ಅಕ್ರಮ ಮರಳು ದಂಧೆಗೆ ಉಳ್ಳಾಲ ತಾಲೂಕು ಆಡಳಿತ ಸಾಥ್: ಸಿಸಿಟಿವಿ ಒಡೆದರೂ ದಾಖಲಾಗಿಲ್ಲ ದೂರು!
ದ.ಕ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆಗೆ ಬ್ರೇಕ್ ಹಾಕಲು ಜಿಲ್ಲಾಧಿಕಾರಿ ಮತ್ತು ಕೆಲ ಉನ್ನತ ಮಟ್ಟದ ಅಧಿಕಾರಿಗಳು ಕಠಿಣ ಕ್ರಮಗಳನ್ನು ಕೈಗೊಂಡರೂ ಕೆಳ ಮಟ್ಟದ ಅಧಿಕಾರಿಗಳು ಮಾತ್ರ ಇನ್ನೂ ಮರಳು ದಂಧೆಕೋರರಿಗೆ ಸಾಥ್ ನೀಡುತ್ತಿರುವುವುದರ ಪರಿಣಾಮ ಉಳ್ಳಾಲ, ಸೋಮೇಶ್ವರ ಭಾಗದಲ್ಲಿ ಮರಳು ಅಕ್ರಮ ದಂಧೆಕೋರರ ಅಟ್ಟಹಾಸ ಮುಂದುವರೆದಿದೆ.
ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು
ಮಂಗಳೂರು (ಸೆ.12) : ದ.ಕ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆಗೆ ಬ್ರೇಕ್ ಹಾಕಲು ಜಿಲ್ಲಾಧಿಕಾರಿ ಮತ್ತು ಕೆಲ ಉನ್ನತ ಮಟ್ಟದ ಅಧಿಕಾರಿಗಳು ಕಠಿಣ ಕ್ರಮಗಳನ್ನು ಕೈಗೊಂಡರೂ ಕೆಳ ಮಟ್ಟದ ಅಧಿಕಾರಿಗಳು ಮಾತ್ರ ಇನ್ನೂ ಮರಳು ದಂಧೆಕೋರರಿಗೆ ಸಾಥ್ ನೀಡ್ತಾ ಇದ್ದು, ಪರಿಣಾಮ ಉಳ್ಳಾಲ, ಸೋಮೇಶ್ವರ ಭಾಗದಲ್ಲಿ ಮರಳು ಅಕ್ರಮ ದಂಧೆಕೋರರ ಅಟ್ಟಹಾಸ ಮುಂದುವರೆದಿದೆ.
ಅಕ್ರಮ ಮರಳು ದಂಧೆ; ಕಣ್ಣು ಮುಚ್ಚಿ ಕುಳಿತ ಜಿಲ್ಲಾಡಳಿತ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ!
ಕಳೆದ ಶುಕ್ರವಾರ ಮಧ್ಯರಾತ್ರಿ ಹೊತ್ತಿಗೆ ಜಿಲ್ಲಾಡಳಿತ ಅಳವಡಿಸಿದ್ದ ಸಿಸಿಟಿವಿ(CCTV)ಕ್ಯಾಮಾರಗಳನ್ನೇ ಮರಳು ದಂಧೆಕೋರರು(Sand traders) ಪುಡಿ ಗಟ್ಟಿದ್ದು, ಘಟನೆ ನಡೆದು ಮೂರು ದಿನ ಕಳೆದರೂ ಅಧಿಕಾರಿ ವರ್ಗ ಪೊಲೀಸ್ ದೂರು ನೀಡದೇ ಇರೋದು ಭಾರೀ ಅನುಮಾನಕ್ಕೆ ಕಾರಣವಾಗಿದೆ. ಇದು ಮಂಗಳೂರಿ(Mangaluru)ನಲ್ಲಿ ಅಕ್ರಮ ಮರಳು ದಂಧೆ(Illegal sand trade)ಕೋರರ ಜೊತೆ ಅಧಿಕಾರಿಗಳು ಶಾಮೀಲಾದ್ರಾ ಎಂಬ ಅನುಮಾನಕ್ಕೆ ಕಾರಣವಾಗಿದೆ.
ಸಿಸಿಟಿವಿ ಪುಡಿಗೈದ ಮರಳು ಲೂಟಿಕೋರರ ವಿರುದ್ದ ಇನ್ನೂ ಪ್ರಕರಣ ದಾಖಲಾಗದೇ ಇದ್ದು, ಅಕ್ರಮ ದಂಧೆಕೋರರ ವಿರುಧ್ಧ ಪೊಲೀಸ್ ದೂರು ನೀಡಲು ಅಧಿಕಾರಿಗಳು ಮೀನಾಮೇಷಾ ಎಣಿಸುತ್ತಿದ್ದಾರೆ. ಮಂಗಳೂರು ಹೊರವಲಯದ ಸೋಮೇಶ್ವರ(Someshwara) ಬಳಿ ಸಿಸಿಟಿವಿ ಕ್ಯಾಮರಾ ಪುಡಿಗೈದು ದಾಂಧಲೆ ಮಾಡಿರೋ ಮರಳು ದಂಧೆಕೋರರು, ಮರಳು ಲಾರಿ ಡಿಕ್ಕಿ ಹೊಡೆಸಿ ಸಿಸಿಟಿವಿ ಕ್ಯಾಮೆರಾ ಪುಡಿಗೈದಿದ್ದಾರೆ. ಕಳೆದ ಶುಕ್ರವಾರ ಮಧ್ಯರಾತ್ರಿ ಸೋಮೇಶ್ವರದಲ್ಲಿ ಘಟನೆ ನಡೆದಿದ್ದು, ಉಳ್ಳಾಲ ತಹಶೀಲ್ದಾರ್(Tahsildar) ಮತ್ತು ಸೋಮೇಶ್ವರ ಗ್ರಾಮದ ಗ್ರಾಮಕರಣಿಕರ ಶಾಮೀಲಾತಿ ಆರೋಪ ವ್ಯಕ್ತವಾಗಿದೆ.
ಮೂರು ದಿನ ಕಳೆದರೂ ಪೊಲೀಸ್ ದೂರು ನೀಡದ ಅಧಿಕಾರಿಗಳು ಮರಳು ದಂಧೆಕೋರರ ಜೊತೆ ನೇರ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಯಾವುದೇ ದೂರು ಬಂದಿಲ್ಲ ಅಂತ ಉಳ್ಳಾಲ ಪೊಲೀಸರು ಕೈಕಟ್ಟಿ ಕುಳಿತಿದ್ದಾರೆ. ಅಲ್ಲದೇ ಸೋಮೇಶ್ವರ ಪುರಸಭೆ(Someshwar Municipality) ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದರೂ ಅಧಿಕಾರಿಗಳು ಗಪ್ ಚುಪ್ ಆಗಿದ್ದಾರೆ.
ಮರಳು ದಂಧೆ ಸರಾಗ: ಹೇಳೋರಿಲ್ಲ, ಕೇಳೋರಿಲ್ಲ!
ಸೋಮೇಶ್ವರ ಸಮುದ್ರ(Sea) ತೀರದಿಂದ ನಿರಂತರವಾಗಿ ಮರಳು ಕಳ್ಳತನ ನಡೀತಾ ಇದ್ದು, ಮರಳು ಕಳ್ಳತನ ತಡೆಯಲು ಹಾಕಿದ್ದ ಸಿಸಿಟಿವಿ ಮತ್ತು ತಂತಿ ತಡೆ ಬೇಲಿ ಧ್ವಂಸಗೈದು ಅಟ್ಟಹಾಸ ಮೆರೆಯಲಾಗಿದೆ. ಸೋಮೇಶ್ವರ ಸಮುದ್ರ ತೀರ, ಕೋಟೆಪುರ(Kotepura), ತಲಪಾಡಿ(Talapadi) ಇನ್ನಿತರ ಪ್ರದೇಶಗಳಲ್ಲಿ ಮರಳುಗಳ್ಳತನ ನಡೀತಾ ಇದೆ. ಹೀಗಾಗಿ ಜಿಲ್ಲಾಡಳಿತದಿಂದ ಇಂಟರ್ನೆಟ್(Internet) ಆಧಾರಿತ ಸಿಸಿಟಿವಿ ಗಳನ್ನು ಅಳವಡಿಕೆ ಮಾಡಲಾಗಿತ್ತು. ಆದರೆ ಸೆ.10 ರ ನಸುಕಿನ 1ರಿಂದ ಎರಡು ಗಂಟೆ ಸುಮಾರಿಗೆ ಧ್ವಂಸಗೈಯ್ಯಲಾಗಿದೆ. ಸೋಮೇಶ್ವರ ದೇವಸ್ಥಾನದ ರಥ ಬೀದಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಇದಾಗಿದ್ದು, ಟಿಪ್ಪರ್ ಹಿಮ್ಮುಖವಾಗಿ ಚಲಾಯಿಸಿ ಧ್ವಂಸಗೈಯ್ಯಲಾಗಿದೆ. ಅದಕ್ಕೂ ಮುನ್ನ ಮುಖಕ್ಕೆ ಬಟ್ಟೆ ಕಟ್ಟಿ ಹಾನಿಗೈಯಲು ವಿಫಲ ಯತ್ನ ನಡೆದಿತ್ತು.
ಅಕ್ರಮ ಮರಳುಗಾರಿಕೆ, ಕಲ್ಲು ಗಣಿಗಾರಿಕೆ ತಡೆಯಿರಿ: ಸಚಿವ ಹಾಲಪ್ಪ ಆಚಾರ್
ನದಿಗೂ ಕನ್ನ, ಸಮುದ್ರಕ್ಕೂ ಕನ್ನ!
ದ.ಕ ಜಿಲ್ಲೆ(Dakshina Kannada)ಯಲ್ಲಿ ನದಿಯ ಮರಳನ್ನು ಲೂಟಿ ಮಾಡುವುದರ ಜೊತೆಗೆ ಕೆಲ ದುರುಳರು ಸಮುದ್ರದ ಮರಳಿಗೂ ಕನ್ನ ಹಾಕುತ್ತಿದ್ದಾರೆ. ರಾತ್ರಿ ಹೊತ್ತಲ್ಲಿ ಭಾರೀ ದೊಡ್ಡ ಪ್ರಮಾಣದಲ್ಲಿ ಮರಳು ದಂಧೆ ನಡೆಸಲಾಗ್ತಿದೆ. ಈ ದಂಧೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಚೇಲಾಗಳೂ ಇದ್ದು, ಕೇರಳ(Kerala)ಕ್ಕೆ ಮರಳು ಸಾಗಾಟ ಆಗ್ತಿದೆ. ಜಿಲ್ಲಾಧಿಕಾರಿಗಳು ದೂರು ಬಂದಾಗ ಅಧಿಕಾರಿಗಳ ಸಭೆ ಕರೆದು ಕೆಲ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದರೂ ಕೆಲ ಮಟ್ಟದ ಅಧಿಕಾರಿಗಳು ಮಾತ್ರ ಮರಳು ದಂಧೆಗೆ ಪರೋಕ್ಷ ಸಾಥ್ ನೀಡ್ತಾ ಇದಾರೆ. ಇದಕ್ಕೆ ಸ್ಥಳೀಯ ಪೊಲೀಸರು ಕೂಡ ಬೆಂಬಲವಾಗಿ ನಿಂತಿದ್ದು, ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ದಂಧೆ ಅವ್ಯಾಹತವಾಗಿ ನಡೆದರೂ ಪೊಲೀಸರು ಮಾತ್ರ ಅಕ್ರಮಕ್ಕೆ ಸಾಥ್ ಕೊಟ್ಟಿರೋ ಅನುಮಾನ ವ್ಯಕ್ತವಾಗಿದೆ.