Asianet Suvarna News Asianet Suvarna News

ಮದ್ಯ, ಹೆಣ್ಣಿನ ಸಂಗಕ್ಕಾಗಿ ಮನೆ ಕಳ್ಳತನ ಮಾಡುತ್ತಿದ್ದ ಇಬ್ಬರ ಸೆರೆ

ಬಂಧಿತ ಆರೋಪಿಗಳಿಂದ 13.53 ಲಕ್ಷ ಮೌಲ್ಯದ 261 ಗ್ರಾಂ ತೂಕದ ಚಿನ್ನಾಭರಣ, 500 ಗ್ರಾಂ ಬೆಳ್ಳಿ ಸಾಮಾಗ್ರಿಗಳು, 7 ಸಾವಿರ ನಗದು, ಕೃತ್ಯಕ್ಕೆ ಬಳಸಿದ್ದ ಕಬ್ಬಿಣದ ರಾಡ್‌, ಹ್ಯಾಂಡ್‌ ಗ್ಲೌಸ್‌ ಜಪ್ತಿ 

Two Arrested For House Theft Cases in Benagluru grg
Author
First Published Nov 26, 2022, 5:30 AM IST

ಬೆಂಗಳೂರು(ನ.26):  ಹಗಲು ಮತ್ತು ರಾತ್ರಿ ವೇಳೆ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಬೀಗ ಮುರಿದು ನುಗ್ಗಿ ಕಳ್ಳವು ಮಾಡುತ್ತಿದ್ದ ಇಬ್ಬರು ಕುಖ್ಯಾತ ಕಳ್ಳರನ್ನು ನಂದಿನಿ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಚನ್ನರಾಯಪಟ್ಟಣದ ಅಯ್ಯಪ್ಪ ಅಲಿಯಾಸ್‌ ಮುರುಗೇಶ್‌(36) ಮತ್ತು ರವಿ ಅಲಿಯಾಸ್‌ ಚೀಲ ರವಿ(26) ಬಂಧಿತರು. ಆರೋಪಿಗಳಿಂದ 13.53 ಲಕ್ಷ ಮೌಲ್ಯದ 261 ಗ್ರಾಂ ತೂಕದ ಚಿನ್ನಾಭರಣ, 500 ಗ್ರಾಂ ಬೆಳ್ಳಿ ಸಾಮಾಗ್ರಿಗಳು, .7 ಸಾವಿರ ನಗದು, ಕೃತ್ಯಕ್ಕೆ ಬಳಸಿದ್ದ ಕಬ್ಬಿಣದ ರಾಡ್‌, ಹ್ಯಾಂಡ್‌ ಗ್ಲೌಸ್‌ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ನಂದಿನಿ ಲೇಔಟ್‌ನ ರೈಲ್ವೆ ಮೈನ್ಸ್‌ ಕಾಲೋನಿಯ ಮನೆಯೊಂದರಲ್ಲಿ ಹಾಡಹಗಲೇ ಕಳ್ಳತನವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.

ಕೋಟ್ಯಂತರ ರು. ಮೌಲ್ಯದ ಅಡಕೆ ಕದ್ದ ಕಳ್ಳರ ತಂಡ ಬಂಧನ: ಎಸ್‌ಪಿ ಮಾಹಿತಿ

ಆರೋಪಿಗಳ ವೃತ್ತಿಪರ ಕಳ್ಳರಾಗಿದ್ದು, ಕೆಂಗೇರಿ, ಹಾಸನ, ಚನ್ನರಾಯಪಟ್ಟಣ ಟೌನ್‌, ಬಿಂಡಿಗನವಿಲೆ, ಹೊಳೆನರಸೀಪುರ ಸೇರಿದಂತೆ ವಿವಿಧ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಮನೆಗಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಆರೋಪಿ ಅಯ್ಯಪ್ಪ ವಿರುದ್ಧ ಈ ಹಿಂದೆ 17 ಪ್ರಕರಣಗಳು ಹಾಗೂ ಆರೋಪಿ ರವಿ ವಿರುದ್ಧ 9 ಪ್ರಕರಣಗಳು ದಾಖಲಾಗಿವೆ. ಹಲವು ಪ್ರಕರಣಗಳಲ್ಲಿ ಜೈಲು ಸೇರಿದ್ದ ಆರೋಪಿಗಳು, ಜಾಮೀನು ಪಡೆದು ಹೊರಬಂದ ಬಳಿಕವೂ ತಮ್ಮ ಹಳೇ ಚಾಳಿ ಮುಂದುವರೆಸಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ಮೋಜು-ಮಸ್ತಿಗಾಗಿ ಕಳ್ಳತನ

ಆರೋಪಿಗಳಿಗೆ ಮದ್ಯ, ಹೆಂಗಸರ ಚಟವಿದ್ದು, ತಮ್ಮ ಮೋಜು-ಮಸ್ತಿಗೆ ಹಣ ಹೊಂದಿಸಲು ಅಪರಾಧ ಕೃತ್ಯಗಳಲ್ಲಿ ತೊಡಗಿದ್ದರು. ಆರೋಪಿಗಳು ನಗರದ ವಿವಿಧೆಡೆ ಸುತ್ತಾಡಿ ಬೀಗ ಹಾಕಿದ ಮನೆಗಳನ್ನು ಟಾರ್ಗೆಟ್‌ ಮಾಡಿ ಬೀಗ ಮುರಿದು ಕಳ್ಳತನ ಮಾಡುತ್ತಿದ್ದರು. ಕೆಲ ಪ್ರಕರಣಗಳಲ್ಲಿ ಮನೆಯವರು ಬಾಗಿಲ ಬೀಗದ ಕೀಗಳನ್ನು ಹೂಕುಂಡ ಅಥವಾ ಚಪ್ಪಲಿ ಸ್ಟ್ಯಾಂಡ್‌ಗಳಲ್ಲಿ ಬಚ್ಚಿಡುವುದನ್ನು ನೋಡಿಕೊಂಡು ಬಳಿಕ ಅದೇ ಕೀ ತೆಗೆದುಕೊಂಡು ಕಳ್ಳತನ ಮಾಡುತ್ತಿದ್ದರು. ಕದ್ದ ಮಾಲುಗಳನ್ನು ಪರಿಚಿತರ ಮೂಲಕ ವಿಲೇವಾರಿ ಮಾಡಿ ಬಂದ ಹಣದಿಂದ ಮೋಜು-ಮಸ್ತಿ ಮಾಡುತ್ತಿದ್ದರು. ಹಣ ಖಾಲಿಯಾದ ಬಳಿಕ ಮತ್ತೆ ತನ್ನ ಕಳ್ಳತನ ಚಾಳಿ ಮುಂದುವರೆಸುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

Follow Us:
Download App:
  • android
  • ios