ಸಾಲದ ಶೂಲ| ವಿಪರೀತ ಸಾಲ ಮಾಡಿಕೊಂಡಿದ್ದ ಲಾರಿ ಚಾಲಕ|ರೈಟರ್‌ನನ್ನು ಕೊಂದು ತುರಹಳ್ಳಿ ಅರಣ್ಯದಲ್ಲಿ ಸುಟ್ಟು ಹಾಕಿದ್ದ ಕಿರಾತಕರು| ಆರೋಪಿಗಳಿಂದ ಕಾರು ಸೇರಿದಂತೆ ಇತರೆ ವಸ್ತು ಜಪ್ತಿ|

ಬೆಂಗಳೂರು(ಏ.15): ಹಣಕ್ಕಾಗಿ ತಮ್ಮ ಸೈಟ್‌ ರೈಟರ್‌ನನ್ನು ಕೊಲೆ ಮಾಡಿದ್ದ ಟಿಪ್ಪರ್‌ ಲಾರಿ ಚಾಲಕ ಹಾಗೂ ಕ್ಲೀನರ್‌ ಸೇರಿದಂತೆ ಐವರು ತಲಘಟ್ಪಪುರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ವಿಜಯಪುರ ಜಿಲ್ಲೆಯ ನಾಗರಾಜು, ಅರುಣ್‌ ರಾಥೋಡ್‌, ಎಚ್‌.ಗೊಲ್ಲಹಳ್ಳಿಯ ಮಂಜು, ಜೆ.ಪಿ.ನಗರದ ಪರಶುರಾಮ ಅಲಿಯಾಸ್‌ ರಾಮ ಹಾಗೂ ಕಾನೂನು ಸಂಘರ್ಷಕ್ಕೊಳಪಟ್ಟ ಬಾಲಕ ಬಂಧಿತರಾಗಿದ್ದು, ಆರೋಪಿಗಳಿಂದ ಕಾರು ಸೇರಿದಂತೆ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ತುರಹಳ್ಳಿ ಕಿರು ಅರಣ್ಯದ ದನದ ಗೇಟ್‌ ಬಳಿ ಮಾ.28ರಂದು ಸುಟ್ಟು ಕರಕಲಾಗಿದ್ದ ಅಪರಿಚಿತ ಮೃತದೇಹ ಪತ್ತೆಯಾಗಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ತಲಘಟ್ಟಪುರ ಸಮೀಪದ ಮಲ್ಲಸಂದ್ರದಲ್ಲಿ ರೈಟರ್‌ ಆಗಿದ್ದ ಎ.ಆರ್‌.ರಾಜಕುಮಾರ ಅಲಿಯಾಸ್‌ ಅಮಿತ್‌ ಕುಮಾರ್‌ ಹತ್ಯೆಗೀಡಾದ ಸಂಗತಿ ಗೊತ್ತಾಯಿತು. ಮೃತದೇಹದ ಗುರುತು ಪತ್ತೆಯಾದ ಬಳಿಕ ತನಿಖೆ ಚುರುಕುಗೊಳಿಸಿದ ತಲಘಟ್ಟಪುರ ಠಾಣೆ ಪೊಲೀಸರು, ಕೊನೆಗೆ ಮೊಬೈಲ್‌ ಕರೆಗಳ ಮಾಹಿತಿ ಆಧರಿಸಿ ನಗರ ತೊರೆಯಲು ಸಜ್ಜಾಗಿದ್ದ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.

ಪುಟ್ಟೇನಹಳ್ಳಿ ಡಬಲ್ ಮರ್ಡರ್ ಕೇಸ್‌: ಗುಂಡು ಹಾರಿಸಿ ಆರೋಪಿ ಬಂಧನ

ತಲಘಟ್ಟಪುರ ಸಮೀಪದ ಮಲ್ಲಸಂದ್ರ ಗ್ರಾಮದಲ್ಲಿ ಶಶಿಕುಮಾರ್‌ ಅವರ ಬಳಿ ರಾಜಕುಮಾರ್‌ ಹಾಗೂ ಆರೋಪಿಗಳು ಕೆಲಸ ಮಾಡುತ್ತಿದ್ದರು. ಮಾಲಿಕರ ಜಮೀನಿನಲ್ಲಿ ನಾಲ್ಕು ಶೆಡ್‌ಗಳಿದ್ದು, ಒಂದರಲ್ಲಿ ಆರೋಪಿ ಮತ್ತು ಕ್ಲೀನರ್‌ ನೆಲೆಸಿದ್ದರು. ಮತ್ತೊಂದು ಶೆಡ್‌ಅನ್ನು ಟಿಪ್ಪರ್‌, ಇಟಾಚಿಗೆ ಸಂಬಂಧಿಸಿದ ಆಯಿಲ್‌, ಗ್ರೀಸ್‌ ಸೇರಿದಂತೆ ಇತರೆ ವಸ್ತುಗಳನ್ನು ಸಂಗ್ರಹಿಸುವ ಉಗ್ರಾಣವಾಗಿಸಿದ್ದರು. ಪಕ್ಕದ ಶೆಡ್‌ ಅನ್ನು ಆಫೀಸ್‌ ಮಾಡಿಕೊಂಡಿದ್ದು, ಅದರ ನಂತರದ ಶೆಡ್‌ನಲ್ಲಿ ರೈಟರ್‌ ರಾಜಕುಮಾರ್‌ ನೆಲೆಸಿದ್ದ. ಟಿಪ್ಪರ್‌ ಚಾಲಕ ನಾಗರಾಜ್‌, ವಿಪರೀತ ಸಾಲ ಮಾಡಿದ್ದ. ಈ ಸಾಲ ಬಾಧೆಯಿಂದ ಹೊರ ಬರಲು ಆತ, ರೈಟರ್‌ ಕೊಲೆಗೆ ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ರೈಟರ್‌ನನ್ನು ಕೊಂದು ಬಳಿಕ ಆತನ ಬಳಿ ಇದ್ದ ಕಾರನ್ನು ದೋಚುವುದು ಹಾಗೂ ನಂತರ ತಾನೇ ರೈಟರ್‌ ಆಗುವ ದೂರಾಲೋಚನೆ ಮಾಡಿದ್ದ. ಈ ಕೃತ್ಯಕ್ಕೆ ಚಾಲಕನಿಗೆ ಕ್ಲೀನರ್‌ ಸಾಥ್‌ ಕೊಟ್ಟಿದ್ದಾನೆ. ಅಂತೆಯೇ ಮಾ.22ರಂದು ರಾತ್ರಿ ರೈಟರ್‌ನನ್ನು ಶೆಡ್‌ನಲ್ಲಿ ಹತ್ಯೆಗೈದ ಅವರು, ಮೃತನ ಕಾರಿನಲ್ಲೇ ಶವವನ್ನು ತುರಹಳ್ಳಿ ಅರಣ್ಯ ಬಳಿಗೆ ತಂದು ಟಿಪ್ಪರ್‌ನಲ್ಲಿದ್ದ ಡಿಸೇಲ್‌ ಬಳಸಿ ಸುಟ್ಟು ಹಾಕಿ ಪರಾರಿಯಾಗಿದ್ದರು. ಮರು ದಿನ ಮೃತದೇಹ ನೋಡಿದ ಸ್ಥಳೀಯರು ಪೊಲೀಸರಿಗೆ ತಿಳಿಸಿದರು. ಈ ಮೃತದೇಹದ ಪತ್ತೆಗೆ ರೇಖಾ ಚಿತ್ರವನ್ನು ಬಿಡಿಸಿ ಪೊಲೀಸರು, ಸಾರ್ವಜನಿಕರಿಗೆ ಹಂಚಿ ಮಾಹಿತಿ ಕೋರಿದ್ದರು. ಕೊನೆಗೆ ಮೊಬೈಲ್‌ ಕರೆಗಳು ಸುಳಿವು ನೀಡಿದ್ದವು ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಾರು ಮಾರಲು ಯತ್ನ

ಈ ಹತ್ಯೆ ಬಳಿಕ ನಾಗರಾಜ್‌, ರೈಟರ್‌ನ ಕಾರನ್ನು ತನ್ನ ಗೆಳೆಯನ ಮೂಲಕ ಗೋವಾಕ್ಕೆ ಮಾರಲು ಸಂಚು ರೂಪಿಸಿದ್ದರು. ನಾಗರಾಜ್‌ಗೆ ಅರುಣ್‌ ಸ್ನೇಹಿತ. ಆತನ ಮೂಲಕ ಮಂಜು ಹಾಗೂ ಪರಶುರಾಮ್‌ ಸಂಪರ್ಕಕ್ಕೆ ಬಂದಿದ್ದಾರೆ. ಅಂತೆಯೆ ಕಾರಿನ ನಂಬರ್‌ ಅನ್ನು ಬದಲಿಸಿ ಗೋವಾಕ್ಕೆ ಮಾರಾಟ ಮಾಡುವ ಮುನ್ನ ಬಂಧಿಸಲಾಗಿದೆ. ಈ ಆರೋಪಿಗಳ ಪೈಕಿ ಅರುಣ್‌, ತನ್ನೂರಿನಲ್ಲಿ ಕೃಷಿಕನಾಗಿದ್ದ. ಅಲ್ಲದೆ, ಮಾಟಮಂತ್ರ ಹೀಗೆ ಅನಾಚಾರಗಳನ್ನು ಎಸಗುತ್ತಿದ್ದ. ಇನ್ನುಳಿದ ಇಬ್ಬರು ಕಾರು ಚಾಲಕರಾಗಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.