ಹೆಂಡ್ತಿ ಜತೆ ವಾಟ್ಸಾಪ್ ಚಾಟ್ ಮಾಡಿದ ರೌಡಿ ಸಿಗದ ಸಿಟ್ಟಿಗೆ 10 ಕಾರಿನ ಗಾಜು ಪುಡಿ ಪುಡಿ..!
* ವಾಹನಗಳ ಗಾಜು ಒಡೆದು ಪುಂಡಾಟಿಕೆ ಮಾಡಿದ್ದ ಇಬ್ಬರ ಬಂಧನ
* ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಆಧರಿಸಿ ಆರೋಪಿಗಳು ಅರೆಸ್ಟ್
* ವಿಚಾರಣೆ ವೇಳೆ ಬೆಳಕಿಗೆ ಬಂದ ರೌಡಿ ಪತ್ನಿಯ ವ್ಯಾಟ್ಸ್ ಆಪ್ ಸಂದೇಶದ ಗಲಾಟೆ
ಬೆಂಗಳೂರು(ಏ.14): ತನ್ನ ಪತ್ನಿ ಜತೆ ವಾಟ್ಸಾಪ್(WhatsApp) ಚಾಟಿಂಗ್ ಮಾಡಿದ್ದನ್ನು ಪ್ರಶ್ನಿಸಿದ ರೌಡಿಯನ್ನು ಕೊಲ್ಲಲು ತೆರಳಿದ್ದಾಗ ಆತ ತಪ್ಪಿಸಿಕೊಂಡಿದ್ದರಿಂದ ಸಿಟ್ಟಿಗೆದ್ದು ಸಾರ್ವಜನಿಕರ ವಾಹನಗಳ ಗಾಜು ಒಡೆದು ಪುಂಡಾಟಿಕೆ ಮಾಡಿದ್ದ ಇಬ್ಬರು ಕಿಡಿಗೇಡಿಗಳು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರ(Police) ಬಲೆಗೆ ಬಿದ್ದಿದ್ದಾರೆ.
ಮೂಡಲಪಾಳ್ಯದ ಅಶೋಕ್ ಹಾಗೂ ಸರಸ್ವತಿ ನಗರದ ಸಾಗರ್ ಬಂಧಿತರಾಗಿದ್ದು(Arrest), ಈ ಕೃತ್ಯದಲ್ಲಿ ತಪ್ಪಿಸಿಕೊಂಡಿರುವ ಮತ್ತೊಬ್ಬ ಆರೋಪಿ ಪ್ರಜ್ವಲ್ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಕೆಲ ದಿನಗಳ ಹಿಂದೆ ಕಾಮಾಕ್ಷಿಪಾಳ್ಯ, ಗೋವಿಂದರಾಜನಗರ ಹಾಗೂ ಚಂದ್ರಾಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಕಾರು, ಆಟೋ ಸೇರಿದಂತೆ 10ಕ್ಕೂ ಹೆಚ್ಚಿನ ಕಾರುಗಳ(Car) ಗಾಜು ಒಡೆದು ಪುಂಡಾಟಕೆ ನಡೆಸಲಾಗಿತ್ತು.
Bengaluru Crime: ಮಹಿಳೆ ಕೊಲೆ ಮಾಡಿದ್ದ ಇಬ್ಬರ ಬಂಧನ
ಈ ಬಗ್ಗೆ ತನಿಖೆ ನಡೆಸಿದ ಕಾಮಾಕ್ಷಿಪಾಳ್ಯ ಠಾಣೆ ಇನ್ಸ್‌ಪೆಕ್ಟರ್ ಪ್ರಶಾಂತ್ ನೇತೃತ್ವದ ತಂಡವು, ಸಿಸಿಟಿವಿ(CCTV) ಕ್ಯಾಮೆರಾಗಳ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಬಳಿಕ ವಿಚಾರಣೆ ವೇಳೆ ರೌಡಿ ಪತ್ನಿಯ ವ್ಯಾಟ್ಸ್ ಆಪ್ ಸಂದೇಶದ(Message) ಗಲಾಟೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರೌಡಿ ಪತ್ನಿ ಸಹಪಾಠಿ
ಕಾಲೇಜಿನಲ್ಲಿ ಓದುವಾಗ ಬ್ಯಾಡರಹಳ್ಳಿಯ ರೌಡಿ ವಿನಯ್ ನಾಯಕ್ ಪತ್ನಿ ಹಾಗೂ ಆರೋಪಿ(Accused) ಸಾಗರ್ ಸಹಪಾಠಿಗಳು. ಈ ಗೆಳೆತನದ ಹಿನ್ನೆಲೆಯಲ್ಲಿ ಇತ್ತೀಚಿಗೆ ರೌಡಿ ಪತ್ನಿ ಜತೆ ಸಾಗರ್ ವಾಟ್ಸಾಪ್‌ನಲ್ಲಿ ಚಾಟ್ ಮಾಡಿದ್ದ. ಈ ವಿಚಾರ ತಿಳಿದ ವಿನಯ್, ಮಾ.29ರಂದು ಕಾಮಾಕ್ಷಿಪಾಳ್ಯ ಹತ್ತಿರದ ಬಾರ್‌ನಲ್ಲಿ ಸಾಗರ್ ಮೇಲೆ ಗಲಾಟೆ ಮಾಡಿದ್ದ. ಆ ವೇಳೆ ಮದ್ಯದ ಅಮಲಿನಲ್ಲಿ ಪರಸ್ಪರ ಬಡಿದಾಡಿಕೊಂಡಿದ್ದರು. ಇದರಿಂದ ಕೆರಳಿದ ಸಾಗರ್, ರೌಡಿ ವಿನಯ್ ಕೊಲೆಗೆ ನಿರ್ಧರಿಸಿದ್ದ. ಇದಕ್ಕೆ ಆತನ ಇಬ್ಬರು ಗೆಳೆಯರು ಸಾಥ್ ಕೊಟ್ಟಿದ್ದಾರೆ. ಬಾರ್ ಗಲಾಟೆ ಬಳಿಕ ಆರೋಪಿಗಳು, ಕಾವೇರಿಪುರದಲ್ಲಿದ್ದ ವಿನಯ್ ಮನೆಗೆ ಬಳಿ ತೆರಳಿದ್ದಾರೆ. ಆದರೆ ಅಲ್ಲಿ ಆತ ಸಿಗದೆ ಹೋದಾಗ ಕೆರಳಿದ ಆರೋಪಿಗಳು, ಸಿಕ್ಕ ಸಿಕ್ಕ ವಾಹಗಳಿಗೆ ಕಲ್ಲು ತೂರಾಟ ನಡೆಸಿ ಪುಂಡಾಟಿಕೆ ಮಾಡಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.
ಮೊದಲು ಕಾವೇರಿಪುರದಲ್ಲಿ ನೆಲೆಸಿದ್ದ ವಿನಯ್, ಕೆಲ ದಿನಗಳ ಹಿಂದಷ್ಟೇ ಅಂದ್ರಹಳ್ಳಿಗೆ ತನ್ನ ವಾಸ್ತವ್ಯವನ್ನು ಬದಲಾಯಿಸಿದ್ದ. ಆದರೆ ಈ ಸಂಗತಿ ತಿಳಿಯದ ಸಾಗರ್, ಕಾವೇರಿಪುರಕ್ಕೆ ಹೋಗಿ ಗಲಾಟೆ ಮಾಡಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಲ್ಲೆ ನಡೆಸಿ ದಾಂಧಲೆ: ಇಬ್ಬರು ರೌಡಿಗಳ ಬಂಧನ
ಮಂಗಳೂರು(Mangaluru): ನಗರದ ವೆಲೆನ್ಸಿಯಾ ಜಂಕ್ಷನ್ ಬಳಿಯ ಅಂಗಡಿಯೊಂದರ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ರೌಡಿ ಶೀಟರ್‌ಗಳಾದ ಬಜಾಲ್ ಜಲ್ಲಿಗುಡ್ಡೆಯ ಪ್ರೀತಮ್ ಯಾನೆ ಪ್ರೀತಮ್ ಪೂಜಾರಿ (27) ಎಕ್ಕೂರಿನ ಧೀರಜ್ ಕುಮಾರ್ (25) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ(Arrest).
ಆರೋಪಿಗಳು ಭಾನುವಾರ ಸಂಜೆ 6.30ರ ಸುಮಾರಿಗೆ ವೆಲೆನ್ಸಿಯಾದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದರು. ಇದನ್ನು ಪ್ರಶ್ನಿಸಿದ ಸಮೀಪದ ಅಂಗಡಿಯ ಇಬ್ಬರು ಸಿಬ್ಬಂದಿಗೆ ಚೂರಿ ಹಿಡಿದು ಬೆದರಿಸಿದ್ದಲ್ಲದೆ, ಪರಿಸರದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸಿದ್ದರು. ವಿಷಯ ತಿಳಿದು ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
Davanagere ಹೊರಗೆ ಮಲಗಿದ್ದವರನ್ನೇ ಟಾರ್ಗೆಟ್ ಮಾಡಿ ಹತ್ಯೆಗೈಯುತ್ತಿದ್ದ ಸೈಕೊಪಾತ್‌ಗಳು!
ಬಳಿಕ ಅವರನ್ನು ವೈದ್ಯಕೀಯ ತಪಾಸಣೆ ಒಳಪಡಿಸಲಾಗಿತ್ತು. ತಪಾಸಣೆ ವೇಳೆ ಆರೋಪಿಗಳು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ಪೈಕಿ ಪ್ರೀತಮ್ ಮೇಲೆ ಈಗಾಗಲೇ ದಕ್ಷಿಣ ಪೂರ್ವ ಮತ್ತು ಉತ್ತರ ಹಾಗೂ ಗ್ರಾಮಾಂತರ ಠಾಣೆಗಳಲ್ಲಿ ದರೋಡೆ, ದರೋಡೆಗೆ ಸಂಚು ಮತ್ತು ಕೊಲೆಯತ್ನ ಗಾಂಜಾ ಸೇವನೆ ಸೇರಿದಂತೆ 12 ಪ್ರಕರಣಗಳು ದಾಖಲಾಗಿವೆ. ಇನ್ನೋರ್ವ ರೌಡಿ ಶೀಟರ್ ಧೀರಜ್ ವಿರುದ್ಧ 8 ಪ್ರಕರಣಗಳು ದಾಖಲಾಗಿವೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ಪಡೆದುಕೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ದರೋಡೆಗೆ ಹೊಂಚು ಹಾಕಿದ್ದ ಐವರ ಸೆರೆ
ಬೆಂಗಳೂರು: ರಾತ್ರಿ ವೇಳೆ ಸಂಚರಿಸುವ ಜನರಿಗೆ ಮಾರಕಾಸ್ತ್ರಗಳಿಂದ ಬೆದರಿಕೆ ಹಾಕಿ ದರೋಡೆಗೆ ಹೊಂಚು ಹಾಕಿದ್ದ ಇಬ್ಬರು ರೌಡಿಗಳು ಸೇರಿದಂತೆ ಐದು ಮಂದಿಯನ್ನು ಸಿಸಿಬಿ ಪೊಲೀಸರು(CCB Police) ಬಂಧಿಸಿದ್ದಾರೆ.
ಕೋಣನಕುಂಟೆಯ ರೌಡಿಗಳಾದ ಗಂಗಾಧರ, ಕೆಂಪೇಗೌಡ ಅಲಿಯಾಸ್ ಕಿರಣ್ ಹಾಗೂ ಆತನ ಮೂವರು ಸಹಚರರು ಬಂಧಿತರಾಗಿದ್ದು, ಕೋಣನಕುಂಟೆಯ ಹರಿನಗರ ಸಮೀಪದ ಖೋಡೇಸ್ ಎಸ್ಟೇಟ್ ಸಮೀಪ ಜನರನ್ನು ಸುಲಿಗೆ ಮಾಡಲು ರೌಡಿಗಳು ಹೊಂಚು ಹಾಕಿರುವ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಲಾಯಿತು. ಕೋಣನಕುಂಟೆ ಠಾಣೆಯಲ್ಲಿ ಗಂಗಾಧರ ಹಾಗೂ ಕೆಂಪೇಗೌಡ ವಿರುದ್ಧ ರೌಡಿಪಟ್ಟಿ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.