗೆ ಬಂದಿದೆ. ಸಿಸಿಕ್ಯಾಮರಾದಲ್ಲಿ ಸಿಕ್ಕಿರೋ ದೃಶ್ಯಗಳನ್ನ ಆಧಾರವಾಗಿಟ್ಟುಕೊಂಡು ಪೊಲೀಸರು ದರೋಡೆಕೋರರ ಬೆನ್ನಟ್ಟಿದ್ದಾರೆ.
ಗಡಿ ಗ್ರಾಮಗಳು ಟಾರ್ಗೆಟ್ ಮಹಾರಾಷ್ಟ್ರಕ್ಕೆ ಪರಾರಿ ಶಂಕೆ..!
ಇನ್ನೂ ದರೋಡೆಕೋರರು ಚಿನ್ನದೋಚಿ ಮಹಾರಾಷ್ಟ್ರದ ಕಡೆಗೆ ಪರಾರಿಯಾಗಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಹಲಸಂಗಿ ಗಡಿ ಗ್ರಾಮವಾಗಿದ್ದು ನೆರೆಯ ಮಹಾರಾಷ್ಟ್ರದಿಂದ ಬಂದ ದರೋಡೆಕೋರರೆ ಕೃತ್ಯ ನಡೆಸಿರೋ ಶಂಕೆ ಇದೆ..
ಸಿಸಿಟಿವಿ ಆಧರಿಸಿ ತನಿಖೆಗೆ ಇಳಿದ ಖಾಕಿ ಪಡೆ..!
ಘಟನಾ ಸ್ಥಳಕ್ಕೆ ಎಸ್ಪಿ ಲಕ್ಷ್ಮಣ ನಿಂಬರಗಿ, ಎಎಸ್ಪಿ ರಾಮನಗೌಡ ಹಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಗಳನ್ನ ಆಧರಿಸಿ ತನಿಖೆಗೆ ಇಳಿದಿದ್ದಾರೆ. ಈ ಕುರಿತು ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..


