ಕೊಡಗು: ಪಕ್ಷದ ಕಾರ್ಯಕರ್ತರಂತೆ ನಟಿಸಿ ಮುಖಂಡರ ಜೇಬು ಕತ್ತರಿಸುತ್ತಿದ್ದ ಗ್ಯಾಂಗ್ ಅಂದರ್!
ತಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಬೇಕೆಂಬ ಹುಮ್ಮಸಿನ್ನಲ್ಲಿ ಓಡಾಡುತ್ತಿದ್ದವರಿಗೆ ಕಾರ್ಯಕ್ರಮ ಮುಗಿಯುವಷ್ಟರಲ್ಲಿ ಚಿಂತೆ ಶುರುವಾಗಿತ್ತು. ಅದೇನಪ್ಪ ಅಂದ್ರೆ ತಮ್ಮಮ್ಮ ಜೇಬಿನಲ್ಲಿದ್ದ ಸಾವಿರಾರು ರೂಪಾಯಿ ನಗದು ಹಾಗೂ ಅತ್ಯಗತ್ಯ ದಾಖಲೆಗಳಿದ್ದ ಪರ್ಸ್ ಮಂಗ ಮಾಯವಾಗಿತ್ತು. ಅದು ಒಬ್ಬಿಬ್ಬರದಲ್ಲ, ಬರೋಬ್ಬರಿ 10 ಕ್ಕೂ ಹೆಚ್ಚು ಜನರ ಪರ್ಸ್ಗಳು ಮಾಯವಾಗಿದ್ದವು.
ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಏ.5): ತಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಬೇಕೆಂಬ ಹುಮ್ಮಸಿನ್ನಲ್ಲಿ ಓಡಾಡುತ್ತಿದ್ದವರಿಗೆ ಕಾರ್ಯಕ್ರಮ ಮುಗಿಯುವಷ್ಟರಲ್ಲಿ ಚಿಂತೆ ಶುರುವಾಗಿತ್ತು. ಅದೇನಪ್ಪ ಅಂದ್ರೆ ತಮ್ಮಮ್ಮ ಜೇಬಿನಲ್ಲಿದ್ದ ಸಾವಿರಾರು ರೂಪಾಯಿ ನಗದು ಹಾಗೂ ಅತ್ಯಗತ್ಯ ದಾಖಲೆಗಳಿದ್ದ ಪರ್ಸ್ ಮಂಗ ಮಾಯವಾಗಿತ್ತು. ಅದು ಒಬ್ಬಿಬ್ಬರದಲ್ಲ, ಬರೋಬ್ಬರಿ 10 ಕ್ಕೂ ಹೆಚ್ಚು ಜನರ ಪರ್ಸ್ಗಳು ಮಾಯವಾಗಿದ್ದವು.
ಹೌದು ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಅವರ ಪರವಾಗಿ ಕಾರ್ಯಕರ್ತರ ಸಮಾವೇಶ ಮಾಡುವುದಕ್ಕೆ ಬಿಜೆಪಿ ರಾಜ್ಯ ಅಧ್ಯಕ್ಷ ವಿಜಯೇಂದ್ರ ಅವರು ಮಾರ್ಚ್ 27 ರಂದು ಕೊಡಗಿಗೆ ಆಗಮಿಸಿದ್ದರು. ಅಂದು ಅವರನ್ನು ಸ್ವಾಗತಿಸುವ ಕಾರ್ಯಕ್ರಮ ನಡೆದಿದ್ದ ಕುಶಾಲನಗರ ಹಾಗೂ ಕಾರ್ಯಕರ್ತರ ಸಭೆ ನಡೆದ ಮಡಿಕೇರಿಯಲ್ಲಿ ಹತ್ತಾರು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಪರ್ಸ್ಗಳು ಕಳೆದುಹೋಗಿದ್ದವು. ಅಷ್ಟಕ್ಕೂ ಅವುಗಳನ್ನು ಎಗರಿಸಿದ್ದು ಬೇರೆ ಯಾರು ಅಲ್ಲ, ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ಇದೇ 13 ಖದೀಮರು. ಹೌದು ಬಾಲು, ಗಿರೀಶ್, ರಂಗಣ್ಣ, ಹರೀಶ್, ಮೆಹಬೂಬ್ ಸುಹಾನ್, ಬೋಜಪ್ಪ, ದೊಡ್ಡಜಯಣ್ಣ, ಉಮೇಶ್, ರಾಮು, ವೆಂಕಟೇಶ್, ನಾಗರಾಜು, ಪುಟ್ಟರಾಜು ಹಾಗೂ ಜಯಣ್ಣ ಎಂಬುವರೇ ಕೊಡಗಿನ ಎರಡು ಕಡೆಗಳಲ್ಲಿ ಬಿಜೆಪಿ ಹತ್ತಾರು ಮುಖಂಡರ ಪರ್ಸ್ಗಳನ್ನು ಎಗರಿಸಿದ್ದವರು.
ಎಲ್ಲದಕ್ಕೂ ಸಜ್ಜಾಗೇ ರಾಜಕೀಯ ಪ್ರವೇಶ: ಮುಖಾಮುಖಿ ಸಂದರ್ಶನದಲ್ಲಿ ಯದುವೀರ್ ಒಡೆಯರ್ ಹೇಳಿದಿಷ್ಟು...
ಇದೀಗ ಈ ಖತರ್ನಾಕ್ಗಳು ಕೊಡಗು ಪೊಲೀಸರ ಅತಿಥಿಗಳಾಗಿದ್ದಾರೆ. ಅಷ್ಟಕ್ಕೂ ಶಿವಮೊಗ್ಗದಿಂದ ಈ ಖದೀಮರು ಬಂದು ಕೊಡಗಿನಲ್ಲಿ ಪ್ರಮುಖರ ನಾಯಕರ ಜೇಬಿಗೆ ಕತ್ತರಿ ಹಾಕುತ್ತಿದ್ದ ವಿಷಯವನ್ನು ಕೇಳಿದ್ರೆ ನೀವು ಬೆಚ್ಚಿ ಬೀಳುತ್ತೀರ. ಹೌದು ಇವರೆಲ್ಲರೂ ಪಕ್ಕಾ ಜೇಬುಗಳ್ಳರು, ಶಿವಮೊಗ್ಗ ಜಿಲ್ಲೆ ಭದ್ರಾವತಿಯವರಾದ ಇವರು ಸುದ್ದಿವಾಹಿನಿಗಳನ್ನು ನೋಡಿ ಎಲ್ಲಿ ರಾಜಕೀಯ ಪಕ್ಷಗಳ ದೊಡ್ಡ ಕಾರ್ಯಕ್ರಮಗಳು ಇವೆ ಎನ್ನುವುದನ್ನು ತಿಳಿದುಕೊಳ್ಳುತ್ತಿದ್ದರು. ಆ ವಿಷಯ ತಿಳಿಯುತ್ತಿದ್ದಂತೆ ಬಾಡಿಗೆ ಕಾರು ಪಡೆದು ಕಾರ್ಯಕ್ರಮ ನಡೆಯುವ ಕಡೆಗಳಿಗೆ ಹೋಗಿ ಅಲ್ಲಿ ಕಾರ್ಯಪ್ರವೃತ್ತರಾಗುತ್ತಿದ್ದರು. ಹೀಗೆ ಮಾರ್ಚ್ 27 ರಂದು ಕೊಡಗಿಗೆ ಬಂದಿದ್ದ 13 ಖದೀಮರು ಬಿಜೆಪಿಯ ಶಾಲುಗಳನ್ನೇ ಹಾಕಿಕೊಂಡು ಬಿಜೆಪಿ ಕಾರ್ಯಕರ್ತರಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
13 ಜನರು ಕೂಡ ಬಿಜೆಪಿಯ ಪ್ರಮುಖ ನಾಯಕರನ್ನು ಸುತ್ತುವರಿದು ನೂಕು ನುಗ್ಗಲು ಆಗುವಂತೆ ಮಾಡುತ್ತಿದ್ದರು. ಈ ನೂಕಾಟ ತಳ್ಳಾಟ ಆಗುತ್ತಿರುವಾಗಲೇ ಈ ಹದಿಮೂರು ಜನರಲ್ಲಿ ನಾಲ್ಕೈದು ಜನರು ಪ್ರಮುಖ ನಾಯಕರ ಜೇಬಿಗೆ ಕತ್ತರಿ ಹಾಕಿ ಪರ್ಸ್ಗಳನ್ನು ಎಗರಿಸಿಬಿಡುತ್ತಿದ್ದರು. ಹೀಗೆ ಕೊಡಗಿನಲ್ಲೂ ಒಂದೇ ದಿನ ಎರಡು ಸ್ಥಳಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ 10 ಕ್ಕೂ ಹೆಚ್ಚು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಪರ್ಸ್ಗಳನ್ನು ಎಗರಿಸಿ ಬರೋಬ್ಬರಿ 2 ಲಕ್ಷ ರೂಪಾಯಿಯನ್ನು ದೋಚಿದ್ದರು.
ಕೊಡಗು ವಿಶ್ವವಿದ್ಯಾಲಯದ ಪ್ರಥಮ ಕುಲಪತಿಗಳಿಗೆ ಮಂತ್ರಾಲಯದ ಪ್ರತಿಷ್ಠಿತ ಪರಿಮಳ ಪ್ರಶಸ್ತಿ
ಪರ್ಸ್ಗಳು ಕಳವಾಗಿರುವ ಕುರಿತು ಪ್ರಕರಣ ದಾಖಲಾಗುತ್ತಿದ್ದಂತೆ ಕಾರ್ಯಪ್ರವೃತರಾಗಿದ್ದ ಕೊಡಗು ಪೊಲೀಸರು 13 ಜನ ಖದೀಮರ ತಂಡವನ್ನು ಹಾಸನ ಜಿಲ್ಲೆಯ ಜಾವಗಲ್ ನಲ್ಲಿ ಬಂಧಿಸಿದ್ದಾರೆ. ಕೊಡಗಿನಲ್ಲಿ ಹಲವರ ಜೇಬು ಕತ್ತರಿಸಿದ್ದ ಈ ಪಾಪಿಗಳ ತಂಡ ಚನ್ನರಾಯಪಟ್ಟಣದಲ್ಲಿ ನಡೆಯಲಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕಾರ್ಯಕ್ರಮದಲ್ಲೂ ತನ್ನ ಕೈಚಳಕ ತೋರಿಸೋಕೆ ಸಿದ್ಧತೆ ನಡೆಸಿತ್ತು ಎನ್ನುವುದು ಗೊತ್ತಾಗಿದೆ ಎಂದು ಕೊಡಗು ಎಸ್ಪಿ ಕೆ. ರಾಮರಾಜನ್ ತಿಳಿಸಿದ್ದಾರೆ.
ಒಟ್ಟಿನಲ್ಲಿ ಕಷ್ಟಪಟ್ಟು ದುಡಿಯುವ ಬದಲು ಅಡ್ಡ ದಾರಿಯಲ್ಲಿ ಹಣ ಸಂಪಾದಿಸಲು ಹೊರಟವರು ಈಗ ಕಂಬಿ ಹಿಂದೆ ಕುಳಿತು ಮುದ್ದೆ ಮುರಿಯುವಂತೆ ಆಗಿದೆ.