ಬೆಂಗಳೂರು: ಕೇಳಿದ ಬೈಕ್ ಕದ್ದು ಕೊಡ್ತಿದ್ದ ಗ್ಯಾಂಗ್ ಅಂದರ್..!
ಡಿಮ್ಯಾಂಡ್ ಇದ್ದ ಬೈಕ್ ಮಾತ್ರ ಕದ್ದು ಮಾರಾಟ, ಗಿರಾಕಿ ಕೇಳಿದ ಕಂಪನಿಯ ಬೈಕ್‌ಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ, ಮೂವರು ಖತರ್ನಾಕ್ ಕಳ್ಳರ ಬಂಧನ, 16 ಬೈಕ್‌ಗಳ ಜಪ್ತಿ
ಬೆಂಗಳೂರು(ಆ.29): ಗಿರಾಕಿಗಳು ಕೇಳಿದ ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿ ಮಾರುತ್ತಿದ್ದ ಮೂವರು ಖತರ್ನಾಕ್ ಕಳ್ಳರನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಾಗಲಗುಂಟೆಯ ಕೆ.ಮಲ್ಲಿಕಾರ್ಜುನ ಅಲಿಯಾಸ್ ಮಲ್ಲಿ(31), ಕಿರಣ್ ಕುಮಾರ್ ಅಲಿಯಾಸ್ ಕಿರಣ್(27), ಅಂಜಿನಿ ಅಲಿಯಾಸ್ ಅಂಜಿ(23) ಬಂಧಿತರು. ಆರೋಪಿಗಳು ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ .12.50 ಲಕ್ಷ ಮೌಲ್ಯದ ವಿವಿಧ ಕಂಪನಿಗಳ 16 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳ ಬಂಧನದಿಂದ ಸೋಲದೇವನಹಳ್ಳಿ ಠಾಣೆ 9, ಶಿರಾ, ತುಮಕೂರು ಟೌನ್, ನೆಲಮಂಗಲ ಗ್ರಾಮೀಣ ಮತ್ತು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ತಲಾ ಒಂದು ಸೇರಿದಂತೆ ಒಟ್ಟು 13 ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Hassan: ಕಲುಷಿತ ಆಹಾರ ಸೇವಿಸಿ ಮೃತಪಟ್ಟ ದಂಪತಿ ಸಾವಿನ ರಹಸ್ಯ ಬಯಲು: ಮಗನೇ ತಂದೆ-ತಾಯಿಗೆ ವಿಷ ಹಾಕಿದ
ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯ ಚಿಕ್ಕಸಂದ್ರ ನಿವಾಸಿ ಲೋಕೇಶ್ ಎಂಬುವವರು ಗಾರೆ ಕೆಲಸ ಮಾಡುತ್ತಾರೆ. ಆ.13ರಂದು ತರಬನಹಳ್ಳಿ ಉಡುಪಿ ಹೋಟೆಲ್ ಕಟ್ಟಡದ ಸೆಲ್ಲಾರ್‌ನ ಪಾರ್ಕಿಂಗ್ ಸ್ಥಳದಲ್ಲಿ ತಮ್ಮ ಬಜಾಜ್ ಪಲ್ಸರ್ ದ್ವಿಚಕ್ರ ವಾಹನ ನಿಲುಗಡೆ ಮಾಡಿ ಕೆಲಸಕ್ಕೆ ತೆರಳಿದ್ದರು. ಮಾರನೇ ದಿನ ಬಂದು ನೋಡಿದಾಗ ದ್ವಿಚಕ್ರ ವಾಹನ ಕಳ್ಳತನವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತ ಆರೋಪಿಗಳ ಪೈಕಿ ಮಲ್ಲಿಕಾರ್ಜುನ ಬಳ್ಳಾರಿ ಜಿಲ್ಲೆ ಸಂಡೂರು ಮೂಲದವನು. 2009-10ನೇ ಸಾಲಿನಲ್ಲಿ ಸಂಡೂರಿನಲ್ಲಿ ಕಬ್ಬಿಣದ ಹ್ಯಾಂಗ್ಲರ್‌ಗಳನ್ನು ಕಳವು ಮಾಡಿ ಜೈಲು ಸೇರಿದ್ದ. ಬಳಿಕ ಜಾಮೀನು ಪಡೆದು ಹೊರಬಂದಿದ್ದ. ಕಳೆದ 8 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಲಾರಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. ಆರೋಪಿ ಕಿರಣ್ ಕುಮಾರ್ ಹಾಸನ ಜಿಲ್ಲೆ ಅರಸಿಕೆರೆ ಮೂಲದವನು. ಸುಮಾರು 9 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಲೋಡ್ ಮತ್ತು ಅನ್‌ಲೋಡ್ ಕೆಲಸ ಮಾಡಿಕೊಂಡಿದ್ದ. ಇನ್ನು ಆರೋಪಿ ಅಂಜಿನಿ ಬಳ್ಳಾರಿ ಜಿಲ್ಲೆ ಸಂಡೂರು ಮೂಲದವನು. ಮೂರು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಕೂಲಿ ಕೆಲಸ ಮಾಡಿಕೊಂಡಿದ್ದ.
ಮೂವರು ಆರೋಪಿಗಳು ಕೆಲ ವರ್ಷಗಳಿಂದ ಪರಸ್ಪರ ಪರಿಚಿತರು. ಬಾಗಲಗುಂಟೆಯಲ್ಲಿ ಮನೆ ಮಾಡಿಕೊಂಡು ನೆಲೆಸಿದ್ದರು. ಮೂವರು ಹಗಲಿನಲ್ಲಿ ಆಟೋ ಚಾಲನೆ ಮಾಡಿಕೊಂಡು ರಾತ್ರಿ ವೇಳೆ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.
ಅನ್ಯಧರ್ಮದವನ ಜತೆ ತೆರಳುತ್ತಿದ್ದ ಬೂರ್ಖಾಧಾರಿ ಯುವತಿಗೆ ನಿಂದನೆ: ಕೋಲಾರ ಯುವಕನ ಬಂಧನ
ನಗರದಲ್ಲಿ ಕದ್ದು ಬಳ್ಳಾರಿ, ಸಂಡೂರಿನಲ್ಲಿ ಮಾರಾಟ
ಆರೋಪಿಗಳು ದುಶ್ಚಟಗಳ ದಾಸರಾಗಿದ್ದಾರೆ. ತಮ್ಮ ಚಟಗಳು ಹಾಗೂ ಮೋಜು-ಮಸ್ತಿಗೆ ಸುಲಭವಾಗಿ ಹಣ ಹೊಂದಿಸಲು ದ್ವಿಚಕ್ರ ವಾಹನ ಕಳ್ಳತನಕ್ಕೆ ಇಳಿದಿದ್ದರು. ರಾತ್ರಿ ವೇಳೆ ಮನೆ ಎದುರು, ಪಾರ್ಕಿಂಗ್ ಸ್ಥಳಗಳು, ಕಚೇರಿಗಳ ಎದುರು ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನಗಳನ್ನು ಟಾರ್ಗೆಟ್ ಮಾಡಿ ಹ್ಯಾಂಡಲ್ ಲಾಕ್ ಮುರಿದು ಕಳವು ಮಾಡುತ್ತಿದ್ದರು. ಕದ್ದ ದ್ವಿಚಕ್ರ ವಾಹನಗಳನ್ನು ಬಳ್ಳಾರಿ, ಸಂಡೂರು ಕಡೆಗೆ ತೆಗೆದುಕೊಂಡು ಹೋಗಿ ಗಿರಾಕಿಗಳನ್ನು ಹಿಡಿದು ಮಾರಾಟ ಮಾಡಿ ಹಣ ಪಡೆದು ಹಂಚಿಕೊಂಡು ಮೋಜು-ಮಸ್ತಿ ಮಾಡುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.
ನಕಲಿ ನಂ. ಪ್ಲೇಟ್ ಹಾಕಿ ಮಾರಾಟ
ಆರೋಪಿಗಳು ಬಳ್ಳಾರಿ ಹಾಗೂ ಸಂಡೂರು ಕಡೆಯ ಗಿರಾಕಿಗಳು ಕೇಳಿದ ಕಂಪನಿ ದ್ವಿಚಕ್ರ ವಾಹನಗಳನ್ನು ಬೆಂಗಳೂರಿನಲ್ಲಿ ಹುಡುಕಿ ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದರು. ಗಿರಾಕಿ ಪಲ್ಸರ್ ದ್ವಿಚಕ್ರ ವಾಹನ ಬೇಕು ಎಂದರೆ, ಆರೋಪಿಗಳು ಪಲ್ಸರ್ ದ್ವಿಚಕ್ರ ವಾಹನವನ್ನೇ ಟಾರ್ಗೆಟ್ ಮಾಡಿ ಎಗರಿಸುತ್ತಿದ್ದರು. ಕದ್ದ ದ್ವಿಚಕ್ರ ವಾಹನಗಳಿಗೆ ನಕಲಿ ನೋಂದಣಿ ಫಲಕ ಅಳವಡಿಸಿ ಮಾರಾಟ ಮಾಡುತ್ತಿದ್ದರು. ಕೆಲ ದಿನಗಳಲ್ಲಿ ದ್ವಿಚಕ್ರ ವಾಹನದ ದಾಖಲೆ ತಲುಪಿಸುವುದಾಗಿ ಗಿರಾಕಿಗಳಿಗೆ ಭರವಸೆ ನೀಡುತ್ತಿದ್ದರು. ಮತ್ತೆ ಹಳೆ ಗಿರಾಕಿ ಬಳಿ ತೆರಳದೆ ಹೊಸ ಗಿರಾಕಿ ಹುಡುಕಿ ಕದ್ದ ದ್ವಿಚಕ್ರ ವಾಹನಗಳನ್ನು ವಿಲೇವಾರಿ ಮಾಡುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.