*  ದಾರಿ ಬಿಡುವ ವಿಚಾರಕ್ಕೆ ಪಿಎಸ್‌ಐ- ಸಹೋದರರ ನಡುವೆ ಮಾತಿನ ಚಕಮಕಿ*  ಪರಿಸ್ಥಿತಿ ವಿಕೋಪಕ್ಕೆ, ಜಟಾಪಟಿ*  ರೊಚ್ಚಿಗೆದ್ದ ಆರೋಪಿಗಳಿಂದ ಪಿಎಸ್‌ಐ, ಮುಖ್ಯಪೇದೆ ಎಳೆದಾಡಿ ಹಲ್ಲೆ 

ಬೆಂಗಳೂರು(ಡಿ.08): ರಸ್ತೆಯಲ್ಲಿ ದಾರಿ ಬಿಡುವ ವಿಚಾರಕ್ಕೆ ಕೋಪಗೊಂಡು ಸಬ್‌ ಇನ್ಸ್‌ಪೆಕ್ಟರ್‌ ಸೇರಿದಂತೆ ಪೊಲೀಸರ(Police) ಮೇಲೆ ಹಲ್ಲೆ(Assault) ನಡೆಸಿದ ಆರೋಪದ ಮೇರೆಗೆ ಸೋದರರನ್ನು ಯಲಹಂಕ ಉಪ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಯಲಹಂಕ 5ನೇ ಹಂತದ ನಿವಾಸಿಗಳಾದ ಧೀರಜ್‌ ಹಾಗೂ ಮನೋಜ್‌ ಬಂಧಿತರು(Arrest). ಚಿಕ್ಕಬೆಟ್ಟಹಳ್ಳಿ ಕಡೆಯಿಂದ ಆರೋಪಿಗಳು(Accused) ಸೋಮವಾರ ರಾತ್ರಿ ಮನೆಗೆ ತೆರಳುವಾಗ ಮಾರ್ಗ ಮಧ್ಯೆ ಈ ಗಲಾಟೆ ನಡೆದಿದೆ.

ಈ ಘಟನೆಯಲ್ಲಿ ಕಾನ್‌ಸ್ಟೇಬಲ್‌ವೊಬ್ಬರ(Constable) ತಲೆಗೆ ಪೆಟ್ಟಾಗಿದ್ದು, ನಾಲ್ಕು ಹೊಲಿಗೆ ಹಾಕಲಾಗಿದೆ. ಗಾಯಾಳು ಪೊಲೀಸರು(Police) ಚಿಕಿತ್ಸೆ(Treatment) ಪಡೆದು ಮನೆಗೆ ತೆರಳಿದ್ದಾರೆ. ಹಲ್ಲೆಗೊಳಗಾಗಿದ್ದ ಪಿಎಸ್‌ಐ ಶ್ರೀಶೈಲ ನೀಡಿದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ(Social Media) ವೈರಲ್‌ ಆಗಿದೆ.

CCB Busts Drug Racket: ಬೆಂಗ್ಳೂರಲ್ಲಿ ದಿನಸಿ ಪೂರೈಕೆ ಸೋಗಲ್ಲಿ ಮನೆಗೇ ಡ್ರಗ್ಸ್‌ ಪೂರೈಕೆ..!

ಓನ್‌ ವೇ ತಗಾದೆ:

ಪೈಪ್‌ಲೈನ್‌ ಕಾಮಗಾರಿ ನಡೆಯುತ್ತಿರುವ ಕಾರಣ ಚಿಕ್ಕಬೆಟ್ಟಹಳ್ಳಿ ಮಾರ್ಗದ ಎರಡು ರಸ್ತೆಯಲ್ಲಿ ಒಂದು ಕಡೆ ಮಾತ್ರ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಆ ರಸ್ತೆಯಲ್ಲಿ ಸೋಮವಾರ ರಾತ್ರಿ 8 ಸುಮಾರಿಗೆ ಬೈಕ್‌ನಲ್ಲಿ ಯಲಹಂಕ ಉಪನಗರ ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌ ಶ್ರೀಶೈಲ ತೆರಳುತ್ತಿದ್ದರು. ಅದೇ ಸಮಯಕ್ಕೆ ಆ ಮಾರ್ಗದಲ್ಲಿ ಪಿಎಸ್‌ಐ ಬೈಕ್‌ಗೆ ಎದುರಿಗೆ ಕಾರಿನಲ್ಲಿ ಧೀರಜ್‌ ಹಾಗೂ ಮನೋಜ್‌ ಬಂದಿದ್ದಾರೆ. ಆಗ ದಾರಿ ಬಿಡುವ ವಿಚಾರಕ್ಕೆ ಪಿಎಸ್‌ಐ ಮತ್ತು ಈ ಸೋದರರ ಮಧ್ಯೆ ಗಲಾಟೆ ಶುರುವಾಗಿದೆ.

ಕಾರನ್ನು ಹಿಂದೆ ತೆಗೆದುಕೋ, ನಾನು ಬಲಕ್ಕೆ ಹೋಗುತ್ತೇನೆ ಎಂದು ಆರೋಪಿಗಳಿಗೆ ಪಿಎಸ್‌ಐ ಹೇಳಿದರೂ ಕೇಳದೆ ಸೋದರರು ಉದ್ದಟತನ ತೋರಿಸಿದ್ದಾರೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಇದರಿಂದ ಎಚ್ಚೆತ್ತ ಪಿಎಸ್‌ಐ, ಠಾಣೆಗೆ ಕರೆ ಮಾಡಿ ಹೆಚ್ಚಿನ ಗಸ್ತು ಸಿಬ್ಬಂದಿಯನ್ನು ಸ್ಥಳಕ್ಕೆ ಬರುವಂತೆ ಸೂಚಿಸಿದ್ದಾರೆ. ಕೂಡಲೇ ಇಬ್ಬರು ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ಆಗಲೂ ಸಹ ಪೊಲೀಸರ ಜತೆ ಆರೋಪಿಗಳು ಜಟಾಪಟಿ ಮುಂದುವರೆಸಿದ್ದಾರೆ. ಈ ಹಂತದಲ್ಲಿ ರೊಚ್ಚಿಗೆದ್ದ ಆರೋಪಿಗಳು, ಪಿಎಸ್‌ಐ ಹಾಗೂ ಹೆಡ್‌ ಕಾನ್‌ಸ್ಟೇಬಲ್‌ ಅವರನ್ನು ಎಳೆದಾಡಿ ಹಲ್ಲೆ ನಡೆಸಿದ್ದಾರೆ.

Illicit Affair: ಅಕ್ರಮ ಸಂಬಂಧ : ಆಕೆಯನ್ನು ಕೊಲೆ ಮಾಡಿ ಶವದ ಜೊತೆಗೆ ಮಲಗಿದ ಭೂಪ

ಪೊಲೀಸರಿಗೆ ಲಾಠಿ ಏಟು:

ಲಾಠಿ ಬೀಸಿದ ಕಾನ್‌ಸ್ಟೇಬಲ್‌ನಿಂದ ಲಾಠಿ ಕಸಿದುಕೊಂಡು ಪೊಲೀಸರಿಗೆ ಬಾರಿಸಿದ್ದಾರೆ. ಕೊನೆಗೆ ಸಾರ್ವಜನಿಕರು ಮಧ್ಯಪ್ರವೇಶಿಸಿ ಪರಿಸ್ಥಿತಿ ಶಾಂತಗೊಳಿಸಿದ್ದಾರೆ. ಬಳಿಕ ಹೆಚ್ಚಿನ ಪೊಲೀಸರು ಸ್ಥಳಕ್ಕೆ ಬಂದು ಗಲಾಟೆ ಮಾಡಿದ್ದವನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು ಎಂದು ತಿಳಿದು ಬಂದಿದೆ.

ಪಿಎಸ್‌ಐ ಬೈದಿದ್ದಕ್ಕೆ ಹಲ್ಲೆ?

ತನ್ನ ಬೈಕಿಗೆ ಎದುರಿಗೆ ಬಂದಾಗ ಕಾರು ಹಿಂದಕ್ಕೆ ತೆಗೆದುಕೊಳ್ಳುವಂತೆ ಸೌಜನ್ಯದಿಂದ ಹೇಳದೆ ಅಶ್ಲೀಲ ಪದ ಬಳಸಿ ಪಿಎಸ್‌ಐ ಶ್ರೀಶೈಲ ಬೈದಿದ್ದು ಗಲಾಟೆ ಕಾರಣವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಕಾರಿನಲ್ಲಿದ್ದವರಿಗೆ ಕೀಳು ಭಾಷೆ ಬಳಸಿ ಪಿಎಸ್‌ಐ ನಿಂದಿಸಿದರು. ಈ ಮಾತಿನಿಂದ ಕೆರಳಿದ ಸೋದರರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಆರೋಪಿಗಳ ಪೈಕಿ ಒಬ್ಬಾತ ಸ್ವಿಗ್ಗಿಯಲ್ಲಿ, ಮತ್ತೊಬ್ಬ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ರಸ್ತೆಯಲ್ಲಿ ದಾರಿ ಬಿಡುವ ಕ್ಷುಲ್ಲಕ ವಿಚಾರಕ್ಕೆ ಈ ಘಟನೆ ನಡೆದಿದೆ. ಆರೋಪಿಗಳಿಗೆ ಪಿಎಸ್‌ಐ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಬಗ್ಗೆ ಮಾಹಿತಿ ಇಲ್ಲ. ಆದರೆ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು ಸರಿಯಲ್ಲ ಅಂತ ಈಶಾನ್ಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ.