ಬೆಂಗಳೂರು(ನ.16): ವಾಣಿ ವಿಲಾಸ್‌ ಆಸ್ಪತ್ರೆಯಲ್ಲಿ ಎರಡು ದಿನದ ಹಸುಗೂಸನ್ನು ಅಪರಿಚಿತರು ಅಪಹರಣ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಈ ಸಂಬಂಧ ಮಗುವಿನ ತಂದೆ ನ.11ರಂದು ವಿ.ವಿ.ಪುರ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ವಿಜಿನಾಪುರದ ನಿವಾಸಿಯಾದ 27 ವರ್ಷದ ಮಹಿಳೆ, ಹೆರಿಗೆಗೆಂದು ವಾಣಿ ವಿಲಾಸ್‌ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಹೆಣ್ಣು ಮಗು ಹುಟ್ಟಿತ್ತು. ಮಗುವಿನ ಆರೋಗ್ಯದಲ್ಲಿ ಏರುಪೇರು ಆಗಿದ್ದರಿಂದ, ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು.

ಹಣಕ್ಕಾಗಿ ಅಪಹರಣ ನಾಟಕವಾಡಿ ಹೆತ್ತವರನ್ನೇ ಬೆಚ್ಚಿ ಬೀಳಿಸಿದ ಬಾಲಕ..!

ಘಟಕಕ್ಕೆ ನುಗ್ಗಿದ್ದ ಅಪರಿಚಿತರು ಮಗು ಅಪಹರಿಸಿಕೊಂಡು ಹೋಗಿದ್ದಾರೆ. ಆತಂಕಗೊಂಡ ಪೋಷಕರು, ಆಸ್ಪತ್ರೆಯವರನ್ನು ವಿಚಾರಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನೊಂದ ಪೋಷಕರು ಠಾಣೆಗೆ ದೂರು ನೀಡಿದ್ದಾರೆ. ಐಸಿಯುವಿನಲ್ಲಿ ಸಿಬ್ಬಂದಿ ಇಲ್ಲದಿರುವಾಗ ಮಗುವನ್ನು ಅಪಹರಿಸಿರುವುದಾಗಿ ಆಸ್ಪತ್ರೆಯವರು ಹೇಳಿದ್ದಾರೆ.

ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಅಪಹರಣ ಸಂಬಂಧ ಆಸ್ಪತ್ರೆಯ ಸಿಬ್ಬಂದಿಯನ್ನು ವಿಚಾರಣೆ ಮಾಡಲಾಗುತ್ತಿದೆ. ಮಗು ಅಪಹರಣವಾಗಿರುವ ಬಗ್ಗೆ ಕೆಲ ಸುಳಿವು ಸಿಕ್ಕಿದ್ದು, ಶೀಘ್ರ ಮಗುವನ್ನು ಪತ್ತೆ ಹಚ್ಚಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.