* ಆಂಧ್ರಪ್ರದೇಶದ ರೈಲು ನಿಲ್ದಾಣದಲ್ಲಿ ಕುಕೃತ್ಯ* ಗರ್ಭಿಣಿ ಮಹಿಳೆಯ ಎಳೆದೊಯ್ದು ಅತ್ಯಾಚಾರ* ನಿಲ್ದಾಣದಲ್ಲಿ ಅಧಿಕಾರಿಗಳೂ ಮಾಯ
ಅಮರಾವತಿ(ಮೇ.02): ಆಂಧ್ರ ಪ್ರದೇಶದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವೊಂದು ಮುನ್ನೆಲೆಗೆ ಬಂದಿದೆ. ರೈಲು ನಿಲ್ದಾಣದಲ್ಲಿ ಗರ್ಭಿಣಿ ಮಹಿಳೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ. ವಾಸ್ತವವಾಗಿ, ಪ್ರಕಾಶಂ ಜಿಲ್ಲೆಯ ಯರ್ರಗೊಂಡ ಪ್ರದೇಶದಲ್ಲಿ ವಾಸಿಸುವ ಮಹಿಳೆ ತನ್ನ ಪತಿ ಮತ್ತು ಮಕ್ಕಳೊಂದಿಗೆ ರಾತ್ರಿ ರೈಲು ನಿಲ್ದಾಣ ತಲುಪಿದ್ದಾರೆ. ರಾತ್ರಿಯಾದ ಕಾರಣ ಅವರಿಗೆ ನಿಲ್ದಾಣದಿಂದ ಹೋಗಲು ಬಸ್ಸು ಸಿಗಲಿಲ್ಲ. ಹೀಗಾಗಿ ರೈಲ್ವೇ ನಿಲ್ದಾಣದಲ್ಲೇ ಮಲಗಿದ್ದಾರೆ.
ಹೀಗಿರುವಾಗ ಮೂರು ಕುಡುಕರು ಅವರ ಬಳಿಗೆ ಬಂದಿದ್ದಾರೆ. ಬಳಿಕ ಮಹಿಳೆಯ ಪತಿಗೆ ಸಾಕಷ್ಟು ಥಳಿಸಿದ್ದಾರೆ. ತದನಂತರ ಮೂವರು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಮಹಿಳೆಯ ಪತಿ ಅಲಾರಾಂ ಒತ್ತಿ ರೈಲ್ವೆ ಪೊಲೀಸರ ಸಹಾಯ ಪಡೆಯಲು ಪ್ರಯತ್ನಿಸಿದರು, ಆದರೆ ಅವರಿಗೆ ಯಾವುದೇ ಸಹಾಯ ಸಿಗಲಿಲ್ಲ. ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪ್ರಾಪ್ತ ವಯಸ್ಕ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಶನಿವಾರ ಮತ್ತು ಭಾನುವಾರದ ಮಧ್ಯರಾತ್ರಿ ಕುಟುಂಬವು ಗುಂಟೂರಿನಿಂದ ಕೃಷ್ಣಾ ಜಿಲ್ಲೆಗೆ ಕೆಲಸ ಹುಡುಕಿಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.
ದುಷ್ಕರ್ಮಿಗಳು ಪತಿ ಮೇಲೆ ಹಲ್ಲೆ ನಡೆಸಿದ್ದರು. ಈ ವೇಳೆ ಪತ್ನಿ ಮಧ್ಯಪ್ರವೇಶಿಸಿದ್ದು, ಕೋಪಗೊಂಡ ಕಾಮುಕರು ರೇಪಲ್ಲೇ ನಿಲ್ದಾಣದಿಂದ ಮಹಿಳೆಯನ್ನು ಕರೆದುಕೊಂಡು ಹೋಗಿದ್ದಾರೆ. ಈ ನಿಲ್ದಾಣ ರಾಜ್ಯದ ರಾಜಧಾನಿ ಅಮರಾವತಿಯಿಂದ ಸುಮಾರು 80 ಕಿ.ಮೀ. ದೂರದಲ್ಲಿದೆ. ಹೀಗಾಗಿ ಮಹಿಳೆಯ ಪತಿ ಓಡಿಹೋಗಿ ರೈಲ್ವೇ ಪೊಲೀಸರ ಸಹಾಯ ಪಡೆಯಲು ಪ್ರಯತ್ನಿಸಿದ್ದಾರೆ. ಆದರೆ ನಿಲ್ದಾಣದಲ್ಲಿ ಯಾವುದೇ ಅಧಿಕಾರಿ ಪತ್ತೆಯಾಗಲಿಲ್ಲ. ನಂತರ ಸಮೀಪದ ಪೊದೆಯಲ್ಲಿ ಮಹಿಳೆ ಪತ್ತೆಯಾಗಿದ್ದು, ಆಕೆಯನ್ನು ವೈದ್ಯಕೀಯ ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಂಧ್ರಪ್ರದೇಶದಲ್ಲಿ ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ದಿಶಾ ಯೋಜನೆಯಡಿ ಸರ್ಕಾರವು ತ್ವರಿತ ತನಿಖೆ, ವಿಚಾರಣೆ ಮತ್ತು ಶಿಕ್ಷೆಯನ್ನು ನಡೆಸುತ್ತಿರುವ ಸಮಯದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.
ಆಟೋದಲ್ಲಿ ತೆರಳುತ್ತಿದ್ದ ಯುವತಿ ಮೇಲೆ ಅತ್ಯಾಚಾರ
ಆಟೋದಲ್ಲಿ ತೆರಳುತ್ತಿದ್ದ ವೇಳೆ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಾಡಹಗಲೇ ಅತ್ಯಾಚಾರವೆಸಗಿರುವ ಅಮಾನವೀಯ ಘಟನೆ ಯಾದಗಿರಿಯಲ್ಲಿ ನಡೆದಿದೆ. ಈ ಅಮಾನವೀಯ ಘಟನೆ ಏ.26 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಆಟೋ ಜಪ್ತಿ ಮಾಡಿ, ಚಾಲಕ ಹನುಮಂತ್ ಹೊಸಳ್ಳಿ ಮತ್ತು ಆತನ ಸ್ನೇಹಿತ ನರಸಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಕೆಲಸಕ್ಕೆಂದು ಯುವತಿ ತಾಂಡಾದಿಂದ ಯಾದಗಿರಿಗೆ ಆಟೋದಲ್ಲಿ ತೆರಳುತ್ತಿದ್ದ ವೇಳೆ ಡೀಸೆಲ್ ಹಾಕಿಸಿಕೊಂಡು ಬಂದು ಬಿಡುವುದಾಗಿ ನಗರದ ಹೊರವಲಯಕ್ಕೆ ಕರೆದೊಯ್ದ ಆರೋಪಿಗಳು, ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಅಲ್ಲದೇ ವಿಡಿಯೋ ರೆಕಾರ್ಡ್ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ.
