Asianet Suvarna News Asianet Suvarna News

Vijayanagara News: ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕ ಕಿಡ್ನಾಪ್: ಸಿನಿಮೀಯ ಶೈಲಿಯಲ್ಲಿ ಅಪಹರಣಕಾರರ ಬಂಧನ

Vijayanagara News: ಮನೆಯ ಮುಂದೆ ಆಟವಾಡುತ್ತಿರೋ ಮಗುವೊಂದನ್ನು ಕಿಡ್ನಾಪ್ ಮಾಡಿದ ಬಳಿಕ ಹಣದ ಬೇಡಿಕೆ ಇಟ್ಟ ಕಳ್ಳರನ್ನು ಸಿನಿಮೀಯ ಶೈಲಿಯಲ್ಲಿ ಪೊಲೀಸರು ಬಂಧಿಸಿದ್ದಾರೆ 

Vijayanagara Boy kidnapped for Rs 15 lakh ransom rescued by police in Cinema Style mnj
Author
Bengaluru, First Published Jul 6, 2022, 7:09 PM IST

ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಮಂಡ್ಯ 

ವಿಜಯನಗರ  (ಜು. 06): ಮನೆಯ ಮುಂದೆ ಆಟವಾಡುತ್ತಿರೋ ಮಗುವೊಂದನ್ನು ಕಿಡ್ನಾಪ್ ಮಾಡಿದ ಬಳಿಕ ಹಣದ ಬೇಡಿಕೆ ಇಟ್ಟ ಕಳ್ಳರನ್ನು ಸಿನಿಮೀಯ ಶೈಲಿಯಲ್ಲಿ ಪೊಲೀಸರು ಬಂಧಿಸಿರೋ ಘಟನೆ ವಿಜಯನಗರ (Vijaya Nagara) ಜಿಲ್ಲೆಯ ಹಗರಿಬೊಮ್ಮನ (Hagaribommanahalli) ಹಳ್ಳಿ ಪಟ್ಟಣದಲ್ಲಿ ನಡೆದಿದೆ. ಕಿಡ್ನಾಪ್ ಆದ ಮಗುವನ್ನು ಪೊಲೀಸರು ರೋಚಕ ಕಾರ್ಯಾಚರಣೆ ಮೂಲಕ ನಾಲ್ಕಾರು ತಾಸಿನಲ್ಲಿ ಪೋಷಕರ ಮಡಿಲು ಸೇರುವಂತೆ ಮಾಡಿದ್ದಾರೆ. ಇದಕ್ಕಾಗಿ ಪೊಲೀಸರು ಹಾಕಿರೋ ಪ್ಲಾನ್ ಮಾತ್ರ ಯಾವುದೇ ಸಿನಿಮಾ ಸ್ಟೋರಿಗಿಂತಲೂ ಕಡಿಮೆ ಇಲ್ಲದಂತಿದೆ.   
 
ಚಾಕ್ಲೇಟ್ ಆಸೆ ತೋರಿಸಿ ಬಾಲಕ ಕಿಡ್ನಾಪ್:  ಹಗರಿಬೊಮ್ಮನ ಹಳ್ಳಿಯಲ್ಲಿ ಮೆಡಿಕಲ್ ಸ್ಟೋರ್ (Medical Sore) ಇಟ್ಟುಕೊಂಡು ಜೀವನ ಮಾಡುತ್ತಿದ್ದ ಅನುಷಾ ಮತ್ತು ರಾಘವೇಂದ್ರ ದಂಪತಿಗಳಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಓರ್ವ (ಅದ್ವಿಕ್ ) ಮಗನಿದ್ದಾನೆ. ಇನ್ನೊಬ್ಬರಿಗೆ ಕೊಡುವಷ್ಟು ಇಲ್ಲದೇ ಇದ್ದರೂ ಇದ್ದದ್ರಲ್ಲಿ ಉತ್ತಮವಾಗಿರೋ ಕುಟುಂಬ. 

ಇತ್ತೀಚೆಗೆ  ಅನುಷಾ ಮತ್ತು ರಾಘವೇಂದ್ರ ದಂಪತಿಗಳು ಕುಟುಂಬ ಸಮೇತರಾಗಿ ಬಾಡಿಗೆ ಕಾರಿನಲ್ಲಿ ಮಂತ್ರಾಲಯಕ್ಕೆ ಹೋಗಿ ಬಂದಿದ್ದರು. ಆಗ ಚಾಲಕನಾಗಿ ಬಂದಿದ್ದ ವ್ಯಕ್ತಿ ಕುಟುಂಬದ ಸ್ಥಿತಿಗತಿ ಮತ್ತು ಮಗುವಿಗೆ ಚಾಕ್ಲೇಟ್ ಮೇಲಿರೋ ವ್ಯಾಮೋಹವನ್ನು ಕಂಡುಕೊಂಡಿದ್ದನು ಎನ್ನಲಾಗಿದೆ. 

ಇದನ್ನೂ ಓದಿ: ನವವಿವಾಹಿತೆ ಕಿಡ್ನಾಪ್‌ ಕೇಸ್‌: ಹುಬ್ಬಳ್ಳಿ-ಧಾರವಾಡ ಪಾಲಿಕೆ ಸದಸ್ಯ ಚೇತನ್‌ ಸೇರಿ ಮೂವರ ಬಂಧನ

ಮನೆಯ ಮುಂದೆ ಆಟವಾಡುತ್ತಿದ್ದಾಗ ಚಾಕ್ಲೆಟ್ ಆಸೆ ತೋರಿಸಿ ಮಗುವನ್ನು ಸಂಜೆಯ ವೇಳೆ ಚಾಲಕ ಸೇರಿ ಇತರರು ಕಿಡ್ನಾಪ್ ಮಾಡಿದ್ದರು. ಬಳಿಕ ಪೋಷಕರಿಗೆ ಪೋನ್ ಮಾಡಿ ಹದಿನೈದು ಲಕ್ಷ ಡಿಮ್ಯಾಂಡ್ ಮಾಡಿದ್ದರು. ಆದ್ರೇ, ಇದಕ್ಕೆ ಒಪ್ಪದ ಪೋಷಕರು ಹತ್ತು ಸಾವಿರವಷ್ಟೇ ನಮಗೆ ಕೋಡೋಕೆ ಆಗೋದು ಎಂದಿದ್ದಾರೆ. ಇದಕ್ಕೆ ಒಪ್ಪದೇ ಕಿಡ್ನಾಪರ್ಗಳು ಸಂಧಾನ ಮಾಡಿಕೊಂಡು ಕೊನೆಗೆ ಮೂರು ಲಕ್ಷಕ್ಕೆ ಒಪ್ಪಿಕೊಂಡಿದ್ದಾರೆ.
 
ಪೋಲಿಸರ ಪ್ಲಾನ್ ಯಶಸ್ವಿ: ಇನ್ನೂ ಒಂದು ಕಡೆ ಅಪಹರಣಕಾರರು ಹೇಳಿದಂಗೆ ಕೇಳಿದ ಪೋಷಕರು, ಮತ್ತೊಂದು ಕಡೆ ಪೊಲೀಸರಿಗೆ ಎಲ್ಲ ರೀತಿಯ ಮಾಹಿತಿ ಯನ್ನು ನೀಡಿದ್ದಾರೆ. ಇದಕ್ಕೆ ಪೋಲಿಸರು ಭರ್ಜರಿ ಪ್ಲಾನ್ ಮಾಡಿದ್ದಾರೆ. ಅಪಹರಣಕಾರರು ಹೇಳಿದ ಹೊಲವೊಂದರಲ್ಲಿ ಅಪಹರಣಕಾರರು ಬರೋದಕ್ಕೂ ಮುಂಚೆಯೇ ಸರಿಸುಮಾರು ರಾತ್ರಿ ಹನ್ನೊಂದು ಗಂಟೆ ವೇಳೆಗೆ ಹೊಲ ಕಾಯುವ ಕಾವಲುಗಾರರಂತೆ ಪೋಲಿಸರು ಕಾಯುತ್ತಾ ಕುಳಿತಿದ್ದಾರೆ. 

ಇತ್ತ ಪೋಷಕರು ಅಪಹರಣಕಾರರು ಹೇಳಿದ ಮೊರಗೇರೆ ಕ್ರಾಸ್ ಬಳಿ ಇರೋ ಹೊಲದ ಬಳಿ ಹೋಗಿ ಹಣವನ್ನು ನೀಡಲು ಮುಂದಾದಾಗ ದಿಢಿರನೇ ಪೊಲೀಸರು ದಾಳಿ ಮಾಡಿ ಮಗುವನ್ನು ಸೇಫ್ ಮಾಡೋದ್ರ ಜೊತೆ ಅಪಹರಣಕಾರರನ್ನು  ಬಂಧಿಸಿದ್ದಾರೆ. ಈ ಮೂಲಕ ಯಾವುದೇ ಅನಾಹುತವಾಗದೇ ಅಪಹರಣ ಪ್ರಕರಣವೊಂದು ಸುಖಾಂತ್ಯ ಕಂಡಿದೆ.

ಪರಿಚಯಸ್ಥರೇ ಸೇರಿ ಮಾಡಿರೋ ಕಿಡ್ನಾಪ್  ಪ್ಲಾನ್ ಫೇಲ್:‌ ಇನ್ನೂ ಆರೋಪಿಗಳಾದ ಅಲ್ಲಾಭಕ್ಷಿ, ಚನ್ನಬಸವ, ರಮೇಶ್, ಬಸವರಾಜ್‌  ಕೊಟ್ರೇಶ್, ರವಿ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇದರಲ್ಲಿ ಓರ್ವ ಡ್ರೈವರ್  ರವಿ ಮಾತ್ರ  ಪೋಷಕರಿಗೆ ಪರಿಚಯಸ್ಥನಾಗಿದ್ದು, ಉಳಿದಂತೆ ಎಲ್ಲರೂ ಸೇರಿ ಈ ಅಪಹರಣದ ಪ್ಲಾನ್ ಮಾಡಿದ್ದಾರೆ.  ಆದರೆ,  ಆರೋಪಿಗಳು ಮಾಡಿದ ಯಡವಟ್ಟು ಮಾತ್ರ ಪೊಲೀಸರಿಗೆ ಲಾಭದಾಯಕವಾಗಿದೆ. 

ಇದನ್ನೂ ಓದಿ: ಆಂಧ್ರದ ರೈಲು ನಿಲ್ದಾಣದಿಂದ ಕುಟುಂಬಸ್ಥರೆದುರೇ ಗರ್ಭಿಣಿಯ ಅಪಹರಣ, ಗ್ಯಾಂಗ್‌ರೇಪ್

ಹಗರಿಬೊಮ್ಮನ ಹಳ್ಳಿಯಲ್ಲಿಯೇ ಇದ್ದ ಖದೀಮರು ಬೆಂಗಳೂರಿನವರಂತೆ ಮಾತನಾಡಿರೋದು ಮತ್ತು ಕೂಡಲೇ ಮೊರಗೇರಿ ಕ್ರಾಸ್ ಬಳಿ ಇರೋ ಹೊಲಕ್ಕೆ ಬನ್ನಿ ಎಂದು ಹೇಳಿದಾಗ ಇವರೆಲ್ಲರೂ ಹಗರಿಬೊಮ್ಮನ ಹಳ್ಳಿಯವರೇ ಎಂದು ಪೊಲೀಸರಿಗೆ ಗೊತ್ತಾಗಿತ್ತು. ಇದನ್ನೆ ಅಸ್ತ್ರವಾಗಿಟ್ಟುಕೊಂಡ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ ಜೊತೆಗೆ  ಆರೋಪಿಗಳಿಂದ 7 ಮೊಬೈಲ್, ಎರಡು ಬೈಕ್ ಜಪ್ತಿ ಮಾಡಿದ್ದಾರೆ.  ಪ್ರಕರಣವೆಲ್ಲವೂ ಸುಖ್ಯಾಂತ ಕಂಡಿದ್ದು ಕೇವಲ ಹಣಕ್ಕಾಗಿ ನಡೆದ ಅಪಹರಣವೋ ಮತ್ತೇನಾದ್ರೂ ಬೇರೆ ವಿಷಯ ಇದೆಯೋ ಎಂಬ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆಂದು ವಿಜಯನಗರ ಎಸ್ಪಿ ಅರುಣ್ ತಿಳಿಸಿದ್ದಾರೆ.

Follow Us:
Download App:
  • android
  • ios