Asianet Suvarna News Asianet Suvarna News

Udupi; 14 ಚಕ್ರದ ಗೂಡ್ಸ್ ಲಾರಿ ಚಲಾಯಿಸಿ ಇಬ್ಬರನ್ನು‌ಕೊಂದ ಹದಿನಾರರ ಬಾಲಕ!

ಉಡುಪಿ ಜಿಲ್ಲೆಯ  ಉಚ್ಚಿಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಮುಂಜಾನೆ ಭೀಕರ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಬೆಳಗಾವಿ ಮೂಲದ ತಂದೆ-ಮಗ ಸಾವನ್ನಪ್ಪಿದ್ದರು. ಇದೀಗ 14 ಚಕ್ರದ ಬೃಹತ್ ಗೂಡ್ಸ್ ಲಾರಿ ಓಡಿಸುತ್ತಿದ್ದವ ಕೇವಲ 16ರ ಹರೆಯದ ಬಾಲಕ ಅನ್ನೋದು ಬಯಲಾಗಿದೆ!

Truck driven by minor ran over father and son in Udupi gow
Author
First Published Sep 16, 2022, 3:08 PM IST

ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್  ಸುವರ್ಣ ನ್ಯೂಸ್ 

ಉಡುಪಿ (ಸೆ.16): ಗೂಡ್ಸ್ ಲಾರಿ ಡಿಕ್ಕಿಯಾಗಿ ಬೆಳಗಾವಿ ಮೂಲದ ತಂದೆ ಮತ್ತು ಮಗ ಸಾವನ್ನಪ್ಪಿದ್ದರು. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಉಚ್ಚಿಲ ಬಳಿ ಅಪಘಾತ ಸಂಭವಿಸಿತ್ತು. ಇಷ್ಟಕ್ಕೂ ಲಾರಿ ಚಾಲಕನ ನಿರ್ಲಕ್ಷಕ್ಕೆ ಕಾರಣವೇನೆಂಬುದು ಈಗ ಬಯಲಾಗಿದೆ? 14 ಚಕ್ರದ ಈ ಬೃಹತ್ ಗೂಡ್ಸ್ ಲಾರಿ ಓಡಿಸುತ್ತಿದ್ದವ ಕೇವಲ 16ರ ಹರೆಯದ ಬಾಲಕ ಅನ್ನೋದು ಬಯಲಾಗಿದೆ! ಉಡುಪಿ ಜಿಲ್ಲೆಯ ಪಡುಬಿದ್ರಿ ಠಾಣಾ ವ್ಯಾಪ್ತಿಯ ಉಚ್ಚಿಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಮುಂಜಾನೆ ಭೀಕರ ಅಪಘಾತ ಸಂಭವಿಸಿತ್ತು. ಬೆಳಗಾವಿ ಜಿಲ್ಲೆ ಹುಕ್ಕೇರಿ ಮೂಲದ ಬಾಲಕ ಸಮರ್ಥ್ ಹಾಗೂ ಆತನ ತಂದೆ ಪ್ರಭಾಕರ್ ಈ ಅಪಘಾತದಲ್ಲಿ ಸಾವನ್ನಪ್ಪಿದ್ದರು. ತಂದೆ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರೆ, ಪುತ್ರ ಸಮರ್ಥ್ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಸತ್ತಿದ್ದ. ಮೂಲತ: ಬೆಳಗಾವಿಯವರಾದ ಪ್ರಭಾಕರ್ ತನ್ನ ಪುತ್ರನನ್ನು ಕಾಪು ತಾಲೂಕಿನ ಕುತ್ಯಾರು ಗ್ರಾಮದ ಆನೆಗುಂದಿ ಸಂಸ್ಥಾನದ ಶಾಲೆಗೆ ಸೇರ್ಪಡೆಗೊಳಿಸಿದ್ದರು. ಚೌತಿಯ ಪ್ರಯುಕ್ತ ರಜೆಗೆ ಬೆಳಗಾವಿಗೆ ತೆರಳಿದ್ದು, ಗುರುವಾರ ಮುಂಜಾನೆ ಬೆಳಗಾವಿಯಿಂದ ವಾಪಾಸಾಗಿದ್ದರು. ಉಚ್ಚಿಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ಸಿನಿಂದ ಇಳಿಯುತ್ತಿದ್ದಾಗ, ಅತಿವೇಗದಿಂದ ಬಂದ ಗೂಡ್ಸ್ ಲಾರಿ ಡಿಕ್ಕಿಯಾಗಿ ಈ ದುರಂತ ಸಂಭವಿಸಿತ್ತು. ಘಟನಾ ಸ್ಥಳದಲ್ಲಿ ಲಾರಿ ನಿಲ್ಲದೆ ಪರಾರಿಯಾಗಿತ್ತು. ಪರಿಸರದ ಸಿಸಿಟಿವಿ ಪೂಟೇಜುಗಳನ್ನು ಪರಿಶೀಲನೆ ನಡೆಸಿ ತನಿಖೆ ತೀವ್ರಗೊಳಿಸಿದ ಪಡುಬಿದ್ರೆ ಪೊಲೀಸರು ಕೊನೆಗೂ ಅಪಘಾತಕ್ಕೆ ಕಾರಣವಾಗಿದ್ದ ಗೂಡ್ಸ್ ಲಾರಿಯನ್ನು ಮೂಡುಬಿದ್ರಿ ತಾಲೂಕಿನ ಗಂಜಿಮಠದಲ್ಲಿ ವಶಕ್ಕೆ ಪಡೆದಿದ್ದರು.

ಈ ಗೂಡ್ಸ್ ಲಾರಿ ಚಾಲಕ ಶೇಖರನನ್ನು ತನಿಖೆಗೆ ಒಳಪಡಿಸಿದಾಗ ಭಯಾನಕ ಸತ್ಯ ಒಂದು ಹೊರ ಬಿದ್ದಿದೆ. 14 ಚಕ್ರದ ಈ ಗೂಡ್ಸ್ ಲಾರಿಯನ್ನು ಕೇವಲ ಹದಿನಾರರ ಹರೆಯದ ಬಾಲಕರೊಬ್ಬ ಚಲಾಯಿಸಿಕೊಂಡು ಬಂದಿದ್ದನೆಂಬ ಆತಂಕಕಾರಿ ವಿಚಾರ ಬಯಲಾಗಿದೆ. ಶೇಖರ್ ನ ಬಳಿ, ಈ ಬಾಲಕ ಕ್ಲೀನರ್ ಆಗಿ ಕೆಲಸ ಮಾಡಿಕೊಂಡಿದ್ದ. ಈ ಲಾರಿ ಗುಜರಾತ್ ನಿಂದ ಬರುತ್ತಿದ್ದು ಮುಂಬೈ ಎಕ್ಸ್ ಪ್ರೆಸ್ ಹೈವೇನಲ್ಲೂ  ಈ ಬಾಲಕನೇ ರಾತ್ರಿಯಿಡೀ ವಾಹನ ಚಲಾಯಿಸಿದ್ದ.

ಈತನಿಗೆ ಲಾರಿ ಚಲಾಯಿಸುವ ಗೀಳು. ಅಪ್ರಾಪ್ತ ವಯಸ್ಕನಿಗೆ ಲಾರಿ ಚಲಾಯಿಸಲು ಅವಕಾಶ ಕೊಟ್ಟು, ಚಾಲಕ ಶೇಖರ್ ಅನಾಹುತಕ್ಕೆ ಕಾರಣವಾಗಿದ್ದಾನೆ. ಇದೀಗ ಆರೋಪಿ ಶೇಖರ್ ನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದರೆ, ಅಪ್ರಾಪ್ತ ವಯಸ್ಸಿನ ಬಾಲ ಚಾಲಕನನ್ನು ಖಾಸಗಿ ಬಾಲಮಂದಿರದ ವಶಕ್ಕೆ ನೀಡಲಾಗಿದೆ.

ಈತ ಇಡೀ ರಾತ್ರಿ ಲಾರಿ ಚಲಾಯಿಸಿಕೊಂಡು ಬಂದಿದ್ದು, ದುರ್ಘಟನೆ ನಡೆಯುವ 20 ನಿಮಿಷ ಮುಂಚೆ ತನಗೆ ನಿದ್ದೆ ಬರುವುದಾಗಿ ಹೇಳಿದ್ದನಂತೆ. ಮುಂದೆ ಒಂದು 10 ಕಿ.ಮೀ ಸಂಚರಿಸಿದ ಬಳಿಕ ಚಹಾ ಕುಡಿಯಲು ಇಳಿಯೋಣ ನಂತರ ನಾನು ಲಾರಿ ಓಡಿಸುತ್ತೇನೆ ಎಂದು ಚಾಲಕ ಶೇಖರ್ ಹೇಳಿದ್ದಾನೆ. ನಿದ್ದೆಯ ಮಂಪರಿನಲ್ಲಿ ತಂದೆ ಹಾಗೂ ಮಗನಿಗೆ ಡಿಕ್ಕಿ ಹೊಡೆದು ಬಂದ ವಿಚಾರ ಅಪ್ರಾಪ್ತ ಚಾಲಕನಿಗೆ ಗೊತ್ತೇ ಇರಲಿಲ್ಲ.

ಮನೆಯಲ್ಲಿ ನಾಯಿ ಸಾಕುವ ವಿಷಯಕ್ಕೆ ಜಗಳ: ಮಗಳ ಕೊಂದು ತಾಯಿ ಆತ್ಮಹತ್ಯೆ

ಮಗನ ಶಿಕ್ಷಣದ ಕನಸುಹೊತ್ತು ದೂರದ ಬೆಳಗಾವಿಯಿಂದ ಉಡುಪಿ ಜಿಲ್ಲೆಯ ಶಾಲೆಗೆ ಸೇರ್ಪಡೆಗೊಳಿಸಿದ ತಂದೆ, ಹಾಗೂ ಸುಂದರ ಭವಿಷ್ಯದ ಕನಸು ಕಂಡಿದ್ದ ಮಗ ಇಬ್ಬರು ಅಸು ನೀಗಿದ್ದಾರೆ. 

ಮೊಬೈಲ್ ಕಳ್ಳನಿಗೆ ಬುದ್ದಿ ಕಲಿಸಿದ ರೈಲು ಪ್ರಯಾಣಿಕರು: ಏನ್ ಮಾಡಿದ್ರು ನೋಡಿ

16 ವರ್ಷದ ಬಾಲಕನಿಗೆ ಲಾರಿ ಚಲಾಯಿಸಲು ಅವಕಾಶಕೊಟ್ಟ ಶೇಖರ್ ನ ಪರವಾನಿಗೆ ರದ್ದು ಮಾಡುವುದರ ಜೊತೆಗೆ,  ಗೂಡ್ಸ್ ಸಾಗಾಟ ಏಜೆನ್ಸಿ ಯನ್ನು ಕೂಡ ರದ್ದು ಮಾಡಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.

Follow Us:
Download App:
  • android
  • ios