*   ಏರ್‌ಗನ್‌ ತೋರಿಸಿ ಚಿನ್ನದ ವ್ಯಾಪಾರಿ ಮನೆಯಲ್ಲಿ ದರೋಡೆ*   ವ್ಯಾಪಾರಿ ಪುತ್ರಿ ಚೀರಾಟದಿಂದ ಬೆದರಿ ಪರಾರಿ ವೇಳೆ ಕೆಳಗೆ ಬಿದ್ದ ವಿಸಿಟಿಂಗ್‌ ಕಾರ್ಡ್‌*   ಮದುವೆಗಾಗಿ ಚಿನ್ನದ ವ್ಯಾಪಾರಿ ಮನೆಗೆ ಕನ್ನ 

ಬೆಂಗಳೂರು(ಮಾ.25):  ಇತ್ತೀಚೆಗೆ ಯಶವಂತಪುರ ಸಮೀಪ ಚಿನ್ನದ ವ್ಯಾಪಾರಿಯೊಬ್ಬರ(Gold Merchant) ಮನೆಗೆ ನುಗ್ಗಿ ಏರ್‌ಗನ್‌ ತೋರಿಸಿ ಬೆದರಿಕೆ ಹಾಕಿ ಆಭರಣ ದೋಚಿದ್ದ ಮೂವರು ಕಿಡಿಗೇಡಿಗಳು, ಕೃತ್ಯ ಎಸಗಿ ಪರಾರಿಯಾಗುವ ವೇಳೆ ತಾವು ಬೀಳಿಸಿಕೊಂಡು ಹೋಗಿದ್ದ ‘ಚೀಟಿ’ಯಿಂದ ಪೊಲೀಸರ(Police) ಬಲೆಗೆ ಬಿದ್ದಿರುವ ಕುತೂಹಲಕಾರಿ ಪ್ರಕರಣ ಇದಾಗಿದೆ.

ರಾಜಸ್ಥಾನ(Rajasthan) ರಾಜ್ಯದ ಜಲೂರು ಜಿಲ್ಲೆಯ ಮನೋಹರ್‌ ಸಿಂಗ್‌, ಆತನ ಸಹಚರರಾದ ರಮೇಶ್‌ ಹಾಗೂ ಅಮಿತ್‌ ಬಂಧಿತರಾಗಿದ್ದು(Arrest), ಆರೋಪಿಗಳಿಂದ(Accused) ನಕಲಿ ಪಿಸ್ತೂಲ್‌ ಹಾಗೂ ಆಭರಣ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಯಶವಂತಪುರ ಮೊದಲ ರಸ್ತೆಯ ನಿವಾಸಿ ಕಮಲ್‌ ಸಿಂಗ್‌ ಮನೆಗೆ ನುಗ್ಗಿ ದರೋಡೆ ಎಸಗಿ ಪರಾರಿಯಾಗಿದ್ದರು. ಮರು ದಿನ ಆ ಮನೆಯಲ್ಲಿ ಪತ್ತೆಯಾದ ಹಾರ್ಡ್‌ವೇರ್‌ ಅಂಗಡಿಯೊಂದರ ವಿಳಾಸವಿದ್ದ ಚೀಟಿ ಆಧರಿಸಿ ಕಾರ್ಯಾಚರಣೆಗಿಳಿದ ಯಶವಂತಪುರ ಠಾಣೆ ಇನ್‌ಸ್ಪೆಕ್ಟರ್‌ ಕೆ.ಸುರೇಶ್‌ ನೇತೃತ್ವದ ತಂಡವು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ತಪ್ಪಿಸಿಕೊಂಡಿರುವ ಮತ್ತೊಬ್ಬ ಆರೋಪಿ ಗಜೇಂದ್ರ ಸಿಂಗ್‌ ಪತ್ತೆಗೆ ತನಿಖೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Hassan: ಅರಕಲಗೂಡು ಮಗು ಕಳವು ಪ್ರಕರಣ: ಖದೀಮರ ಹೆಡೆಮುರಿ ಕಟ್ಟಿದ ಖಾಕಿ ಪಡೆ

ಈ ಆರೋಪಿಗಳ ಪೈಕಿ ಮನೋಹರ್‌ ಸಿಂಗ್‌ ಕ್ರಿಮಿನಲ್‌(Criminal) ಹಿನ್ನೆಲೆಯುಳ್ಳವನಾಗಿದ್ದು, ಆತನ ಮೇಲೆ ಗುಜರಾತ್‌ ರಾಜ್ಯದಲ್ಲಿ ದರೋಡೆ(Robbery) ಪ್ರಕರಣವಿದೆ. ಎಂಟು ತಿಂಗಳ ಹಿಂದೆ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದ ಆತ, ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ದ. ಇನ್ನುಳಿದವರಲ್ಲಿ ಅಮಿತ್‌ ಮುಂಬೈನ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರೆ, ರಮೇಶ್‌ ಎಲೆಕ್ಟ್ರಾನಿಕ್‌ ಸಿಟಿ ಸಮೀಪದ ಹಾರ್ಡ್‌ವೇರ್‌ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಈ ಮೂವರು ಒಂದೇ ಜಿಲ್ಲೆಯವರಾಗಿದ್ದರಿಂದ ಮೊದಲಿನಿಂದಲೂ ಅವರಿಗೆ ಸ್ನೇಹವಿತ್ತು.

ಈ ಗೆಳೆತನದಲ್ಲೇ ಸುಲಭವಾಗಿ ಹಣ ಸಂಪಾದನೆಗೆ ರಾಜಸ್ಥಾನ ಕಡೆಯ ಚಿನ್ನದ ವ್ಯಾಪಾರಿ ಮನೆಗೆ ಕನ್ನ ಹಾಕಲು ಸ್ನೇಹಿತರು ಯೋಜಿಸಿದರು. ಆಗ ಯಶವಂತಪುರದಲ್ಲಿ ಹೊಸದಾಗಿ ಚಿನ್ನಾಭರಣ ಅಂಗಡಿ ತೆರೆದಿರುವ ಕಮಲ್‌ ಸಿಂಗ್‌ ಮನೆಯಲ್ಲಿ ಭಾರಿ ಹಣ ಮತ್ತು ಬಂಗಾರವಿದೆ ಎಂಬ ಮಾಹಿತಿ ಸಿಕ್ಕಿತು. ಈ ವಿಚಾರ ತಿಳಿದ ಕೂಡಲೇ ಆರೋಪಿಗಳು, ಕಮಲ್‌ ಸಿಂಗ್‌ ಮನೆಯಲ್ಲಿ ದರೋಡೆಗೆ ಸಂಚು ರೂಪಿಸಿದರು.

ಅಂತೆಯೇ ಮಾ.15ರಂದು ಕಮಲ್‌ ಸಿಂಗ್‌ ಮನೆಯನ್ನು ಮನೋಹರ್‌ ಸಿಂಗ್‌ ತಂಡಕ್ಕೆ ಗಜೇಂದ್ರ ಸಿಂಗ್‌ ತೋರಿಸಿ ಪರಾರಿಯಾಗಿದ್ದ. ಬಳಿಕ ಆ ಮನೆಗೆ ನುಗ್ಗಿದ ಆರೋಪಿಗಳು, ಆ ವೇಳೆ ಮನೆಯಲ್ಲಿದ್ದ ಕಮಲ್‌ ಸಿಂಗ್‌ ತಾಯಿ, ಪತ್ನಿ ಹಾಗೂ ಮಗಳಿಗೆ ಏರ್‌ ಗನ್‌ ತೋರಿಸಿ ಶೂಟ್‌ ಮಾಡುವುದಾಗಿ ಬೆದರಿಸಿದ್ದಾರೆ. ಇದಕ್ಕೆ ಪ್ರತಿರೋಧ ತೋರಿದಾಗ ಕಮಲ್‌ ಸಿಂಗ್‌ ಅವರ 17 ವರ್ಷದ ಮಗಳ ಮೇಲೆ ಆರೋಪಿಗಳು ಹಲ್ಲೆ ನಡೆಸಿ ಕೈ-ಕಾಲು ಕಟ್ಟಿಹಾಕಿ ಬಾಯಿ ಪ್ಲಾಸ್ಟರ್‌ ಹಾಕಿದ್ದಾರೆ. ಆಗ ಹೆದರಿದ ಕಮಲ್‌ ಸಿಂಗ್‌ ಕುಟುಂಬದವರು ಆರೋಪಿಗಳಿಗೆ 15 ಗ್ರಾಂ ಆಭರಣ ನೀಡಿದ್ದಾರೆ. ಈ ಹಂತದಲ್ಲಿ ಪ್ಲಾಸ್ಟರ್‌ ಬಿಚ್ಚಿಕೊಂಡು ರಕ್ಷಣೆಗೆ ಜೋರಾಗಿ ಕಮಲ್‌ ಪುತ್ರಿ ಕೂಗಿಕೊಂಡಿದ್ದಾಳೆ. ಈ ಚೀರಾಟದಿಂದ ಭೀತಿಗೊಂಡು ಆರೋಪಿಗಳು ಕಾಲ್ಕಿತ್ತಿದ್ದಾರೆ.

Bengaluru Crime: ಮೊಬೈಲ್‌ ಕಳವು ಮಾಡಲೆಂದೇ ದೆಹಲಿಯಿಂದ ಬೆಂಗ್ಳೂರಿಗೆ ಬರ್ತಿದ್ದ ಖದೀಮರು..!

ಆ ವೇಳೆ ರಮೇಶ್‌ ಜೇಬಿನಲ್ಲಿದ್ದ ಆತ ಕೆಲಸ ಮಾಡುತ್ತಿದ್ದ ಹಾರ್ಡ್‌ವೇರ್‌ ಅಂಗಡಿಯ ವಿಳಾಸದ ಚೀಟಿ ಕೆಳಗೆ ಬಿದ್ದಿದೆ. ಮರುದಿನ ಮನೆಯಲ್ಲಿ ಕಾಸುಗೂಡಿಸುವಾಗ ಆ ಚೀಟಿ ಪತ್ತೆಯಾಯಿತು. ಈ ಸುಳಿವು ಆಧರಿಸಿ ಯಶವಂತಪುರ ಪೊಲೀಸರು ತನಿಖೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮದುವೆಗಾಗಿ ಚಿನ್ನದ ವ್ಯಾಪಾರಿ ಮನೆಗೆ ಕನ್ನ

ಮನೋಹರ್‌ ಸಿಂಗ್‌ ಮದುವೆ ಏಪ್ರಿಲ್‌ 27ಕ್ಕೆ ನಿಗಧಿಯಾಗಿತ್ತು. ಇದಕ್ಕಾಗಿ ಹಣ ಹೊಂದಿಸಲು ಆತ ಸಂಚು ರೂಪಿಸಿದ್ದ. ಚಿನ್ನದ ವ್ಯಾಪಾರಿ ಕಮಲ್‌ ಸಿಂಗ್‌ ಅವರ ಮನೆಯಲ್ಲಿ 4 ಕೇಜಿ ಚಿನ್ನಾಭರಣ, 50 ಲಕ್ಷ ಹಣವಿದೆ ಎಂದು ಆತನಿಗೆ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಆತನ ಕಮಲ್‌ ಸಿಂಗ್‌ ಮನೆಗೆ ತನ್ನ ಸಹಚರರೊಂದಿಗೆ ನುಗ್ಗಿದ್ದ. ಆದರೆ ಆತನ ನಸೀಬು ಕೆಟ್ಟು ಕೇವಲ 15 ಗ್ರಾಂ ಚಿನ್ನ ಮಾತ್ರ ಸಿಕ್ಕಿತ್ತು.