ಬೆಂಗಳೂರು(ಅ.09): ತನ್ನ ಸ್ನೇಹಿತೆ ಮನೆಯಲ್ಲೇ ಚಿನ್ನಾಭರಣ ಕಳವು ಮಾಡಿದ್ದ ಮಹಿಳೆ ಹಾಗೂ ಆಕೆಯ ಸ್ನೇಹಿತನನ್ನು ಶ್ರೀರಾಮಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶ್ರೀರಾಂಪುರದ ಶಶಿಕಲಾ ಹಾಗೂ ಆಕೆಯ ಗೆಳೆಯ ಪ್ರಶಾಂತ್‌ ಬಂಧಿತರಾಗಿದ್ದು, ಆರೋಪಿಗಳಿಂದ 12 ಲಕ್ಷ ಮೌಲ್ಯದ 200 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಕುಶಲೋಪರಿ ವಿಚಾರಿಸುವ ನೆಪದಲ್ಲಿ ಗೆಳತಿ ಭಾಗ್ಯಲಕ್ಷ್ಮೀ ಮನೆಗೆ ಹೋಗಿ ಆರೋಪಿ ಕಳ್ಳತನ ಕೃತ್ಯ ಎಸಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ರಾಮಚಂದ್ರಪುರದ ಭಾಗ್ಯಲಕ್ಷ್ಮೀ ಮನೆ ಹತ್ತಿರದಲ್ಲೇ ಬಟ್ಟೆ ಅಂಗಡಿ ಇಟ್ಟಿದ್ದಾರೆ. ಬಟ್ಟೆ ಖರೀದಿಗೆ ಬಂದಿದ್ದಾಗ ಭಾಗ್ಯಲಕ್ಷ್ಮೀಗೆ ಶಶಿಕಲಾ ಪರಿಚಯವಾಗಿತ್ತು. ಬಳಿಕ ಆತ್ಮೀಯತೆ ಬೆಳೆದಿತ್ತು. ಈ ಗೆಳೆತನದ ಹಿನ್ನೆಲೆಯಲ್ಲಿ ಭಾಗ್ಯಲಕ್ಷ್ಮೀ ಮನೆಗೆ ಆರೋಪಿ ಶಶಿಕಲಾ ಹೋಗಿದ್ದಳು. ಆಗ ಗೆಳತಿಗೆ ಚಹಾ ನೀಡಿ ಸತ್ಕರಿಸಿದ್ದರು. 

ದೇವದುರ್ಗ: ಮುಂಡರಗಿ ಶಿವರಾಯ ದೇವಸ್ಥಾನಕ್ಕೆ ಕನ್ನ ಹಾಕಿದ ಖದೀಮರು

ಈ ವೇಳೆ ಭಾಗ್ಯಲಕ್ಷ್ಮೀ ಅವರಿಗೆ ಗೊತ್ತಾಗದಂತೆ ಆಭರಣವನ್ನು ಶಶಿಕಲಾ ಎಗರಿಸಿದ್ದಳು. ಬಳಿಕ ಆ ಒಡವೆಯನ್ನು ಭಾಗ್ಯಲಕ್ಷ್ಮೀ ಪಕ್ಕದ ಮನೆಯಲ್ಲಿರುವ ತನ್ನ ಸ್ನೇಹಿತ ಪ್ರಶಾಂತ್‌ನ ಮನೆಯಲ್ಲಿ ಬಚ್ಚಿಟ್ಟಿದ್ದಳು. ಯಾರಿಗೂ ಗೊತ್ತಾಗದ ರೀತಿಯಲ್ಲಿ ಮಾರಾಟ ಮಾಡಿಸಿಕೊಟ್ಟರೆ, ಅರ್ಧ ಪಾಲು ಕೊಡುವುದಾಗಿ ಪ್ರಶಾಂತ್‌ಗೆ ಹೇಳಿದ್ದಳು. ಕೃತ್ಯಕ್ಕೆ ಸಹಕರಿಸಿದ ಆರೋಪದ ಮೇಲೆ ಪ್ರಶಾಂತ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.