ಹಾಸನದ ಅರಸೀಕೆರೆಯಲ್ಲಿ ಮಕ್ಕಳ ಜಗಳ ತಂದೆ-ತಾಯಿಯರ ನಡುವಿನ ಜಗಳಕ್ಕೆ ತಿರುಗಿ ಒಬ್ಬ ತಂದೆಯನ್ನು ಮತ್ತೊಬ್ಬ ತಂದೆ ಕೊಲೆ ಮಾಡಿದ್ದಾನೆ. ಕೊಲೆಯಾದವರ ಕುಟುಂಬಸ್ಥರು ಆರೋಪಿಯ ಮನೆಗೆ ಬೆಂಕಿ ಹಚ್ಚಿ, ಕಾರನ್ನು ಜಖಂಗೊಳಿಸಿದ್ದಾರೆ. ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.
ಹಾಸನ, (ಆ.30): ಇಬ್ಬರ ಮಕ್ಕಳ ನಡುವಿನ ಜಗಳದ ಕಾರಣಕ್ಕೆ ತಂದೆ-ತಾಯಿಯರ ನಡುವೆ ಜಗಳಕ್ಕೆ ಕಾರಣವಾಗಿ ಓರ್ವ ಮಗುವಿನ ತಂದೆಯಿಂದ ಇನ್ನೊರ್ವ ಮಗುವಿನ ತಂದೆಯನ್ನ ಬರ್ಬರವಾಗಿ ಕೊಲೆ ಮಾಡಿದ ಆಘಾತಕಾರಿ ಘಟನೆ ಹಾಸನ ಜಿಲ್ಲೆಯ, ಅರಸೀಕೆರೆ ತಾಲೂಕಿನ ಮುಜವಾರ್ ಮೊಹಲ್ಲಾದಲ್ಲಿ ನಡೆದಿದೆ.
ತೌಫಿಕ್ (28), ದುರ್ಘಟನೆಯಲ್ಲಿ ಕೊಲೆಯಾದ ವ್ಯಕ್ತಿ. ಫರಾನ್ ಕೊಲೆಗೈದ ವ್ಯಕ್ತಿ. ಈ ಘಟನೆಯಿಂದ ತೌಫಿಕ್‌ನ ಕುಟುಂಬಸ್ಥರು ರೊಚ್ಚಿಗೆದ್ದು, ಆರೋಪಿ ಫರಾನ್‌ನ ಮನೆಯ ಮೇಲೆ ದಾಳಿ ನಡೆಸಿ, ಮನೆ ಜಖಂಗೊಳಿಸಿ ಕಾರಿಗೆ ಬೆಂಕಿ ಹಚ್ಚಿದ್ದಾರೆ.
ಇದನ್ನೂ ಓದಿ: 'ತಾಕತ್ ಇದ್ರೆ ಅಜಾನ್ ಬ್ಯಾನ್ ಮಾಡಿ..' ಡಿಜೆ ಅನುಮತಿ ಕೋರಿ ಪ್ರತಿಭಟನೆ, ರೇಣುಕಾಚಾರ್ಯ ವಿರುದ್ಧ FIR
ಪ್ರಕರಣದ ವಿವರ:
ಅರಸೀಕೆರೆ ನಗರದ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ತೌಫಿಕ್ ಹಾಗೂ ಫರಾನ್‌ನ ಮಕ್ಕಳು ಆಗಸ್ಟ್ 25 ರಂದು ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿಕೊಂಡಿದ್ದರು. ಈ ವಿಷಯವೇ ತಂದೆಯರಾದ ತೌಫಿಕ್ ಮತ್ತು ಫರಾನ್ ನಡುವೆ ಗೊಂದಲಕ್ಕೆ ಕಾರಣವಾಗಿದೆ. ಕಳೆದ ನಾಲ್ಕು ದಿನಗಳ ಹಿಂದೆ ಅರಸೀಕೆರೆಯ ಬಿಎಚ್ ರಸ್ತೆಯ ಲಸ್ಸಿ ಶಾಪ್‌ನಲ್ಲಿ ಎದುರುಬದರಾದ ಇಬ್ಬರು, ಮಕ್ಕಳ ಜಗಳದ ವಿಷಯವನ್ನು ಮತ್ತೆ ಕೆದಕಿದ್ದಾರೆ. ಈ ವೇಳೆ ಗಲಾಟೆ ತಾರಕಕ್ಕೇರಿದ್ದು, ಫರಾನ್ ತೌಫಿಕ್‌ನನ್ನು ತಳ್ಳಿದ್ದಾನೆ. ಇದರಿಂದ ಮೆಟ್ಟಿಲುಗಳ ಮೇಲೆ ಬಿದ್ದ ತೌಫಿಕ್ ತೀವ್ರವಾಗಿ ಗಾಯಗೊಂಡಿದ್ದರು. ಗಾಯಗೊಂಡ ತೌಫಿಕ್‌ನನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಗಸ್ಟ್ 29 ರ ರಾತ್ರಿ ತೌಫಿಕ್ ಮೃತಪಟ್ಟಿದ್ದಾರೆ.
ಈ ಸಾವಿನಿಂದ ಕುಪಿತಗೊಂಡ ತೌಫಿಕ್‌ನ ಕುಟುಂಬಸ್ಥರು ಮತ್ತು ಸಂಬಂಧಿಕರು ಫರಾನ್‌ನ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಹತ್ತಾರು ಮಂದಿ ಜನರು ಫರಾನ್‌ನ ಮನೆಯನ್ನು ಜಖಂಗೊಳಿಸಿ, ಅವರ ಕಾರಿಗೆ ಬೆಂಕಿ ಹಚ್ಚಿದ್ದಾರೆ. ಈ ಘಟನೆಯಿಂದ ಉಂಟಾದ ಉದ್ವಿಗ್ನ ಪರಿಸ್ಥಿತಿಯನ್ನು ತಡೆಗಟ್ಟಲು ಅರಸೀಕೆರೆ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಇದನ್ನೂ ಓದಿ: ಕಿತ್ತೂರಿನಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು, ಪೊಲೀಸ್ ಪೇದೆಗೆ ಚಾಕು ಇರಿದು ಪರಾರಿ ಯತ್ನ, ಆರೋಪಿ ಮೇಲೆ ಫೈರಿಂಗ್!
ಪ್ರಕರಣದ ಕುರಿತು ಅರಸೀಕೆರೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ವಿಚಾರಣೆ ಮುಂದುವರಿದಿದೆ. ಈ ಘಟನೆಯಿಂದ ಮುಜವಾರ್ ಮೊಹಲ್ಲಾದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳೀಯರು ಶಾಂತಿ ಕಾಪಾಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.
