ಕೋಟ್ಯಂತರ ರು. ಮೌಲ್ಯದ ಅಡಕೆ ಕದ್ದ ಕಳ್ಳರ ತಂಡ ಬಂಧನ: ಎಸ್‌ಪಿ ಮಾಹಿತಿ
- ಕೋಟ್ಯಂತರ ರು. ಮೌಲ್ಯದ ಅಡಕೆ ಕದ್ದ ಕಳ್ಳರ ತಂಡ ಬಂಧನ: ಎಸ್‌ಪಿ ಮಾಹಿತಿ
- 22 ದಿನಗಳಲ್ಲೇ ಆರೋಪಿಗಳನ್ನು ಬಲೆಗೆ ಕೆಡವಿದ ಗ್ರಾಮಾಂತರ ಠಾಣೆ ಪೊಲೀಸರ ತಂಡ
- ಗುಜರಾತ್‌ಗೆ ಅಡಕೆ ಸಾಗಿಸದೇ ಮಧ್ಯಪ್ರದೇಶಕ್ಕೆ ರವಾನಿಸಿದ್ದರು
ಸಾಗರ (ನ.25) : ಕೋಟ್ಯಂತರ ರು. ಮೌಲ್ಯದ ಅಡಕೆ ಕಳ್ಳತನ ಮಾಡಿದ್ದ ಕಳ್ಳರ ತಂಡವನ್ನು ಇಲ್ಲಿನ ಗ್ರಾಮಾಂತರ ಠಾಣೆ ಪೊಲೀಸರು ಬೇಧಿಸಿ ಆರೋಪಿಗಳನ್ನು ಮಾಲು ಸಹಿತ ಬಂಧಿಸಿದ್ದಾರೆ.
ಬಾಡಿಗೆ ಲಾರಿಯ ಸೋಗಿನಲ್ಲಿ ಕದ್ದ ಲಾರಿ ತಂದು ಗುಜರಾತಿಗೆ ಅಡಕೆ ಸಾಗಿಸುವುದಾಗಿ ಹೇಳಿ ಮಧ್ಯಪ್ರದೇಶಕ್ಕೆ ಹೊತ್ತೊಯ್ದಿದ್ದ ತಂಡವನ್ನು ಪ್ರವೀಣ್‌ಕುಮಾರ್ ಹಾಗೂ ತಿರುಮಲೇಶ್ ನಾಯ್ಕ ನೇತೃತ್ವದ ಪೊಲೀಸರ ತಂಡ 22 ದಿನದಲ್ಲಿ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಅಡಕೆ ಕಳ್ಳಸಾಗಣೆ: ಪ್ರಧಾನಿ ಮೋದಿಗೆ ಪತ್ರ ಬರೆದು ವೀರೇಂದ್ರ ಹೆಗ್ಗಡೆ ಕಳವಳ
ಪ್ರಕರಣದ ಕುರಿತು ಗ್ರಾಮಾಂತರ ಠಾಣೆಯಲ್ಲಿ ಬುಧವಾರ ಸಂಜೆ ಮಾಧ್ಯಮದವರಿಗೆ ಮಾಹಿತಿ ನೀಡಿದ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್‌ಕುಮಾರ್, ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯ ಬಳಸಗೋಡಿನ ಅಡಕೆ ವ್ಯಾಪಾರಿ ಮಧುಕರ ಹೆಗಡೆ ಅವರ ಗೋದಾಮಿನಿಂದ ಟ್ರಾನ್ಸ್‌ಪೋರ್ಚ್ ಏಜೆನ್ಸಿಯ ದೋಲರಾಮ್ ಹರಿಸಿಂಗ್ ಮೂಲಕ 350 ಚೀಲ ಕೆಂಪಡಕೆಯನ್ನು ಅಹಮದಾಬಾದ್‌ಗೆ ಕಳುಹಿಸಲು ಲಾರಿಗೆ ತುಂಬಿ ಕಳುಹಿಸಲಾಗಿತ್ತು. ಆದರೆ ಆರೋಪಿಗಳು ಮಾಲನ್ನು ಅಹಮದಾಬಾದಿಗೆ ತೆಗೆದುಕೊಂಡು ಹೋಗುವ ಬದಲು ಮಧ್ಯಪ್ರದೇಶಕ್ಕೆ ಕೊಂಡೊಯ್ದು ತಲೆಮರೆಸಿಕೊಂಡಿದ್ದರು.
ಸುದ್ದಿ ತಿಳಿದ ದೋಲರಾಮ್ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣವನ್ನು ಬೆನ್ನು ಹತ್ತಿದ ಸಾಗರ ಪೊಲೀಸರು ವಿಶೇಷ ತನಿಖಾತಂಡ ರಚಿಸಿ 22 ದಿನಗಳ ಕಾಲ ಕಾರ್ಯಾಚರಣೆ ನಡೆಸಿ ಆರೋಪಿಗಳಾದ ರಜಾಕ್‌ಖಾನ್ ಯಾನೆ ಸಲೀಂ ಖಾನ್ (65), ಥೇಜು ಸಿಂಗ್ (42) ಹಾಗೂ ಅನೀಶ್ ಅಬ್ಬಾಸಿ (55)ಯವರನ್ನು ಬಂಧಿಸಿದ್ದಾರೆ. ಮೂವರೂ ಲಾರಿ ಚಾಲಕರಾಗಿದ್ದು, ಇವರ ವಿರುದ್ಧ ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಾಸ್ಥಾನ ರಾಜ್ಯಗಳಲ್ಲೂ ಅಪರಾಧ ಪ್ರಕರಣಗಳಿವೆ ಎಂದು ಮಾಹಿತಿ ನೀಡಿದ್ದಾರೆ.
ಆರೋಪಿಗಳು ಲಾರಿ ನಂಬರ್ ಪ್ಲೇಟ್ ಬದಲಾಯಿಸಿ, ನಕಲಿ ಆಧಾರ್ ಕಾರ್ಡಿನಿಂದ 4 ಸಿಮ್, ಮೊಬೈಲ್ ಖರೀದಿಸಿ ಹಣ ಗಳಿಸುವ ಯೋಜನೆ ರೂಪಿಸಿದ್ದರು. ರಾಜಸ್ಥಾನದ ನಂಬರ್ ಪ್ಲೇಟ್ ಹೊಂದಿರುವ ಲಾರಿಗೆ 1 ಲಕ್ಷ ರು. ಮುಂಗಡ ನೀಡಿ, ಗುಜರಾತಿನ ನಂಬರ್ ಪ್ಲೇಟ್ ಅಳವಡಿಸಿಕೊಂಡು ಬೆಂಗಳೂರಿಗೆ ಗೋಧಿ ತುಂಬಿಕೊಂಡು ಬಂದಿದ್ದ ಆರೋಪಿಗಳು, ಅದನ್ನು ವಿಲೇಮಾರಿ ಮಾಡಿ ತರೀಕೆರೆಗೆ ಬಂದು ಗುಜರಾತಿನ ಲಾರಿ ಚಾಲಕನ ಪರಿಚಯದಿಂದ ಶಿವಮೊಗ್ಗಕ್ಕೆ ಬರುತ್ತಾರೆ.
ಅಲ್ಲಿ ದೋಲರಾಮ್ ಅವರ ಲಾರಿ ಏಜೆನ್ಸಿಗೆ ಹೋಗಿ ನಕಲಿ ದಾಖಲೆ ನೀಡಿ 350 ಚೀಲ ಅಡಕೆ ತುಂಬಿಕೊಂಡು ಮಹಾರಾಷ್ಟ್ರ ಮಾರ್ಗವಾಗಿ ಮಧ್ಯಪ್ರದೇಶಕ್ಕೆ ಪರಾರಿಯಾಗಿದ್ದರು. ಇವರನ್ನು ನ.18ರಂದು ಮಧ್ಯಪ್ರದೇಶದ ಸಾರಂಗಪುರದಲ್ಲಿ ಬಂಧಿಸಿ ಮಾಲು ಸಹಿತ ಪೊಲೀಸರು ಸಾಗರಕ್ಕೆ ಕರೆತಂದಿದ್ದಾರೆ.
37 ಶಾಲಾ ಕಾಲೇಜುಗಳಲ್ಲಿ ಕಳವು: ಇಬ್ಬರು ಕುಖ್ಯಾತ ಕಳ್ಳರ ಸೆರೆ
ನಗದು ಬಹುಮಾನ ಘೋಷಣೆ
ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಸಾಗರ ಗ್ರಾಮಾಂತರ ಠಾಣೆ ಪೊಲೀಸ್‌ಇನ್ಸ್‌ಪೆಕ್ಟರ್ ಪ್ರವೀಣ್‌ಕುಮಾರ್, ಸನಾವುಲ್ಲಾ, ಶ್ರೀಧರ, ತಾರನಾಥ, ರವಿಕುಮಾರ್, ಹನುಮಂತಪ್ಪ ಜಂಬೂರ, ಪ್ರವೀಣ್‌ಕುಮಾರ್, ಕಾರ್ಗಲ್ ಪೊಲೀಸ್ ಠಾಣೆ ಸಬ್‌ಇನ್ಸ್‌ಪೆಕ್ಟರ್ ತಿರುಮಲೇಶ್ ನಾಯ್ಕ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ಸಿಬ್ಬಂದಿಗಳಾದ ಇಂದ್ರೇಶ್, ವಿಜಯಕುಮಾರ, ಗುರು ಮೊದಲಾದ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪೊಲೀಸ್ ಅಧೀಕ್ಷಕರು ಅಭಿನಂದನೆ ಸಲ್ಲಿಸಿ, 10 ಸಾವಿರ ರು. ನಗದು ಬಹುಮಾನ ಘೋಷಿಸಿದ್ದಾರೆ.