ಮನೆಯಲ್ಲಿ ನಾಯಿ ಸಾಕುವ ವಿಷಯಕ್ಕೆ ಜಗಳ: ಮಗಳ ಕೊಂದು ತಾಯಿ ಆತ್ಮಹತ್ಯೆ
ಘಟನೆ ಸಂಬಂಧ ಮೃತರ ಪತಿ ಶ್ರೀನಿವಾಸ್, ಅತ್ತೆ ವಸಂತಾ ಹಾಗೂ ಮಾವನನ್ನ ವಶಕ್ಕೆ ಪಡೆದ ಜನಾರ್ದನ್‌ನನ್ನು ಗೋವಿಂದಪುರ ಠಾಣೆ ಪೊಲೀಸರು
ಬೆಂಗಳೂರು(ಸೆ.16): ನಾಯಿಯಿಂದ ಮಗಳಿಗೆ ಅಲರ್ಜಿ ಆಗುತ್ತಿದೆ, ಇದರಿಂದ ಮನೆಯಲ್ಲಿ ನಾಯಿ ಸಾಕುವುದು ಬೇಡ ಎಂದು ಹೇಳಿದ್ದಕ್ಕೆ ಪತಿ ಹಾಗೂ ಅತ್ತೆ ಜಗಳವಾಡಿದ್ದರಿಂದ ಬೇಸರಗೊಂಡ ತಾಯಿ ತನ್ನ ಮಗಳನ್ನು ಕೊಂದು ನಂತರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಾಗವಾರ ಸಮೀಪ ನಡೆದಿದೆ. ಎಚ್‌ಬಿಆರ್ ಲೇಔಟ್ 1ನೇ ಹಂತದ ನಿವಾಸಿ ದಿವ್ಯಾ (36) ಹಾಗೂ ಅವರ ಪುತ್ರಿ ಹೃದ್ಯಾ (13) ಮೃತ ದುರ್ದೈವಿಗಳು. ಮನೆಯ ತಮ್ಮ ಕೋಣೆಯಲ್ಲಿ ಸೋಮವಾರ ರಾತ್ರಿ ಮಗಳಿಗೆ ನೇಣು ಬಿಗಿದು ಕೊಂದ ಬಳಿಕ ದಿವ್ಯಾ ನೇಣಿಗೆ ಕೊರಳೊಡ್ಡಿದ್ದಾಳೆ. ಈ ಘಟನೆ ಸಂಬಂಧ ಮೃತರ ಪತಿ ಶ್ರೀನಿವಾಸ್, ಅತ್ತೆ ವಸಂತಾ ಹಾಗೂ ಮಾವ ಜನಾರ್ದನ್‌ನನ್ನು ಗೋವಿಂದಪುರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತನ್ನ ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ
ಹದಿನಾಲ್ಕು ವರ್ಷಗಳ ಹಿಂದೆ ಶ್ರೀನಿವಾಸ್ ಹಾಗೂ ದಿವ್ಯಾ ವಿವಾಹವಾಗಿದ್ದು, ಈ ದಂಪತಿಗೆ ಹೃದ್ಯಾ ಹೆಸರಿನ ಹೆಣ್ಣು ಮಗುವಿತ್ತು. ಇತ್ತೀಚೆಗೆ ಹೃದ್ಯಾ ಅನಾರೋಗ್ಯಕ್ಕೆ ತುತ್ತಾಗಿದ್ದಳು. ಆಗ ವೈದ್ಯರ ಬಳಿಗೆ ಕರೆದುಕೊಂಡು ಹೋದಾಗ ಮಗಳಿಗೆ ನಾಯಿಯಿಂದ ಅಲರ್ಜಿಯಾಗಿದೆ ಎಂದಿದ್ದರು. ಇದರಿಂದ ದಿವ್ಯಾ, ಮನೆಯಲ್ಲಿ ನಾಯಿ ಸಾಕುವುದು ಬೇಡ ಎಂದು ಪತಿ ಶ್ರೀನಿವಾಸ್ ಹಾಗೂ ಅತ್ತೆ ವಸಂತ ಅವರಿಗೆ ಹೇಳಿದ್ದರು. ಆದರೆ ಈ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಸಾಕು ನಾಯಿಂದ ಅಲರ್ಜಿಯಾಗಿಲ್ಲ. ಬೀದಿ ನಾಯಿಯಿಂದ ಆಗಿದೆ ಎಂದು ತಕರಾರು ತೆಗೆದಿದ್ದರು. ಆಗ ತೀವ್ರ ಬೇಸರ ವ್ಯಕ್ತಪಡಿಸಿದ ದಿವ್ಯಾ, ನಾನು ಮತ್ತು ಮಗಳು ನೇಣು ಹಾಕಿಕೊಂಡು ಸಾಯುತ್ತೇವೆ ಎಂದು ನೊಂದು ನುಡಿದ್ದರು. ಈ ಮಾತಿಗೆ ಮನಕರಗದ ಪತಿ, ಅತ್ತೆ ಹಾಗೂ ಮಾವ, ‘ನೀನು ಸತ್ತರೆ ಸಾಯಿ. ನಾವು ನಾಯಿಯನ್ನು ಹೊರ ಹಾಕುವುದಿಲ್ಲ’ ಎಂದಿದ್ದರು.
ಜಗಳದ ವಿಚಾರವನ್ನು ತನ್ನ ತಂದೆಗೆ ಕರೆ ಮಾಡಿ ತಿಳಿಸಿದ ದಿವ್ಯಾ, ನಂತರ ಮಗಳೊಟ್ಟಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲ ಹೊತ್ತಿನ ಬಳಿಕ ಮೃತಳ ಕೋಣೆಗೆ ಮನೆಯವರು ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ. ಮೃತರ ತಂದೆ ಎಂ.ಕೆ.ರಾಮನ್ ಅವರ ದೂರು ಆಧರಿಸಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.