ಚಿತ್ರದುರ್ಗ: 50ಕ್ಕೂ ಅಧಿಕ ಕುರಿ ಕದ್ದು ಪರಾರಿಯಾದ ಖದೀಮರು, ಕಂಗಾಲಾದ ಮಂಗಳಮುಖಿಯರು..!
ಕಳೆದ ಎರಡು ದಿನದ ಹಿಂದಷ್ಟೇ ಚಿತ್ರದುರ್ಗ ತಾಲ್ಲೂಕಿನ ಕೊಳಹಾಳ್ ಗ್ರಾಮದಲ್ಲಿ ಮಂಗಳಮುಖಿಯಾದ ಅರುಂಧತಿ ಹಾಗೂ ಅವರ ಸಂಗಡಿಗರು ಸಾಕಿದ್ದ ಸುಮಾರು 5 ಲಕ್ಷಕ್ಕೂ ಅಧಿಕ ಮೌಲ್ಯದ 50ಕ್ಕೂ ಅಧಿಕ ಕುರಿ-ಮೇಕೆಗಳನ್ನು ಕಳ್ಳರು ರಾತ್ರೋರಾತ್ರಿ ಕಳ್ಳತನ ಮಾಡಿ ಪರಾರಿ ಆಗಿದ್ದಾರೆ.
ಕಿರಣ್.ಎಲ್.ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ(ಅ.31): ಇವರು ಇನ್ನೊಬ್ಬರಿಗೆ ತೊಂದರೆ ಕೊಡದೇ ಸ್ವಾವಲಂಬಿ ಜೀವನ ನಡೆಸುವ ಸಮುದಾಯ. ಇಂತಹ ವರ್ಗವನ್ನೇ ಟಾರ್ಗೆಟ್ ಮಾಡಿರೋ ಕಳ್ಳರು ಅವರ ಸ್ವಾಭಿಮಾನಿ ಬದುಕಿಗೆ ಕನ್ನ ಹಾಕಿದ್ದು ಅವರ ಜೀವನ ಬೀದಿಗೆ ಬಂದಿದೆ. ಅಷ್ಟಕ್ಕೂ ಆ ಸಮುದಾಯ ಯಾವುದು? ಅವರಿಗೆ ಆಗಿರುವ ಸಮಸ್ಯೆ ಆದ್ರು ಏನು ಅನ್ನೋದ್ರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ... ಸ್ವಾವಲಂಬಿ ಜೀವನ ಸಾಗಿಸಲೆಂದು ಸಾಕಿದ್ದ ಸುಮಾರು 50ಕ್ಕೂ ಅಧಿಕ ಕುರಿಗಳನ್ನು ಕದ್ದು ಪರಾರಿ ಆಗಿರೋ ಕಳ್ಳರು. ನಮಗೆ ನ್ಯಾಯ ಕೊಡಿಸಿ ಎಂದು ಎಸ್ಪಿ ಮೊರೆ ಹೋಗ್ತಿರೋ ಮಂಗಳಮುಖಿಯರು. ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗದಲ್ಲಿ.
ಹೌದು, ಕಳೆದ ಎರಡು ದಿನದ ಹಿಂದಷ್ಟೇ ಚಿತ್ರದುರ್ಗ ತಾಲ್ಲೂಕಿನ ಕೊಳಹಾಳ್ ಗ್ರಾಮದಲ್ಲಿ ಮಂಗಳಮುಖಿಯಾದ ಅರುಂಧತಿ ಹಾಗೂ ಅವರ ಸಂಗಡಿಗರು ಸಾಕಿದ್ದ ಸುಮಾರು 5 ಲಕ್ಷಕ್ಕೂ ಅಧಿಕ ಮೌಲ್ಯದ 50ಕ್ಕೂ ಅಧಿಕ ಕುರಿ-ಮೇಕೆಗಳನ್ನು ಕಳ್ಳರು ರಾತ್ರೋರಾತ್ರಿ ಕಳ್ಳತನ ಮಾಡಿ ಪರಾರಿ ಆಗಿದ್ದಾರೆ. ಕಷ್ಟ ಪಟ್ಟು ನಾವು ಐದು ಮಂದಿ ಮಂಗಳಮುಖಿರು ಸೇರಿ 50ಕ್ಕೂ ಅಧಿಕ ಕುರಿ-ಮೇಕೆಗಳ ಸಾಕಾಣಿಕೆ ಮಾಡಿದ್ದೆವು. ಕೆಲಸದ ನಿಮಿತ್ತ ಬೇರೆ ಕಡೆ ನಾವು ಹೋಗಿದ್ದನ್ನೇ ಬಳಸಿಕೊಂಡಿರೋ ಕಳ್ಳರು ಎಲ್ಲಾ ಮೇಕೆಗಳನ್ನು ಕದ್ದು ಪರಾರಿ ಆಗಿದ್ದಾರೆ. ಯಾರಿಗೂ ತೊಂದರೆ ಕೊಡದೇ ಸ್ವಾಭಿಮಾನಿಯಾಗಿ ಜೀವನ ಕಟ್ಟಕೊಂಡಿದ್ದ ನಮಗೆ ಮರುಭೂಮಿಯಲ್ಲಿ ಬಿಟ್ಟಂತಾಗಿದೆ. ನಾವು ಅಲ್ಲಿ ಯಾರೊಟ್ಟಿಗೂ ಮನಸ್ತಾಪ ಮಾಡಿಕೊಂಡಿರಲಿಲ್ಲ. ನಿಯತ್ತಾಗಿ ದುಡಿದು ಜೀವನ ಸಾಗಿಸೋ ನಮ್ಮಂತಹ ಮಂಗಳಮುಖಿಯರಿಗೂ ಕೆಟ್ಟ ಜನರು ನೆಮ್ಮದಿಯಿಂದ ಇರಲು ಬಿಡಲ್ಲ ಎಂದ್ರೆ ನಾವು ಹೇಗೆ ಜೀವನ ಸಾಗಿಸಬೇಕು. ಸುಮಾರು 5 ಲಕ್ಷಕ್ಕೂ ಅಧಿಕ ಮೌಲ್ಯದ ಮೇಕೆಗಳ ಕಳ್ಳತನದಿಂದ ನಮ್ಮ ಬದುಕು ದುಸ್ಥಿರ ವಾಗಿದೆ ಕೂಡಲೇ ಪೊಲೀಸರು ನಮಗೆ ನ್ಯಾಯ ಕೊಡಿಸಿ ಎಂದು ನೊಂದ ಮಂಗಳಮುಖಿ ಅರುಂಧತಿ ಮನವಿ ಮಾಡಿಕೊಂಡಿದ್ದಾರೆ.
ಬರ ಘೋಷಣೆಯಾದ್ರೂ ಸಿಕ್ಕಿಲ್ಲ ಪರಿಹಾರ: ಜಾನುವಾರುಗಳೊಂದಿಗೆ ಗುಳೆ ಹೊರಟ ಜನ
ಸಮಾಜದಲ್ಲಿ ಭಿಕ್ಷಾಟನೆ ಯಾಕೆ ಮಾಡ್ತೀರಿ ನಿಮಗೆ ಅಂಗಾಗಗಳು ಎಲ್ಲಾ ಸರಿಯಾಗಿದೆ ಎಂದು ಹೇಳುವ ಈ ಜನರ ಮಧ್ಯೆ, ನಮ್ಮ ಕರ್ನಾಟಕದಲ್ಲಿಯೇ ಮಾದರಿ ಸ್ವಾವಲಂಬಿ ಜೀವನ ಸಾಗಿಸ್ತಿದ್ದದ್ದು ನನ್ನ ಸ್ನೇಹಿತೆ ಅರುಂಧತಿ. ಮೊದಲು ನಾಲ್ಕು ಕುರಿಗಳಿಂದ ಶುರುವಾದ ಈಕೆಯ ಹೈನುಗಾರಿಕೆ, ಕುರಿ-ಮೇಕೆ ಸಾಕಾಣಿಕೆ ಇಂದು 50ಕ್ಕೂ ಅಧಿಕ ಸಂಖ್ಯೆಯಲ್ಲಿ ಸಾಕಾಣಿಕೆ ಮಾಡುವ ಹಂತಕ್ಕೆ ತಲುಪಿತ್ತು. ಒಂದು ಬಾಡಿಗೆ ಶೆಡ್ ನಲ್ಲಿ ಹೈನುಗಾರಿಕೆ ಜೊತೆಹೆ ತನ್ನ ಕಷ್ಟದ ಜೀವನ ಸಾಗಿಸ್ತಿದ್ದ ಅವಳ ಏಳಿಗೆಯನ್ನು ಸಹಿಸದ ಕೀಚಕರು ಇಂದು ದುಷ್ಕೃತ್ಯ ಎಸಗಿರೋದು ತುಂಬಾ ನೋವು ತಂದಿದೆ. ಸರಿ ಸುಮಾರು ಲಕ್ಷಾಂತರ ಮೌಲ್ಯದ ಕುರಿ, ಮೇಕೆಗಳು ಕಳವು ಆಗಿದ್ದಾವೆ. ನಾವು ಯಾರ ಬಳಿಯೂ ಹೋದ್ರು ಮಂಗಳಮುಖಿ ಎನ್ನುವ ಕಾರಣಕ್ಕೆ ಪರಿಪೂರ್ಣ ಸಾಥ್ ಸಿಗ್ತಿಲ್ಲ. ಹಾಗಾಗಿ ಇಂದು ಎಸ್ಪಿ ಬಳಿ ಬಂದಿದ್ದೇವೆ, ಕೂಡಲೇ ಕಳ್ಳರಿಗೆ ಎಡೆಮುರಿಕಟ್ಟಿ ನಮ್ಮ ಸ್ವಾಭಿಮಾನಿ ಸ್ನೇಹಿತೆಗೆ ನ್ಯಾಯ ಕೊಡಿಸಿ ಎಂದು ಹೋರಾಟಗಾರ್ತಿ ಮಂಗಳಮುಖಿ ವೈಶಾಲಿ ಒತ್ತಾಯಿಸಿದ್ದಾರೆ.
ಒಟ್ಟಾರೆಯಾಗಿ ರಸ್ತೆ ಬದಿಯಲ್ಲಿ ಭಿಕ್ಷಾಟನೆ ಮಾಡುವ ಮಂಗಳಮುಖಿಯರ ಮಧ್ಯೆ, ಅರುಂಧತಿ ಅವರು ಯಾರಿಗೂ ತೊಂದರೆ ಕೊಡಬಾರದು ಎಂದು ಸ್ವಾವಲಂಬಿ ಕೆಲಸ ಮಾಡುತಿದ್ದರು, ಕಳ್ಳ, ಖದೀಮರು ಅವರ ಹೊಟ್ಟೆ ಮೇಲೆ ಬರೆ ಹಾಕಿರೋದು ತುಂಬಾ ನೋವಿನ ಸಂಗತಿ. ಆದಷ್ಟು ಬೇಗ ಪೊಲೀಸರು ಕಳ್ಳರನ್ನು ಬಂಧಿಸಿ ಅರುಂಧತಿಗೆ ನ್ಯಾಯ ಒದಗಿಸಬೇಕಿದೆ.