Asianet Suvarna News Asianet Suvarna News

ಶೋಕಿಗೆ ಜೀವನಕ್ಕಾಗಿ ದೇವಸ್ಥಾನದ ಬಾಗಿಲು ಒಡೆದು ಕಳ್ಳತನ ಮಾಡ್ತಿದ್ದ ಸರ್ಕಾರಿ ಶಾಲೆ ಶಿಕ್ಷಕ!

  • ದೇವಾಸ್ಥಾನಗಳ ಬಾಗಿಲು ಒಡೆದು ಕಳ್ಳತನ ಮಾಡ್ತಿದ್ದ ಸರ್ಕಾರಿ ಶಾಲೆ ಶಿಕ್ಷಕ!
  • ಐಷಾರಾಮಿ ಜೀವನಕ್ಕಾಗಿ ಕಳ್ಳತನ.
  • ಸಹಚರನ ಜತೆ ಸೇರಿ 3 ಜಿಲ್ಲೆ 18 ದೇವಸ್ಥಾನಗಳಿಗೆ ಕನ್ನ ಹಾಕಿದ್ದ ಆರೋಪಿ..
The government school teacher who broke the doors of the temples and stole karwar rav
Author
First Published Dec 13, 2022, 2:05 AM IST

ಭರತ್‌ರಾಜ್ ಕಲ್ಲಡ್ಕ ಜತೆ ಕ್ಯಾಮೆರಾಮ್ಯಾನ್ ಗಿರೀಶ್ ನಾಯ್ಕ್, ಏಷಿಯಾನೆಟ್ ಸುವರ್ಣ ನ್ಯೂಸ್

ಉತ್ತರ ಕನ್ನಡ (ಡಿ.13) : ಆತ ಕೈ ತುಂಬಾ ಸಂಬಳ ಪಡೆಯುತ್ತಿದ್ದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ. ಆದ್ರೆ ಶೋಕಿ‌ ಜೀವನ ನಡೆಸುತ್ತಿದ್ದ ಶಿಕ್ಷಕನಿಗೆ ಸಂಬಳ ಸಾಲದೆ ಮಾಡಿದ್ದು ಮಾತ್ರ ಕಳ್ಳತನ. ದೇವಸ್ಥಾನಗಳ ಅವನ ಟಾರ್ಗೆಟ್. ತನ್ನ ಸಹಚರನ ಜತೆ ಸೇರಿ ದೇವಸ್ಥಾನಗಳ ಬೀಗ ಒಡೆದು ಕೈಗೆ ಸಿಕ್ಕಿದ್ದೆಲ್ಲಾ ದೋಚಿಕೊಂಡು ಪರಾರಿಯಾಗುತ್ತಿದ್ದ. 

ಕಳೆದ 2-3 ವರ್ಷಗಳಿಂದ ಪೊಲೀಸರಿಗೆ ತಲೆ ನೋವಾಗಿದ್ದ ಈತ ತನ್ನ ಸಹಚರನ‌ ಜತೆ ಕೊನೆಗೂ ಜೈಲು ಸೇರಿದ್ದಾನೆ. ಅಷ್ಟಕ್ಕೂ ದೇವಸ್ಥಾನಗಳ ಕಳ್ಳತನಕ್ಕಿಳಿದ ಆ ಶಿಕ್ಷಕನಾದ್ರೂ ಯಾರು..? ಈವರೆಗೆ ಎಷ್ಟು ಜಿಲ್ಲೆಗಳಲ್ಲಿ, ಎಷ್ಟು ದೇವಸ್ಥಾನಗಳಿಗೆ ಕನ್ನ ಹಾಕಿದ್ದ ಅಂತಾ ಗೊತ್ತಾ ? 

ಕೆಜಿಎಫ್‌: ಬ್ಯಾಂಕ್‌ನಲ್ಲಿ ಒಡವೆ ಕಳ್ಳತನ, ನೌಕರ ಬಂಧನ

ಹೌದು, ವಿದ್ಯಾರ್ಥಿಗಳಿಗೆ ಉತ್ತಮ‌ ಗುಣ ನಡತೆಯ ಪಾಠ ಹೇಳಬೇಕಾಗಿದ್ದ ಪ್ರಾಥಮಿಕ‌ ಶಾಲಾ ಶಿಕ್ಷಕ ಇದೀಗ ದೇವಸ್ಥಾನಗಳ ಬಾಗಿಲು ಒಡೆದು ದೋಚಿದ ಪ್ರಕರಣಗಳಲ್ಲಿ ಜೈಲು ಸೇರಿದ್ದಾನೆ. ಮೂಲತಃ ಹಾವೇರಿ ರಟ್ಟಿಹಳ್ಳಿಯ ನಿವಾಸಿಯಾಗಿರುವ ವಸಂತ ಕುಮಾರ್ (40) ಹಾವೇರಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ. ಶೋಕಿ ಜೀವನದ ಚಟಕ್ಕೆ ಬಿದ್ದ ಆರೋಪಿ ವಸಂತ ಕುಮಾರ್, ರಾಣೆಬೆನ್ನೂರ ಗುಡ್ಡದಬೇವಿನಹಳ್ಳಿಯ  ಸಲೀಂ (28) ಎಂಬಾತನ ಜತೆ ಸೇರಿ ಜನ ಸಂದಣಿ ಕಡಿಮೆಯಿರುವ ದೇವಸ್ಥಾನಗಳನ್ನೇ ಟಾರ್ಗೆಟ್ ಮಾಡಿಕೊಂಡಿದ್ದ. 

ಈ ಹಿಂದೆ ಸಹಚರನ ಜತೆ ಸೇರಿ ಸಾಕಷ್ಟು ದೇವಸ್ಥಾನಗಳಿಗೆ ಕನ್ನ‌ ಹಾಕಿದ್ದನಾದ್ರೂ, ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಮಂಚಿಕೇರಿ ಗ್ರಾಮದ ಶ್ರೀ ಮಹಾಗಜಲಕ್ಷ್ಮೀ ದೇವಸ್ಥಾನ ಹಾಗೂ ಗುಳ್ಳಾಪುರದ ಶ್ರೀ ಶಿವವ್ಯಾಘ್ರೇಶ್ವರ ದೇವಸ್ಥಾನದಲ್ಲಿ ದೇವರ ಹುಂಡಿ ಸೇರಿದಂತೆ ಹಲವು ಮೌಲ್ಯಯುತ ವಸ್ತುಗಳನ್ನು ದರೋಡೆ ಮಾಡಿ ಪರಾರಿಯಾದ ಬಳಿಕ ಇವರ ಗ್ರಹಚಾರ ಕೆಟ್ಟಿತ್ತು. 

ದೇವಸ್ಥಾನಗಳಲ್ಲಿ ಮೌಲ್ಯಯುತ ವಸ್ತುಗಳನ್ನು ಮಾತ್ರವಲ್ಲದೇ, ಸಿಸಿ ಕ್ಯಾಮೆರಾಗಳಿದ್ದರೆ ಅದರ ಡಿವಿಆರ್‌ಗಳನ್ನು ಕೂಡಾ ಕದ್ದು ಪರಾರಿಯಾಗುತ್ತಿದ್ದ.‌ ಯಾವಾಗ ಯಲ್ಲಾಪುರದಲ್ಲಿ ಕಳ್ಳತನವಾಯ್ತೋ ಯಲ್ಲಾಪುರದ ಸಿಪಿಐ ಸುರೇಶ್ ಯಲ್ಲೂರು ನೇತೃತ್ವದ ತಂಡ ನಡೆಸಿದ ಕಾರ್ಯತಂತ್ರಕ್ಕೆ ಆರೋಪಿಗಳು ತಗಲಿಹಾಕಿಕೊಂಡ್ರು. ಕಳ್ಳತನ ಸಂಬಂಧಿಸಿ ತನಿಖೆ ನಡೆಸಿದಾಗ ಒಂದೊಂದೇ ವಿಚಾರ ಬಾಯ್ಬಿಟ್ಟ ಆರೋಪಿಗಳು, ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಹಾವೇರಿ ಜಿಲ್ಲೆಗಳ ಒಟ್ಟು 18 ದೇವಸ್ಥಾನಗಳಲ್ಲಿ ಕಳ್ಳತನ ಮಾಡಿ ಪರಾರಿಯಾಗುವ ವಿಷಯ ಬಾಯ್ಬಿಟ್ಟಿದ್ದಾರೆ.

ಕಳೆದ ಮೂರ್ನಾಲ್ಕು ವರ್ಷದಿಂದ ದರೋಡೆ ಮಾಡಿಕೊಂಡು ಐಷಾರಾಮಿ ಜೀವನ ಸಾಗಿಸುತಿದ್ದ ಆರೋಪಿಗಳು ಯಲ್ಲಾಪುರ, ಅಂಕೋಲಾ, ಶಿರಸಿ ಗ್ರಾಮೀಣ, ಬನವಾಸಿ, ಶಿವಮೊಗ್ಗ ಜಿಲ್ಲೆಯ  ರಿಪ್ಪನಪೇಟೆ, ಹೊಸನಗರ, ಹಾವೇರಿ ಜಿಲ್ಲೆಯ  ಹಂಸಬಾವಿ, ಹಿರೇಕೆರೂರ, ಹಾವೇರಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ 18ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ್ದರು. ಕೊನೆಗೂ ಯಲ್ಲಾಪುರದ ಪೊಲೀಸರ ಚಾಣಾಕ್ಷತೆಯಿಂದ ದೇವಸ್ಥಾನಗಳನ್ನು ಮಾತ್ರ ಟಾರ್ಗೆಟ್ ಮಾಡಿ ಕಳ್ಳತನ ಮಾಡುತಿದ್ದ ಈ ಆರೋಪಿಗಳನ್ನು ಬಂಧಿಸಿ ಒಟ್ಟು 19,20,285 ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. 

ಆರೋಪಿಗಳು ಕೃತ್ಯಕ್ಕೆ ಬಳಸಿದ 12 ಲಕ್ಷ ರೂ. ಮೌಲ್ಯದ  1 ಎಸ್ ಕ್ರಾಸ್ ಕಾರು, 30,000ರೂ. ಮೌಲ್ಯದ ಬಜಾಜ್ ಪ್ಲಾಟಿನಾ ಕಂಪೆನಿಯ ಮೋಟಾರ್ ಸೈಕಲ್, 2,29,000ರೂ. ನಗದು, 50,000ರೂ. ಮೌಲ್ಯದ 9 ಗ್ರಾಂ ತೂಕದ ದೇವರ ಆಭರಣ, 1,80,400ರೂ. ಮೌಲ್ಯದ 3ಕೆ.ಜಿ. 400 ಗ್ರಾಂ ತೂಕದ ದೇವರ ಬೆಳ್ಳಿಯ ಆಭರಣ, 1,45,000ರೂ. ಮೌಲ್ಯದ 140 ಹಿತ್ತಾಳೆಯ ಗಂಟೆಗಳು, 39,550ರೂ. ಮೌಲ್ಯದ  27 ಹಿತ್ತಾಳೆಯ ದೀಪದ ಶಮೆ, 9,600ರೂ. ಮೌಲ್ಯದ 22 ಹಿತ್ತಾಳೆಯ ತೂಗು ದೀಪಗಳು, 13,500ರೂ. ಮೌಲ್ಯದ 7 ತಾಮ್ರದ ಕೊಡಗಳು,13,235ರೂ.  ಮೌಲ್ಯದ 35 ಹಿತ್ತಾಳೆ ಹಾಗೂ ತಾಮ್ರದ ಪೂಜಾ ಸಾಮಾಗ್ರಿಗಳು, 10,000ರೂ. ಮೌಲ್ಯದ ಡಿವಿಆರ್ ವಶಕ್ಕೆ ಪಡೆಯಲಾಗಿದೆ. ಅಲ್ಲದೇ, ಆರೋಪಿಗಳಿಂದ ಹೆಚ್ಚಿನ ಮಾಹಿತಿಗಾಗಿ ಇನ್ನಷ್ಟು ತನಿಖೆಗೆ ಒಳಪಡಿಸಲಾಗಿದೆ.

Udupi: ದೇವಾಲಯಗಳ ನಗರಿ ಉಡುಪಿಯಲ್ಲಿ ಕಳ್ಳರಿದ್ದಾರೆ ಎಚ್ಚರಿಕೆ!

ಒಟ್ಟಿನಲ್ಲಿ ಹಲವು ತಿಂಗಳಿಂದ ಉತ್ತರಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸರಣಿ ದೇವಸ್ಥಾನಗಳ ದರೋಡೆ ಪ್ರಕರಣ ಈ ಮೂಲಕ ಬೆಳಕಿಗೆ ಬಂದಿದ್ದು, ಶೋಕಿ ಜೀವನದಿಂದ ಹಾದಿ ತಪ್ಪಿದ ಶಿಕ್ಷಕ ವಸಂತ್ ಕುಮಾರ್ ಹಾಗೂ ಸಹಚರ ಸಲೀಂ ಇದೀಗ ಕಂಬಿ ಎಣಿಸುತ್ತಿದ್ದಾರೆ. ಆದರೆ, ಇವರು ದೇವಸ್ಥಾನಗಳಲ್ಲಿ ಮಾತ್ರ ಯಾಕೆ ಕಳ್ಳತನ ಮಾಡುತ್ತಿದ್ದರು? ಇವರ ಜತೆ ಇನ್ನೆಷ್ಟು ಜನ ಕೈ ಜೋಡಿಸಿದ್ದಾರೆ ? ಮುಂತಾದ ವಿಚಾರಗಳೆಲ್ಲಾ ಇನ್ನಷ್ಟೇ ತನಿಖೆಯಿಂದ ಹೊರಬರಬೇಕಿದೆ. ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡಬೇಕಾಗಿದ್ದ ಶಿಕ್ಷಕ ಐಷಾರಾಮಿ ಜೀವನದ ಆಸೆಗೆ ಬಿದ್ದು, ಕೊನೆಗೆ ಜೈಲು ಸೇರುವಂತಾದದ್ದು ವಿಪರ್ಯಾಸ.‌

Follow Us:
Download App:
  • android
  • ios