Asianet Suvarna News Asianet Suvarna News

ಕೊಪ್ಪಳದ ಕನಕಗಿರಿ ತಾಲೂಕಿನಲ್ಲಿ ಗುಂಪು ಘರ್ಷಣೆ: ಇಬ್ಬರ ಸಾವು

ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿ ಇಬ್ಬರು ಮೃತಪಟ್ಟಘಟನೆ ತಾಲೂಕಿನ ಹುಲಿಹೈದರ್‌ ಗ್ರಾಮದಲ್ಲಿ ಗುರುವಾರ ನಡೆದಿದೆ. ಯಂಕಪ್ಪ ತಳವಾರ (50) ಹಾಗೂ ಪಾಷಾವಲಿ ಮಾಳಿಗದ್ದಿ (27) ಘರ್ಷಣೆಯಲ್ಲಿ ಮೃತಪಟ್ಟವರು. 

two killed in communal clashes in hulihaidar village of Kanakagiri at koppal gvd
Author
Bangalore, First Published Aug 12, 2022, 3:30 AM IST

ಕನಕಗಿರಿ (ಆ.12): ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿ ಇಬ್ಬರು ಮೃತಪಟ್ಟಘಟನೆ ತಾಲೂಕಿನ ಹುಲಿಹೈದರ್‌ ಗ್ರಾಮದಲ್ಲಿ ಗುರುವಾರ ನಡೆದಿದೆ. ಯಂಕಪ್ಪ ತಳವಾರ (50) ಹಾಗೂ ಪಾಷಾವಲಿ ಮಾಳಿಗದ್ದಿ (27) ಘರ್ಷಣೆಯಲ್ಲಿ ಮೃತಪಟ್ಟವರು. ಬೆಳಗ್ಗೆ 9ಗಂಟೆ ಸುಮಾರಿಗೆ ಗ್ರಾಮದ ವಾಲ್ಮೀಕಿ ವೃತ್ತದ ಬಳಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು ಕಲ್ಲು ತೂರಾಟವಾಗಿದೆ. 

ಈ ಸಂದರ್ಭದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲು ಕೊಂಡೊಯ್ಯುತ್ತಿದ್ದಾಗಲೇ ಗಂಭೀರವಾಗಿ ಗಾಯಗೊಂಡಿದ್ದ ಪಾಷಾವಲಿ ಹಾಗೂ ಯಂಕಪ್ಪ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.  ಇನ್ನೋರ್ವ ತೀವ್ರವಾಗಿ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ. ಗ್ರಾಮದ ತಳವಾರ ಓಣಿಯಲ್ಲಿ ಎಂಟತ್ತು ಬೈಕ್‌ಗಳು ಜಖಂಗೊಂಡಿವೆ. ಕಿರಾಣಿ ಅಂಗಡಿಯ ಸಾಮಗ್ರಿಗಳನ್ನು ಚೆಲ್ಲಾಪಿಲ್ಲಿಯಾಗಿ ಎಸೆಯಲಾಗಿದೆ. ಝೆರಾಕ್ಸ್‌ ಅಂಗಡಿಯ ಪ್ರಿಂಟರ್‌ ಮಷಿನ್‌ ರಸ್ತೆಗೆ ಎಸೆಯಲಾಗಿದ್ದುಮ ಲಕ್ಷಾಂತರ ರು. ಹಾನಿಯಾಗಿದೆ. 

Vijayapura: ಡೋಣಿ ನದಿ ಪ್ರವಾಹದ ಅಬ್ಬರಕ್ಕೆ ಹರನಾಳ ಗ್ರಾಮಸ್ಥರ ನರಳಾಟ!

ಗ್ರಾಮಕ್ಕೆ ಭೇಟಿ ನೀಡಿದ ಪೊಲೀಸರು ಎರಡೂ ಗುಂಪನ್ನು ಚದುರಿಸಲು ಮುಂದಾದರೂ ಒಂದು ಗುಂಪಿನ ಯುವಕರು ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಲು ಮುಂದಾದರು. ಪೊಲೀಸರು ಜನರ ಮನವೊಲಿಸಿ ಮನೆಗೆ ಕಳುಹಿಸಿ, ಘಟನೆ ತಣ್ಣಗಾಗಿಸಲು ಮುಂದಾದರು. ಘರ್ಷಣೆಯಿಂದ ಸರ್ಕಾರಿ ಕಚೇರಿಗಳು ಹಾಗೂ ಶಾಲೆಗಳು ಬಂದ್‌ ಆಗಿದ್ದವು. ಇತ್ತ ಗ್ರಾಮದಲ್ಲಿ ಜನರ ಓಡಾಟವಿಲ್ಲದೆ ಸ್ಮಶಾನ ಮೌನ ಆವರಿಸಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿತ್ತು. 

ಸಂಜೆ ಹೊತ್ತಿಗೆ ತಣ್ಣಗಾಗಿದ್ದರೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಘರ್ಷಣೆ ಬೆನ್ನಲ್ಲೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಪೊಲೀಸ್‌ ಅಧಿಕಾರಿಗಳು ಗ್ರಾಮದಲ್ಲಿ ಬೀಡು ಬಿಟ್ಟಿದ್ದಾರೆ. ಗ್ರಾಮದ ಸುತ್ತ 2 ಕಿಮೀ ವ್ಯಾಪ್ತಿಯಲ್ಲಿ ಆ. 20ರವರೆಗೆ 144 ಸೆಕ್ಷನ್‌ ಜಾರಿ ಮಾಡಿ ಉಪವಿಭಾಗಾಧಿಕಾರಿಗಳು ಆದೇಶಿಸಿದ್ದಾರೆ. ಘರ್ಷಣೆಯಲ್ಲಿ ಮೃತಪಟ್ಟಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಎರಡೂ ಗುಂಪಿನವರು ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಕಣ್ಣೀರಿಟ್ಟು ಆಗ್ರಹಿಸಿದ ಘಟನೆ ನಡೆಯಿತು. ಎಸ್‌ಪಿ ಎ. ಗಿರಿ, ಡಿವೈಎಸ್‌ಪಿ ರುದ್ರೇಶ ಉಜ್ಜನಕೊಪ್ಪ, ತಹಸೀಲ್ದಾರ್‌ ಧನಂಜಯ ಮಾಲಗಿತ್ತಿ ಗ್ರಾಮಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿ, ತನಿಖೆಗೆ ಸಹಕರಿಸುವಂತೆ ತಿಳಿಸಿದರು.

ದೂರು ದಾಖಲಿಸಲು ಹಿಂದೇಟು: ಘಟನೆ ಕುರಿತು ದೂರು ದಾಖಲಿಸಲು ಎರಡೂ ಕಡೆಯವರು ಹಿಂದೇಟು ಹಾಕುತ್ತಿದ್ದು, ಗುರುವಾರ ಸಂಜೆಯ ವರೆಗೂ ದೂರು ದಾಖಲಾಗಿಲ್ಲ. ಪರಸ್ಪರ ಅವರು ಮೊದಲು ದೂರು ನೀಡಲು ಎಂದು ಎರಡೂ ಗುಂಪುಗಳು ಕಾಯುತ್ತಿದ್ದ ಹಿನ್ನೆಲೆಯಲ್ಲಿ ದೂರು ದಾಖಲಾಗಿಲ್ಲ ಎನ್ನಲಾಗಿದೆ. ಘಟನೆ ಆಧರಿಸಿ ಗ್ರಾಮದ ವಿವಿಧೆಡೆ ಇರುವ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ವಿಡಿಯೋಗಳನ್ನು ಹಾಗೂ ಗ್ರಾಮಸ್ಥರು ಮಾಡಿರುವ ವಿಡಿಯೋ ಆಧರಿಸಿ ಗಲಾಟೆ ಮಾಡುವವರನ್ನು ಗುರುತಿಸಿ ಪೊಲೀಸರು ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.

ಸ್ಮಶಾನ ಮೌನ: ಇಡೀ ಗ್ರಾಮ ಸ್ಮಶಾನ ಮೌನದಂತೆ ಆಗಿದೆ. ಮನೆಯಿಂದ ಆಚೆ ಯಾರೂ ಬರುತ್ತಿಲ್ಲ. ಬರದಂತೆ ಪೊಲೀಸ್‌ ಕಟ್ಟಾಜ್ಞೆ ಮಾಡಿರುವ ಹಿನ್ನೆಲೆ ಗ್ರಾಮದ ರಸ್ತೆಗಳು ಬೀಕೋ ಎನ್ನುತ್ತಿವೆ. ಗ್ರಾಮದಲ್ಲಿ ಒಂದೇ ದಿನ ಗಲಾಟೆಯಲ್ಲಿ ಇಬ್ಬರು ಬಲಿಯಾಗಿರುವುದರಿಂದ ಬೂದಿಮುಚ್ಚಿದ ಕೆಂಡದಂತೆ ಇದೆ. ಯಾವಾಗ ಬೇಕಾದರೂ ಸ್ಫೋಟವಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಘಟನೆಗೆ ಕಾರಣವೇನು?: ಘಟನೆಗೆ ನಿಖರ ಕಾರಣ ಗೊತ್ತಾಗಿಲ್ಲ. ಆದರೆ ಗುರುವಾರ ಬೆಳಗ್ಗೆ ಗ್ರಾಮದ ಯುವಕನೋರ್ವನನ್ನು ಯಾವುದೋ ಕಾರಣಕ್ಕೆ ಮನೆಯೊಂದಕ್ಕೆ ಕರೆದೊಯ್ದು ಥಳಿಸಲಾಗಿದೆ ಎನ್ನಲಾಗಿದೆ. ಆ ಯುವಕನ ಸಮುದಾಯದವರು ಸಿಡಿದೆದ್ದು ಇನ್ನೊಂದು ಗುಂಪಿನ ಮೇಲೆ ದಾಳಿ ನಡೆಸಿದ್ದು, ಎರಡೂ ಗುಂಪಿನವರು ಕೈಕೈ ಮೀಲಾಯಿಸಿದ್ದರಿಂದ ಪರಿಸ್ಥಿತಿ ಕೈಮೀರಿ ಹೋಗಿದೆ.

ಇದರ ಜೊತೆಯಲ್ಲಿ ಕೆಲ ದಿನದ ಹಿಂದೆ ಗ್ರಾಮದಲ್ಲಿ ನಡೆದ ಅಂತರ್ಜಾತಿ ವಿವಾಹವೂ ಗ್ರಾಮದಲ್ಲಿ ವೈಮನಸ್ಸು ಮೂಡಲು ಕಾರಣವಾಗಿತ್ತು. ಗ್ರಾಮದಲ್ಲಿ ವಾಲ್ಮೀಕಿ ವೃತ್ತ ಸ್ಥಾಪಿಸಿ, ಮೂರ್ತಿ ಸ್ಥಾಪಿಸುವ ವಿಚಾರದಲ್ಲೂ ಭಿನ್ನಾಭಿಪ್ರಾಯ ತಲೆದೋರಿದ್ದು, ಎರಡೂ ಕೋಮೀನ ನಡುವೆ ಪರಸ್ಪರ ಅಪನಂಬಿಕೆ, ವೈಮನಸ್ಸು, ಭಿನ್ನಾಭಿಪ್ರಾಯ ಹೆಚ್ಚುತ್ತಲೇ ಸಾಗಿತ್ತು. ಕೋಮು ಘರ್ಷಣೆ ಸಂಭವಿಸಬಹುದೆಂಬ ಹಿನ್ನೆಲೆಯಲ್ಲಿ ಹಾಗೂ ಈ ಹಿಂದೆ ಸಂಭವಿಸಿದ್ದ ಗಲಭೆಯ ವಿಚಾರದಲ್ಲಿ ಗ್ರಾಮದಲ್ಲಿ ಪೊಲೀಸ್‌ ಬಂದೋಬಸ್‌್ತ ಏರ್ಪಡಿಸಲಾಗಿತ್ತು. ಗುರುವಾರವಷ್ಟೇ ಅದನ್ನು ವಾಪಸ್‌ ಪಡೆದಿದ್ದು, ಅದರ ಮರು ಕ್ಷಣವೇ ಗಲಭೆ ಆರಂಭವಾಗಿದೆ.

ಪೊಲೀಸ್‌ ಪಹರೆ: ಗ್ರಾಮದಲ್ಲಿ ಬಿಗಿ ಪೊಲೀಸ್‌ ಪಹರೆಯನ್ನು ಹಾಕಲಾಗಿದೆ. ಎಸ್ಪಿ, ಡಿವೈಎಸ್ಪಿ, ಐಜಿ ಸೇರಿದಂತೆ ಅನೇಕರು ಗ್ರಾಮದಲ್ಲಿಯೇ ಮೊಕ್ಕಾಂ ಹೂಡಿ ಬಂದೋಬಸ್‌್ತ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಪ್ರತಿ ಓಣಿಗೂ ಪೊಲೀಸ್‌ ಪಹರೆ ಹಾಕಲಾಗಿದೆ. ಇಡೀ ಗ್ರಾಮ ಪೊಲೀಸಮಯವಾಗಿದೆ. ಹೆಜ್ಜೆ ಹೆಜ್ಜೆಗೂ ಪೊಲೀಸ್‌ ಬಂದೋಬಸ್‌್ತ ಹಾಕಲಾಗಿದ್ದು, ಜಿಲ್ಲಾಸಶಸ್ತ್ರ ಮೀಸಲು ಪಡೆಯ ನಾಲ್ಕಾರು ವಾಹನಗಳು ಸೇರಿದಂತೆ ಶಸ್ತ್ರಸಜ್ಜಿತ ಪೊಲೀಸರು ಬೀಡುಬಿಟ್ಟಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ ಮಳೆಯಿಂದ ಬೆಳೆ ಹಾನಿ: ಸಚಿವ ಹಾಲಪ್ಪ ಭೇಟಿ

ಯಲ್ಲಾಲಿಂಗ ಕೊಲೆ ಪ್ರಕರಣದಲ್ಲಿ ರಾಷ್ಟ್ರವ್ಯಾಪಿ ಸುದ್ದಿಯಾಗಿದ್ದ ಗ್ರಾಮ ಇದು. ಗ್ರಾಮ ಪಂಚಾಯಿತಿಯಲ್ಲಿನ ಅಕ್ರಮ ಬಯಲಿಗೆ ಎಳೆದ ಎನ್ನುವ ಕಾರಣಕ್ಕಾಗಿಯೇ ಕೊಲೆಯಾದ ಎನ್ನುವ ಆರೋಪದಡಿ ರಾಜಕೀಯ ತಿರುವು ಪಡೆದುಕೊಂಡು, ರಾಜ್ಯ ಮತ್ತು ರಾಷ್ಟ್ರವ್ಯಾಪ್ತಿಯ ಮಾಧ್ಯಮಗಳಲ್ಲಿಯೂ ಸುದ್ದಿಯಾಗಿದ್ದು, ಸುಮಾರು 10- 12 ವರ್ಷಗಳಿಂದಲೂ ಈ ಕುರಿತೇ ಹುಲಿಹೈದರ ಆಗಾಗ ಸುದ್ದಿಯಾಗುತ್ತಿತ್ತು. ಈಗ ಮತ್ತೆ ಅದೇ ಗ್ರಾಮದಲ್ಲಿ ಗಲಾಟೆಯಲ್ಲಿ ಇಬ್ಬರು ಬಲಿಯಾಗಿರುವ ಮೂಲಕ ಸುದ್ದಿಯಾಗಿದೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸುತ್ತಿದ್ದೇವೆ. ಹುಲಿಹೈದರ್‌ ಗ್ರಾಮದಲ್ಲಿ ಸಿಸಿ ಕ್ಯಾಮೆರಾದ ಡಿವಿಆರ್‌ ಪರಿಶೀಲಿಸಲಾಗುವುದು. ತಪ್ಪಿತಸ್ಥರು ಯಾರೇ ಇರಲಿ ಕ್ರಮ ಕೈಗೊಳ್ಳುತ್ತೇವೆ.
-ಮನೀಶ್‌, ಐಜಿಪಿ, ಬಳ್ಳಾರಿ ವಿಭಾಗ

Follow Us:
Download App:
  • android
  • ios