ಪೊಲೀಸರ ಸೋಗಿನಲ್ಲಿ ತಮಿಳುನಾಡು ಮೂಲದ ವೃದ್ಧನನ್ನು ಬೆದರಿಸಿ ಲಕ್ಷಾಂತರ ರುಪಾಯಿ ನಗದು ಹಾಗೂ ಚಿನ್ನದ ಗಟ್ಟಿದೋಚಿ ಪರಾರಿಯಾಗಿದ್ದ ಹೋಂ ಗಾರ್ಡ್‌ ಸೇರಿ ಮೂವರನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಫೆ.11) : ಪೊಲೀಸರ ಸೋಗಿನಲ್ಲಿ ತಮಿಳುನಾಡು ಮೂಲದ ವೃದ್ಧನನ್ನು ಬೆದರಿಸಿ ಲಕ್ಷಾಂತರ ರುಪಾಯಿ ನಗದು ಹಾಗೂ ಚಿನ್ನದ ಗಟ್ಟಿದೋಚಿ ಪರಾರಿಯಾಗಿದ್ದ ಹೋಂ ಗಾರ್ಡ್‌ ಸೇರಿ ಮೂವರನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಾಪೂಜಿನಗರ ನಿವಾಸಿ ಮಂಜುನಾಥ(39), ಶ್ರೀನಗರ ನಿವಾಸಿ ಅರುಣ್‌ ಕುಮಾರ್‌(33) ಹಾಗೂ ಗಿರಿನಗರದ ಈರಣ್ಣ ಗುಡ್ಡೆ ನಿವಾಸಿ ವಿ.ನಾಗರಾಜ(31) ಬಂಧಿತರು. ಆರೋಪಿಗಳಿಂದ .6 ಲಕ್ಷ ನಗದು, 167 ಗ್ರಾಂ ತೂಕದ ಚಿನ್ನದ ಬಿಸ್ಕತ್‌, ಕೃತ್ಯಕ್ಕೆ ಬಳಸಿದ್ದ ಕಾರು ಹಾಗೂ ಆಟೋ ರಿಕ್ಷಾವನ್ನು ಜಪ್ತಿ ಮಾಡಲಾಗಿದೆ.

ಗಂಡ ಹೆಂಡತಿ ನಡುವೆ ಅನೈತಿಕ ಸಂಬಂಧಕ್ಕೆ ಗಲಾಟೆ: ಮನೆ ಬಳಿ ಹೋಗಿ ಎರಡನೇ ಹೆಂಡತಿ ಸೀಮಂತ ವೇಳೆ ಹೊಡೆದಾಟ

ಪ್ರಕರಣದ ವಿವರ:

ದೂರುದಾರ ಸುಂದರಂ ಅವರು ಕೊಯಮತ್ತೂರಿನ ಚಿನ್ನಾಭರಣ ವ್ಯಾಪಾರಿ ಉಪೇಂದ್ರನಾಥ(Upendranath) ಅವರ ಬಳಿ ಕಳೆದ ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಉಪೇಂದ್ರನಾಥ ಅವರು ಸೂಚಿಸಿದ ಜುವೆಲ್ಲರಿ ಅಂಗಡಿಗೆ ಚಿನ್ನಾಭರಣ ಕೊಟ್ಟು ಬಳಿಕ ಚಿನ್ನದ ಗಟ್ಟಿಪಡೆದುಕೊಂಡು ಬರುವ ಕೆಲಸ ಮಾಡುತ್ತಿದ್ದಾರೆ. ಫೆ.5ರಂದು ಉಪೇಂದ್ರನಾಥ ಅವರು 180 ಗ್ರಾಂ ಚಿನ್ನಾಭರಣ ಹಾಗೂ 6 ಲಕ್ಷ ರು. ನಗದು ಹಣವನ್ನು ಸುಂದರಂಗೆ ನೀಡಿ ದಾವಣಗೆರೆ ಮತ್ತು ಶಿವಮೊಗ್ಗದಲ್ಲಿ ಜುವೆಲ್ಲರಿ ಅಂಗಡಿಗೆ ಚಿನ್ನಾಭರಣ ಕೊಟ್ಟು ಅವರಿಂದ ಚಿನ್ನದ ಗಟ್ಟಿಪಡೆಯುವಂತೆ ಸೂಚಿಸಿದ್ದರು. ಅದರಂತೆ ಸುಂದರಂ ಅವರು ಫೆ.5ರಂದು ದಾವಣಗೆರೆಯಲ್ಲಿ ಕೆಲಸ ಮುಗಿಸಿದ ನಂತರ ಫೆ.6ರಂದು ದಾವಣಗೆರೆಯಿಂದ ಶಿವಮೊಗ್ಗಕ್ಕೆ ಬಂದು ಜುವೆಲ್ಲರಿ ಅಂಗಡಿಗೆ 180 ಗ್ರಾಂ ಚಿನ್ನಾಭರಣ ಕೊಟ್ಟು ಅವರಿಂದ 3 ಲಕ್ಷ ರು. ಮೌಲ್ಯದ ಚಿನ್ನದ ಬಿಸ್ಕತ್‌ ಪಡೆದು ಅಂದೇ ರಾತ್ರಿ ಶಿವಮೊಗ್ಗದಿಂದ ಬೆಂಗಳೂರು ಬಸ್‌ ಹತ್ತಿದ್ದಾರೆ. ಫೆ.7ರಂದು ಮುಂಜಾನೆ 4 ಗಂಟೆಗೆ ಮೆಜೆಸ್ಟಿಕ್‌ಗೆ ಬಂದು ಅಲ್ಲಿಂದ ಮೈಸೂರು ರಸ್ತೆಯ ಕೆಎಸ್‌ಆರ್‌ಟಿಸಿ ಸ್ಯಾಟ್‌ಲೈಟ್‌ ಬಸ್‌ ನಿಲ್ದಾಣಕ್ಕೆ ಬಂದಿದ್ದಾರೆ.

ತಪಾಸಣೆ ನೆಪದಲ್ಲಿ ಸುಲಿಗೆ:

ನಂತರ ಸುಂದರಂ ತಮಿಳುನಾಡಿನ ಸೇಲಂಗೆ ತೆರಳುವ ಬಸ್‌ನಲ್ಲಿ ಕುಳಿತಿದ್ದಾರೆ. ಆಗ ಖಾಕಿ ಪ್ಯಾಟ್‌ ಧರಿಸಿದ್ದ ಹೋಂ ಗಾರ್ಡ್‌ ನಾಗರಾಜ ಮತ್ತು ಆಟೋ ಚಾಲಕ ಮಂಜುನಾಥ ಇಬ್ಬರು ಆ ಬಸ್‌ನಲ್ಲಿದ್ದ ಸುಂದರಂ ಬಳಿ ಬಂದು ‘ನಾವು ಪೊಲೀಸರು’ ಬ್ಯಾಗ್‌ ತಪಾಸಣೆ ಮಾಡಬೇಕು ಎಂದು ಸುಂದರಂ ಅವರನ್ನು ಬಸ್‌ನಿಂದ ಕೆಳಗೆ ಇಳಿಸಿ ಬಳಿಕ ಮುಂದಕ್ಕೆ ಕರೆದುಕೊಂಡು ಹೋಗಿದ್ದಾರೆ. ಇದೇ ಸಮಯಕ್ಕೆ ಆರೋಪಿ ಆಟೋ ಚಾಲಕ ಅರುಣ್‌ಕುಮಾರ್‌ ಬಿಳಿ ಬಣ್ಣದ ಕಾರಿನಲ್ಲಿ ಅಲ್ಲಿಗೆ ಬಂದಿದ್ದು, ಸುಂದರಂ ಅವರನ್ನು ಆ ಕಾರಿನಲ್ಲಿ ಕೂರಿಸಿಕೊಂಡು ಮೂವರು ಕೊಂಚ ಮುಂದೆ ಹೋಗಿದ್ದಾರೆ.

ಬೆದರಿಕೆ ಹಾಕಿ ಸುಲಿಗೆ:

ಬಳಿಕ ಆರೋಪಿಗಳು ‘ನಿನ್ನ ಬ್ಯಾಗ್‌ನಲ್ಲಿ ಏನೇನಿದೆ? ಎಲ್ಲವನ್ನೂ ಹೊರಗೆ ತೆಗೆಯಬೇಕು. ಇಲ್ಲವಾದರೆ, ನಿನ್ನನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ಬೆದರಿಕೆ ಹಾಕಿದ್ದಾರೆ. ನಂತರ ಆರೋಪಿಗಳೇ ಸುಂದರಂ ಅವರ ಬ್ಯಾಗಿನಲ್ಲಿದ್ದ ಆರು ಲಕ್ಷ ರು. ನಗದು ಹಾಗೂ 167 ಗ್ರಾಂ ತೂಕದ ಚಿನ್ನದ ಬಿಸ್ಕತ್‌ ಕಿತ್ತುಕೊಂಡಿದ್ದಾರೆ. ಈ ವಿಚಾರವನ್ನು ಯಾರಿಗಾದರೂ ಹೇಳಿದರೆ, ಸುಮ್ಮನೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಬಳಿಕ ಕಾರಿನಲ್ಲಿ ಸ್ಯಾಟ್‌ಲೈಟ್‌ ಬಸ್‌ ನಿಲ್ದಾಣದ ಬಳಿ ಕರೆತಂದು ಬಿಟ್ಟು ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳು ಪರಸ್ಪರ ಪರಿಚಿತರು

ಬಂಧಿತ ಮೂವರು ಆರೋಪಿಗಳು ಪರಸ್ಪರ ಪರಿಚಿತರು. ಆರೋಪಿ ಹೋಂ ಗಾರ್ಡ್‌ ನಾಗರಾಜ ಕೆಎಸ್‌ಆರ್‌ಟಿಸಿಯ ಸ್ಯಾಟ್‌ಲೈಟ್‌ ಬಸ್‌ ನಿಲ್ದಾಣದಲ್ಲಿ ಅಂದು ರಾತ್ರಿ ಪಾಳಿ ಕೆಲಸ ಮಾಡುತ್ತಿದ್ದ. ಆರೋಪಿಗಳಾದ ಮಂಜುನಾಥ ಮತ್ತು ಅರುಣ್‌ ಕುಮಾರ್‌ ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಸುಂದರಂ ಬ್ಯಾಗ್‌ ಹಿಡಿದುಕೊಂಡು ಬಸ್‌ ಏರಿದ್ದನ್ನು ನಾಗರಾಜ ನೋಡಿದ್ದ. ಬ್ಯಾಗ್‌ನಲ್ಲಿ ಏನೋ ಇರಬಹುದು ಎಂದು ಭಾವಿಸಿ, ಅಲ್ಲೇ ಆಟೋ ನಿಲ್ದಾಣದಲ್ಲಿದ್ದ ಮಂಜುನಾಥನನ್ನು ಕರೆಸಿಕೊಂಡು ಪೊಲೀಸರ ಸೋಗಿನಲ್ಲಿ ಸುಲಿಗೆ ಮಾಡಿದ್ದರು.

Chikkamagaluru: ಮದ್ಯಪಾನಕ್ಕೆ ಹಣ ನೀಡದ ಪತ್ನಿ ಕೊಲೆ: ಹಂತಕ ಪತಿಗೆ ಜೀವಾವಧಿ ಸಜೆ

ಸಿಸಿಟಿವಿ ಸುಳಿವು ಆಧರಿಸಿ ಬಂಧನ

ಪ್ರಕರಣ ದಾಖಲಾದ ಬಳಿಕ ತನಿಖೆಗೆ ಇಳಿದ ಬ್ಯಾಟರಾಯನಪುರ ಠಾಣೆ ಇನ್ಸ್‌ಪೆಕ್ಟರ್‌ ನಿಂಗನಗೌಡ ಎ.ಪಾಟೀಲ್‌ ನೇತೃತ್ವದ ತಂಡ, ಸ್ಯಾಟ್‌ಲೈಟ್‌ ಬಸ್‌ ನಿಲ್ದಾಣದ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ ಹೋಂ ಗಾರ್ಡ್‌ ನಾಗರಾಜನ ಸುಳಿವು ಸಿಕ್ಕಿದೆ. ಬಳಿಕ ಮಾರನೇ ದಿನ ಕರ್ತವ್ಯಕ್ಕೆ ಗೈರಾಗಿ ಮನೆಯಲ್ಲೇ ಇದ್ದ ಹೋಂ ಗಾರ್ಡ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಸತ್ಯಾಂಶ ಬಯಲಿಗೆ ಬಂದಿದೆ. ಬಳಿಕ ಆರೋಪಿಗಳಾದ ಮಂಜುನಾಥ ಮತ್ತು ಅರುಣ್‌ನನ್ನು ಬಂಧಿಸಿದ್ದಾರೆ.