ಜಮೀನು ವಿವಾದ: ಬುಡಕಟ್ಟು ಮಹಿಳೆಗೆ ಬೆಂಕಿ ಹಚ್ಚಿ ಚಿತ್ರೀಕರಿಸಿದ ದುರುಳರು: ವಿಡಿಯೋ ವೈರಲ್
Tribal woman set on fire: ಆಘಾತಕಾರಿ ಘಟನೆಯೊಂದರಲ್ಲಿ, ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ಬುಡಕಟ್ಟು ಮಹಿಳೆಯೊಬ್ಬರಿಗೆ ಬೆಂಕಿ ಹಚ್ಚಿ, ವಿಡಿಯೋ ಚಿತ್ರೀಕರಿಸಲಾಗಿದೆ
ಮಧ್ಯಪ್ರದೇಶ (ಜು.4): ಆಘಾತಕಾರಿ ಘಟನೆಯೊಂದರಲ್ಲಿ, ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ಬುಡಕಟ್ಟು ಮಹಿಳೆಯೊಬ್ಬರಿಗೆ ಬೆಂಕಿ ಹಚ್ಚಲಾಗಿದೆ. ತನ್ನನ್ನು ರಕ್ಷಿಸುವಂತೆ ಮಹಿಳೆ ಸಹಾಯಕ್ಕಾಗಿ ಕಿರುಚುತ್ತಿದ್ದರು, ಗ್ರಾಮಸ್ಥರ ಗುಂಪೊಂದು ಕ್ಯಾಮರಾದಲ್ಲಿ ಘಟನೆಯನ್ನು ಚಿತ್ರೀಕರಿಸಿದೆ. ಮಹಿಳೆ ಹೊತ್ತಿ ಉರಿಯುತ್ತಿರುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬುಟಕಟ್ಟು ಮಹಿಳೆಯನ್ನು 38 ವರ್ಷದ ರಾಂಪ್ಯಾರಿ ಬಾಯಿ ಎಂದು ಗುರುತಿಸಲಾಗಿದ್ದು, ಮಹಿಳೆ ದುರ್ಬಲ ಬುಡಕಟ್ಟು ಗುಂಪಿಗೆ (PVTG) ಸೇರಿದ್ದಾಳೆ. ಆಕೆ ತೀವ್ರ ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಬುಡಕಟ್ಟು ಮಹಿಳೆಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಆಕೆಗೆ ಶೇಕಡಾ 80 ರಷ್ಟು ಸುಟ್ಟ ಗಾಯಗಳಾಗಿವೆ ಮತ್ತು ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಭೋಪಾಲ್, ಗುನಾದಿಂದ 200 ಕಿಮೀ ದೂರದಲ್ಲಿರುವ ಬಮೋರಿ ಪೊಲೀಸ್ ಠಾಣೆ ವ್ಯಾಪ್ತಿಯ ಧನೋರಿಯಾ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಪಂಕಜ್ ಶ್ರೀವಾಸ್ತವ ತಿಳಿಸಿದ್ದಾರೆ.
ಮಹಿಳೆ ತನ್ನ ಹೊಲದಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಆರೋಪಿಗಳು ಡೀಸೆಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ವೈದ್ಯರಿಗೆ ಮಹಿಳೆ ತಿಳಿಸಿದ್ದಾರೆ. ಆದಿವಾಸಿ ಮಹಿಳೆಯನ್ನು ಆರಂಭದಲ್ಲಿ ಜಿಲ್ಲಾಸ್ಪತ್ರೆಗೆ ಕರೆದೊಯ್ದು ಅಲ್ಲಿಂದ ಭೋಪಾಲ್‌ಗೆ ಕಳುಹಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಆರೋಪಿಗಳು ಮಹಿಳೆಯ ಕಡೆಗೆ ಓಡಿ ಹೋಗುತ್ತಿದ್ದು "ನಾವು ವಿಡಿಯೋ ಮಾಡೋಣ, ಅವಳು ಬೆಂಕಿ ಹಚ್ಚಿಕೊಂಡಿದ್ದಾಳೆ" ಎಂದು ಹೇಳಿದ್ದಾರೆ. ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಅವರು ಹೇಳಿದ್ದಾರೆ. ಏತನ್ಮಧ್ಯೆ, ಹೇಳಿಕೆ ದಾಖಲಿಸಲು ಪೊಲೀಸರು ಮಹಿಳೆಯ ಚೇತರಿಕೆಗಾಗಿ ಕಾಯುತ್ತಿದ್ದಾರೆ.
ಇದನ್ನೂ ಓದಿ: ಪತ್ನಿ ಕುಟುಂಬಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಭೂಪ: ಸಂಧಾನಕ್ಕೆ ಕರೆದು ರಾಕ್ಷಸ ನಡೆ!
ಮತ್ತೊಂದೆಡೆ, ರಂಪ್ಯಾರಿ ಬಾಯಿಯ ಕುಟುಂಬ ಸದಸ್ಯರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ ಮತ್ತು ದೂರಿನಲ್ಲಿ ಕೆಲವು ಗ್ರಾಮಸ್ಥರನ್ನು ಹೆಸರಿಸಿದ್ದಾರೆ. ದೂರಿನ ಆಧಾರದ ಮೇಲೆ, ಪೊಲೀಸರು ಕೊಲೆ ಯತ್ನದ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಮತ್ತು ಮೂವರು ಆರೋಪಿಗಳಲ್ಲಿ ಇಬ್ಬರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ.
ಆರೋಪಿಗಳಿಂದ ಜೀವ ಬೆದರಿಕೆ: ರಂಪ್ಯಾರಿ ಬಾಯಿ ಅವರ ಪತಿ ಅರ್ಜುನ್ ಅವರಿಗೆ ಪತ್ನಿ ಸುಟ್ಟ ಸ್ಥಿತಿಯಲ್ಲಿ ಜಮೀನಿನಲ್ಲಿ ಪತ್ತೆಯಾಗಿದ್ದರು. ಮರದ ಬಳಿ ಹೊಗೆ ಬರುತ್ತಿರುವುದನ್ನು ಗಮನಿಸಿ ಅದರತ್ತ ಓಡಿ ಬಂದ ಅವರು ಪತ್ನಿ ರಾಂಪ್ಯಾರಿಯನ್ನು ಕಂಡರು. ತಾನು ಜಮೀನಿಗೆ ಹೋಗುತ್ತಿದ್ದಾಗ ಮೂವರು ಆರೋಪಿಗಳಾದ ಪ್ರತಾಪ್, ಹನುಮತ್ ಮತ್ತು ಶ್ಯಾಮ್ ಕಿರಾರ್ ಕುಟುಂಬ ಸದಸ್ಯರೊಂದಿಗೆ ಟ್ರ್ಯಾಕ್ಟರ್‌ನಲ್ಲಿ ಹೋಗುವುದನ್ನು ನೋಡಿದ್ದೇನೆ ಎಂದು ಅರ್ಜುನ್ ಪೊಲೀಸರಿಗೆ ತಿಳಿಸಿದ್ದಾರೆ.
ಜೂನ್ 23 ರಂದು ಅರ್ಜುನ್ ಎಸ್ಪಿಗೆ ಅರ್ಜಿ ಸಲ್ಲಿಸಿದ್ದು, ಪತ್ನಿಯನ್ನು ಜೀವಂತವಾಗಿ ಸುಟ್ಟುಹಾಕಿದ ಆರೋಪಿಗಳಿಂದ ತನಗೆ ಜೀವ ಬೆದರಿಕೆ ಇದೆ. ಅವರು ಈ ಬಗ್ಗೆ ಬಾಮೋರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು, ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಜಾರ್ಖಂಡ್: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ಇಬ್ಬರು ಆರೋಪಿಗಳನ್ನು ಥಳಿಸಿ, ಬೆಂಕಿ ಇಟ್ಟ ಗ್ರಾಮಸ್ಥರು
ಜಮೀನು ವಿವಾದ: ಆರೋಪಿ ಅರ್ಜುನ್‌ಗೆ ಕಾನೂನುಬದ್ಧವಾಗಿ ಸೇರಿದ್ದ ಆರು ಬಿಘಾ (ಅಳತೆಯ ಸಾಂಪ್ರದಾಯಿಕ ಮಾಪನ) ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ತಹಸೀಲ್ದಾರ್ ನ್ಯಾಯಾಲಯದಲ್ಲಿ ಈ ವಿಷಯವನ್ನು ಇತ್ಯರ್ಥಗೊಳಿಸಲಾಗಿದ್ದು ಭೂಮಿಯ ಸ್ವಾಧೀನವನ್ನು ಅರ್ಜುನ್ ಮತ್ತು ಅವರ ಕುಟುಂಬಕ್ಕೆ ನೀಡಲಾಗಿತ್ತು.
ಶನಿವಾರ ಆರೋಪಿಗಳು ಒತ್ತುವರಿ ಮಾಡಿಕೊಂಡ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದಾಗ ರಂಪ್ಯಾರಿ ಜಮೀನಿಗೆ ಆಗಮಿಸಿ ತಡೆಯಲು ಯತ್ನಿಸಿದ್ದರು. ಈ ವೇಳೆ ಮೂವರು ಆಕೆಯ ಮೇಲೆ ಡೀಸೆಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.
ಎಸ್ಪಿ ಪಂಕಜ್ ಶ್ರೀವಾಸ್ತವ ಮಾತನಾಡಿ, ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಮೂವರು ಆರೋಪಿಗಳ ಪೈಕಿ ಇಬ್ಬರು ಆರೋಪಿಗಳಾದ ಪ್ರತಾಪ್, ಶ್ಯಾಮ್ ಮತ್ತು ಹನುಮತ್ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಆದರೆ ಮಹಿಳೆ ಬೆಂಕಿ ಹಚ್ಚಿಕೊಂಡಿದ್ದಾಳೆ ಎಂದು ಆರೋಪಿ ಹೇಳಿದ್ದಾನೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.