36 ದಿನದಲ್ಲಿ ಶೇ.5ರಿಂದ ಶೇ.15 ಲಾಭಾಂಶದ ಆಸೆ ತೋರಿಸಿದ್ದ ವಂಚಕರು, ಪೊಲೀಸರಿಂದ ಇಬ್ಬರ ಬಂಧನ. 

ಬೆಂಗಳೂರು(ಏ.28): ಕರೆನ್ಸಿ ಟ್ರೇಡಿಂಗ್‌ ವ್ಯವಹಾರದಲ್ಲಿ ಅಧಿಕ ಲಾಭಾಂಶ ನೀಡುವುದಾಗಿ ನಂಬಿಸಿ ಸುಮಾರು 870ಕ್ಕೂ ಹೆಚ್ಚಿನ ಜನರಿಂದ .31 ಕೋಟಿಗೂ ಅಧಿಕ ಹಣ ವಸೂಲಿ ಮಾಡಿ ವಂಚಿಸಿದ್ದ ಇಬ್ಬರು ವಂಚಕರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ನಾಗದೇವನಹಳ್ಳಿ ಸಮೀಪದ ಜ್ಞಾನಭಾರತಿ ಬಡಾವಣೆ ನಿವಾಸಿ ಅಶೋಕ್‌ ಮೊಗವೀರ ಹಾಗೂ ಯಲಹಂಕದ ಮಾರುತಿ ನಗರದ ಜೆ.ಜೋಜಿಪೌಲ್‌ ಅಲಿಯಾಸ್‌ ಜಾಜಿಪಾಲ್‌ ಬಂಧಿತರಾಗಿದ್ದು, ಆರೋಪಿಗಳಿಂದ ನಕಲಿ ದಾಖಲೆ ಪತ್ರಗಳನ್ನು ಜಪ್ತಿ ಮಾಡಲಾಗಿದೆ.

ಹಣ ರೀಫಂಡ್ ಮಾಡಿಸಿಕೊಳ್ಳೋದು ಹೇಗೆ ಎಂದು ಗೂಗಲ್ ಮಾಡಿ 5 ಲಕ್ಷ ಕಳಕೊಂಡ ಯುವಕ

ಇತ್ತೀಚೆಗೆ ರಾಜಾಜಿನಗರದ ಡಾ. ರಾಜ್‌ಕುಮಾರ್‌ ರಸ್ತೆಯಲ್ಲಿರುವ ಆರೋಪಿಗಳ ಒಡೆತನದ ‘ಸ್ಯಾಂಜೋಸ್‌ ವೆಲ್ತ್‌ ಮ್ಯಾನೇಜ್ಮೆಂಟ್‌ ಕಂಪನಿ’ಯಲ್ಲಿ .27 ಲಕ್ಷ ಹೂಡಿಕೆ ಮಾಡಿ ಮೋಸ ಹೋಗಿರುವುದಾಗಿ ರಾಜಾಜಿನಗರ ಠಾಣೆಗೆ ವೈ.ಎನ್‌.ಅನಿತಾ ಎಂಬುವರು ದೂರು ನೀಡಿದ್ದರು. ಈ ದೂರಿನ ಬಗ್ಗೆ ತನಿಖೆ ಕೈಗೆತ್ತಿಕೊಂಡ ಸಿಸಿಬಿಯ ಆರ್ಥಿಕ ಅಪರಾಧ ದಳದ ಇನ್‌ಸ್ಪೆಕ್ಟರ್‌ ಕವಿತಾ ನೇತೃತ್ವದ ತಂಡ, ಗೋವಾ ರಾಜ್ಯದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಿ ನಗರಕ್ಕೆ ಕರೆ ತಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೇಗೆ ವಂಚನೆ:

2019ರಲ್ಲಿ ಪಾಲುದಾರಿಕೆಯಲ್ಲಿ ‘ಸ್ಯಾಂಜೋಸ್‌ ವೆಲ್ತ್‌ ಮ್ಯಾನೇಜ್ಮೆಂಟ್‌’ ಕಂಪನಿಯನ್ನು ಅಶೋಕ್‌ ಹಾಗೂ ಜಾಜಿಪಾಲ್‌ ಆರಂಭಿಸಿದ್ದರು. ತಮ್ಮ ಕಂಪನಿಯಲ್ಲಿ ಬಂಡವಾಳ ತೊಡಗಿಸಿದರೆ 36 ದಿನಗಳಿಗೆ ಹೂಡಿಕೆ ಮಾಡಿದ ಹಣದಲ್ಲಿ ಶೇ.5ರಿಂದ 15ರಷ್ಟುಪೇ ಔಟ್‌ ಹಾಗೂ ಬೇರೊಬ್ಬರಿಂದ ಹಣ ಹೂಡಿಕೆ ಮಾಡಿಸಿದರೆ ಶೇ.2ರಿಂದ 5ರಷ್ಟುಕಮಿಷನ್‌ ನೀಡುತ್ತೇವೆ ಎಂದು ಪ್ರಚಾರ ಮಾಡಿಸಿದ್ದರು. ಈ ಮಾತು ನಂಬಿದ ಸುಮಾರು 870ಕ್ಕೂ ಹೆಚ್ಚಿನ ಸಾರ್ವಜನಿಕರಿಂದ ಸುಮಾರು .31 ಕೋಟಿಗೂ ಅಧಿಕ ಹಣವನ್ನು ಆರೋಪಿಗಳು ಸಂಗ್ರಹಿಸಿದ್ದರು. ಆದರೆ ಯಾವುದೇ ಟ್ರೇಡಿಂಗ್‌ ಮಾಡದ ಆರೋಪಿಗಳು, ಸಾರ್ವಜನಿಕರಿಗೆ ಲಾಭಾಂಶ ನೀಡದೆ ವಂಚಿಸಿದ್ದರು. ಅದೇ ರೀತಿ ರಾಜಾಜಿನಗರದ ಅನಿತಾ ಅವರಿಗೆ ಸಹ ಆರೋಪಿಗಳು .27 ಲಕ್ಷ ವಂಚಿಸಿದ್ದರು.

ಪ್ಲೀಸ್, ಇಂಥ ಆಮಿಷಗಳಿಗೆ ಬಲಿಯಾಗ್ಬೇಡಿ; ಪಾರ್ಟ್ ಟೈಮ್ ಜಾಬ್ ಲಿಂಕ್ ಕ್ಲಿಕ್ ಮಾಡಿ 7.23ಲಕ್ಷ ಕಳೆದುಕೊಂಡ ಯುವತಿ

ಜನರ ಹಣದಲ್ಲಿ ರೆಸಾರ್ಟ್‌

ಜನರಿಂದ ಸಂಗ್ರಹಿಸಿದ್ದ ಹಣದಲ್ಲಿಯೇ ಹೂಡಿಕೆದಾರಿರರಿಗೆ ಪೇ ಔಟ್‌ ಮತ್ತು ಕಮಿಷನ್‌ ರೂಪದಲ್ಲಿ ಅಲ್ಪ ಹಣ ಮರಳಿಸಿದ ಆರೋಪಿಗಳು, ಇನ್ನುಳಿದ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿದ್ದರು. ಸ್ಯಾಂಜೋಸ್‌ ವೆಂಚ​ರ್‍ಸ್, ಗ್ರಾವಿಟಿ ಸ್ಟೋಟ್ಸ್‌ರ್‍ ಹಾಗೂ ಗ್ರಾವಿಟಿ ಕ್ಲಬ್‌ ರೆಸಾರ್ಟ್‌ ಪ್ರೈ.ಲಿ ಹೆಸರಿನಲ್ಲಿ ಹಣವನ್ನು ಅಶೋಕ್‌ ಹಾಗೂ ಪಾಲ್‌ ತೊಡಗಿಸಿದ್ದರು. ಮಲ್ಪೆ, ಮಂಗಳೂರು ಹಾಗೂ ಮಡಿಕೇರಿಯಲ್ಲಿ ರೆಸಾರ್ಟ್‌ ಸ್ಥಾಪಿಸಲು ಆರೋಪಿಗಳು ಹಣ ತೊಡಗಿಸಿದ್ದರು.

ಜೊತೆಯಾಗಿದ್ದು ಹೇಗೆ?

ಖಾಸಗಿ ಬ್ಯಾಂಕಿನಲ್ಲಿ ಸಾಲದ ಏಜೆಂಟ್‌ಗಳಾಗಿ ಕೇರಳ ಮೂಲದ ಎಂಬಿಎ ಪದವೀಧರ ಜಾಜಿಪಾಲ್‌ ಹಾಗೂ ಉಡುಪಿಯ ಅಶೋಕ್‌ ಕೆಲಸ ಮಾಡುತ್ತಿದ್ದರು. ಆಗ ಇಬ್ಬರ ನಡುವೆ ಸ್ನೇಹವಾಗಿದೆ. ಬಳಿಕ ಈ ಗೆಳೆತನದಲ್ಲಿ ಕಂಪನಿ ಸ್ಥಾಪಿಸಿ ಜನರಿಗೆ ವಂಚಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.