ಬೆಂಗಳೂರು: ಪೋಷಕಗೆ ಬುದ್ಧಿ ಕಲಿಸಲು ಮನೆಯಲ್ಲೇ ಚಿನ್ನ ಕದ್ದ ಮಕ್ಕಳು..!
ಇತ್ತೀಚೆಗೆ ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆಗಳ್ಳತನ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಕೃತ್ಯ ನಡೆದ ಮನೆಯ ಸುತ್ತಮುತ್ತಲ ಕಟ್ಟಡಗಳ ಸುಮಾರು 60ಕ್ಕೂ ಅಧಿಕ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿ ಸಿಕ್ಕ ಸುಳಿವಿನ ಮೇರೆಗೆ ಕಾನೂನು ಸಂಘರ್ಷಕ್ಕೆ ಒಳಗಾದ ಮೂವರು ಮಕ್ಕಳನ್ನು ಬಂಧಿಸಿದ್ದಾರೆ.
ಬೆಂಗಳೂರು(ಜೂ.12): ಪೋಷಕರಿಗೆ ಬುದ್ಧಿ ಕಲಿಸಲು ಮನೆಯೊಂದರಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಬಾಲಕಿ ಸೇರಿ ಮೂವರು ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳನ್ನು ಬಾಲನ್ಯಾಯಮಂಡಳಿ ಎದುರು ಹಾಜರುಪಡಿಸಿದ್ದರು. ವಿಚಾರಣೆ ಮಾಡಿದ ನ್ಯಾಯಾಧೀಶರು ಮೂವರು ಮಕ್ಕಳನ್ನು ಬಾಲಮಂದಿರಕ್ಕೆ ಒಪ್ಪಿಸಿದ್ದಾರೆ. ಇತ್ತೀಚೆಗೆ ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆಗಳ್ಳತನ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಕೃತ್ಯ ನಡೆದ ಮನೆಯ ಸುತ್ತಮುತ್ತಲ ಕಟ್ಟಡಗಳ ಸುಮಾರು 60ಕ್ಕೂ ಅಧಿಕ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿ ಸಿಕ್ಕ ಸುಳಿವಿನ ಮೇರೆಗೆ ಕಾನೂನು ಸಂಘರ್ಷಕ್ಕೆ ಒಳಗಾದ ಮೂವರು ಮಕ್ಕಳನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಮಕ್ಕಳು ನೀಡಿದ ಮಾಹಿತಿ ಮೇರೆಗೆ 24.50 ಲಕ್ಷ ರು. ಮೌಲ್ಯದ 380 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮನೆಯವರಿಗೆ ಬುದ್ಧಿ ಕಲಿಸಲು ಕಳ್ಳತನ !:
ಮೂವರು ಮಕ್ಕಳು ಸ್ನೇಹಿತರಾಗಿದ್ದಾರೆ. ಈ ಮೂವರ ಪೈಕಿ ಒಬ್ಬ ಬಾಲಕಿ ಈ ಹಿಂದೆ ಮನೆಯಲ್ಲಿ ಅಜ್ಜಿಯ ಎಟಿಎಂ ಕಾರ್ಡ್ ಕದ್ದು ಹಣವನ್ನು ಡ್ರಾ ಮಾಡಿಕೊಂಡಿದ್ದಳು. ಈ ವಿಚಾರ ಮನೆಯವರಿಗೆ ಗೊತ್ತಾಗಿ ಪದೇ ಪದೇ ಆ ಬಾಲಕಿಯನ್ನು ಬೈಯ್ಯುತ್ತಿದ್ದರು. ಈ ವಿಚಾರವನ್ನು ಆ ಬಾಲಕಿ ಉಳಿದ ಇಬ್ಬರು ಬಾಲಕರಿಗೆ ತಿಳಿಸಿದ್ದಾಳೆ. ಆಗ ಅವರು ನಿಮ್ಮ ಮನೆಯಲ್ಲಿ ಚಿನ್ನಾಭರಣ ಕಳ್ಳತನ ಮಾಡಿ ಮಾರಾಟ ಮಾಡೋಣ. ಆಗ ಅವರಿಗೆ ಬುದ್ಧಿ ಬರುತ್ತದೆ ಎಂದು ಮಾತನಾಡಿಕೊಂಡಿದ್ದಾರೆ.
ಮರ್ಡರ್ ಕೇಸ್: ಪೊಲೀಸ್ ಕಸ್ಟಡಿಯಲ್ಲಿರುವ ದರ್ಶನ್ ಸೇರಿ ಎಲ್ಲ ಆರೋಪಿಗಳಿಗೆ ಬಿರಿಯಾನಿ ಊಟ..!
ಬಳಿಕ ಮೂವರ ಪೈಕಿ ಒಬ್ಬ ಬಾಲಕನಿಗೆ ಬುರ್ಕಾ ಹಾಕಿಸಿ ಮನೆಯ ಬೀಗ ಇರಿಸುವ ಜಾಗವನ್ನು ತಿಳಿಸಿದ್ದಾಳೆ. ಬಳಿಕ ಆ ಬಾಲಕ, ಬಾಲಕಿಯ ಮನೆಯ ಬೀಗ ತೆಗೆದುಕೊಂಡು ಮನೆ ಬೀಗ ತೆರೆದು ಮನೆ ಪ್ರವೇಶಿಸಿ, ಮನೆಯ ಬೀರುವಿನಲ್ಲಿದ್ದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದ.
ಟ್ಯೂಷನ್ ಮೇಡಂಗೆ ಸ್ವಲ್ಪ ಚಿನ್ನಾಭರಣ:
ಈ ಕದ್ದ ಚಿನ್ನಾಭರಣಗಳ ಪೈಕಿ ಕೆಲವು ಚಿನ್ನಾಭರಣಗಳನ್ನು ಈ ಹಿಂದೆ ಟ್ಯೂಷನ್ ಮಾಡುತ್ತಿದ್ದ ಶಿಕ್ಷಕಿ ಮನೆಗೆ ತೆಗೆದುಕೊಂಡು ಹೋಗಿದ್ದಾನೆ. ನಮ್ಮ ತಂದೆ ಕುಡುಕ. ಕಾಲೇಜಿನ ಫೀಜು ಕಟ್ಟಲು ಹಣ ಇಲ್ಲ. ಹೀಗಾಗಿ ಈ ಚಿನ್ನಾಭರಣ ಮಾರಾಟ ಮಾಡಿಸಿಕೊಡುವಂತೆ ನೀಡಿದ್ದಾನೆ. ಉಳಿದ ಚಿನ್ನಾಭರಣಗಳನ್ನು ಮುಂದಿನ ದಿನಗಳಲ್ಲಿ ಮಾರಾಟ ಮಾಡಲು ಮನೆಯಲ್ಲಿ ಬಚ್ಚಿಟ್ಟಿದ್ದ.
ಮತ್ತೊಂದೆಡೆ ಮನೆಯಲ್ಲಿ ಚಿನ್ನಾಭರಣ ಕಳವು ಸಂಬಂಧ ನೀಡಿದ ದೂರಿನ ಮೇರೆಗೆ ತನಿಖೆ ಮಾಡಿದಾಗ ಈ ಮೂವರು ಮಕ್ಕಳು ಕಳ್ಳತನ ಮಾಡಿರುವ ವಿಚಾರ ಗೊತ್ತಾಗಿದೆ. ಬಳಿಕ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕಳ್ಳತನ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಮೇರೆಗೆ ಶಿಕ್ಷಕಿ ಬಳಿ ಇದ್ದ ಚಿನ್ನಾಭರಣ ಹಾಗೂ ಬಾಲಕ ಮನೆಯಲ್ಲಿ ಬಚ್ಚಿಟ್ಟಿದ್ದ ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.