Bengaluru: ಪೀಣ್ಯ ಫ್ಲೈಓವರ್ ಮೇಲೆ ಭೀಕರ ಅಪಘಾತ: ಇಬ್ಬರಿಗೆ ಗಂಭೀರ ಗಾಯ
ನಗರದ ಪೀಣ್ಯ ಫ್ಲೈಓವರ್ ಮೇಲೆ ಭೀಕರ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಕಾರಿನಿಂದ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿವೆ.
ಬೆಂಗಳೂರು (ಮಾ.27): ಪೀಣ್ಯ ಮೇಲ್ಸೇತುವೆಯಲ್ಲಿ (Peenya Flyover) ಕಾರೊಂದು ರಸ್ತೆ ವಿಭಜಕಕ್ಕೆ ಡಿಕ್ಕಿಯಾದ (Terrible Accident) ಪರಿಣಾಮ ಇಬ್ಬರು ಗಾಯಗೊಂಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ. ಯಶವಂತಪುರ ಕಡೆಯಿಂದ ತುಮಕೂರು ಕಡೆಗೆ ಹೋಗುವಾಗ ರಾತ್ರಿ 10.30ರ ಸುಮಾರಿಗೆ 8ನೇ ಮೈಲಿ ಸಮೀಪದ ಪೀಣ್ಯ ಮೇಲ್ಸೇತುವೆಯಲ್ಲಿ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿದೆ. ಗಾಯಾಳುಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಅಪಘಾತದಲ್ಲಿ ಕಾರು ಚಾಲಕ ಹಾಗೂ ಆತನ ಪಕ್ಕದ ಆಸನದಲ್ಲಿ ಕುಳಿತ್ತಿದ್ದ ಪ್ರಯಾಣಿಕ ಇಬ್ಬರು ಗಾಯಗೊಂಡಿದ್ದಾರೆ. ಕೂಡಲೇ ಸ್ಥಳೀಯರು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತದಿಂದ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಅಪಘಾತದಿಂದ ಪೀಣ್ಯ ಮೇಲ್ಸೇತುವೆಯಲ್ಲಿ ಕೆಲ ಕಾಲ ವಾಹನ ಸಂಚಾರ ದಟ್ಟಣೆ ಉಂಟಾಗಿತ್ತು. ಅಪಘಾತ ಸಂಬಂಧ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೂ ಘಟನೆ ಬಗ್ಗೆ ಪರಿಶೀಲಿಸುವುದಾಗಿ ಪೀಣ್ಯ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಸರಣಿ ಅಪಘಾತ-ಐದು ಕಾರು ಜಖಂ: ತುಮಕೂರು ರಸ್ತೆಯ ಪೀಣ್ಯ ಮೇಲ್ಸೇತುವೆಯಲ್ಲಿ ಸ್ವಿಫ್ಟ್ ಕಾರು ಚಾಲಕನೊಬ್ಬ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಸರಣಿ ಅಪಘಾತ ಸಂಭವಿಸಿ, ವೃದ್ಧೆಯೊಬ್ಬರು ಗಾಯಗೊಂಡಿರುವ ಘಟನೆ ಭಾನುವಾರ ಜರುಗಿದೆ. ನಾಗಸಂದ್ರ ಮೆಟ್ರೋ ನಿಲ್ದಾಣದ ಬಳಿ ಪೀಣ್ಯ ಮೇಲ್ಸೇತುವೆಯಲ್ಲಿ ಸಂಜೆ 4.30ರ ಸುಮಾರಿಗೆ ನಗರದಿಂದ ತುಮಕೂರು ಕಡೆಗೆ ಹೋಗುತ್ತಿದ್ದ ಸ್ವಿಫ್ಟ್ ಕಾರು ಚಾಲಕ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಈ ಸರಣಿ ಅಪಘಾತ ಸಂಭವಿಸಿದೆ.
Bengaluru: ಪೀಣ್ಯ ಫ್ಲೈಓವರಲ್ಲಿ ವಾಹನಗಳಿಗೆ ನೈಟ್ ಕರ್ಫ್ಯೂ..!
ಮಳೆ ಬರುತ್ತಿದ್ದ ಹಿನ್ನೆಲೆಯಲ್ಲಿ ಮೇಲ್ಸೇತುವೆಯಲ್ಲಿ ವಾಹನಗಳ ಸಂಚಾರ ಮಂದಗತಿಯಲ್ಲಿತ್ತು. ಈ ವೇಳೆ ಸ್ವಿಫ್ಟ್ ಕಾರು ಚಾಲಕ ಬ್ರೇಕ್ ಹಾಕಿದ ಪರಿಣಾಮ ಹಿಂಬದಿ ಬರುತ್ತಿದ್ದ ಐದಾರು ಕಾರುಗಳು ಒಂದಕ್ಕೊಂದು ಗುದ್ದಿಕೊಂಡಿವೆ. ಇನೋವಾ ಕಾರಿನಲ್ಲಿದ್ದ ವೃದ್ಧೆಯೊಬ್ಬರಿಗೆ ಸಣ್ಣಪುಟ್ಟಗಾಯಗಳಾಗಿವೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೋಯ್ದು ದಾಖಲಿಸಲಾಗಿದೆ. ಉಳಿದಂತೆ ಕಾರುಗಳು ಕೊಂಚ ಜಖಂಗೊಂಡಿವೆ. ಈ ಸಂಬಂಧ ಪೀಣ್ಯ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟ್ರಾಫಿಕ್ ಜಾಮ್: ಮೇಲ್ಸೇತುವೆಯಲ್ಲಿ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಸಂಚಾರ ದಟ್ಟಣೆ ಉಂಟಾಯಿತು. ಅಪಘಾತದಿಂದ ಕಾರುಗಳು ಜಖಂ ಆದ ಪರಿಣಾಮ ಕಾರಿನ ಪ್ರಯಾಣಿಕರು ಕೆಳಗೆ ಇಳಿದು ಕಾರುಗಳನ್ನು ಪರಿಶೀಲಿಸುತ್ತಿದ್ದರು. ಹೀಗಾಗಿ ಮೇಲ್ಸೇತುವೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಮಳೆಯಿಂದ ಮೊದಲೇ ವಾಹನ ಸಂಚಾರ ಮಂದಗತಿಯಲ್ಲಿ ಇದ್ದಿದ್ದರಿಂದ ಅಪಘಾತದ ವೇಳೆ ಮೆಲ್ಸೇತುವೆಯಲ್ಲಿ ವಾಹನ ದಟ್ಟಣೆ ಉಂಟಾಗಿ ಸವಾರರು ಕೆಲ ಕಾಲ ಪರದಾಡಿದರು. ಅಪಘಾತದ ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಸಂಚಾರ ಪೊಲೀಸರು, ವಾಹನ ಸಂಚಾರ ನಿಯಂತ್ರಿಸಲು ಹರಸಾಹಸಪಟ್ಟರು.
ಪೀಣ್ಯ ಫ್ಲೈಓವರ್ ಟೆಸ್ಟ್‌ಗೇ 9 ತಿಂಗಳು ಬೇಕು: ಪೀಣ್ಯ ಮೇಲ್ಸೇತುವೆಯಲ್ಲಿ ಲಘು ವಾಹನ ಸಂಚಾರಕ್ಕೆ ಸಮಸ್ಯೆಯಿಲ್ಲ. ಆದರೆ ಭಾರೀ ವಾಹನಗಳ ಓಡಾಟಕ್ಕೆ ಅನುಮತಿ ಸಿಗಬೇಕೆಂದರೆ ಇನ್ನಷ್ಟು ವಿಸ್ತೃತ ಪರೀಕ್ಷೆ ನಡೆಸಬೇಕು. ಇದಕ್ಕೆ 6ರಿಂದ 9 ತಿಂಗಳು ಸಮಯಾವಕಾಶ ಬೇಕಾಗುವುದರಿಂದ ಅಲ್ಲಿಯವರೆಗೂ ಭಾರೀ ವಾಹನಗಳ ಸಂಚಾರಕ್ಕೆ ಅನುಮತಿ ಸಿಗುವುದಿಲ್ಲ.
Peenya Flyover ಸಂಚಾರಕ್ಕೆ ಸುರಕ್ಷಿತವಲ್ಲ: ಸಿಎಂ ಬೊಮ್ಮಾಯಿ
ಮೇಲ್ಸೇತುವೆ (Flyover) ಹೆಚ್ಚು ಭಾರವನ್ನು ತಡೆದುಕೊಳ್ಳುತ್ತದೆಯೇ, ಬಾಗಿರುವ ಕೇಬಲ್‌ಗಳನ್ನು ಸ್ಥಳಾಂತರ ಮಾಡಬೇಕೇ, ಪಿಲ್ಲರ್‌ಗಳ ಸಮಸ್ಯೆಯಿಲ್ಲವೇ ಎಂಬುದು ಸೇರಿದಂತೆ ಹಲವು ಆಯಾಮಗಳಲ್ಲಿ ಪರಿಶೀಲನೆ ನಡೆಸಬೇಕಿದೆ. ರಾಸಾಯನಿಕ ವಿಶ್ಲೇಷಣೆ, ನಿರ್ಮಾಣ ಮತ್ತು ವಿಫಲತೆ ಪರೀಕ್ಷೆಯನ್ನೂ (Test) ನಡೆಸಬೇಕಾಗಿದ್ದು, ಇದಕ್ಕೆ ಸಮಯಾವಕಾಶ ಬೇಕಿರುವುದರಿಂದ ಭಾರೀ ವಾಹನ ಸಂಚಾರಕ್ಕೆ ಇನ್ನೂ ತಿಂಗಳುಗಟ್ಟಲೆ ಕಾಯಬೇಕಿದೆ. ಒಂದೊಮ್ಮೆ ಕೇಬಲ್ ಬದಲಿಸಿದರೆ ಸಾಕೇ ಅಥವಾ ಪಿಲ್ಲರ್‌ಗಳನ್ನೇ ಬದಲಿಸಬೇಕೇ ಅಥವಾ ಪೂರ್ಣ ಪ್ರಮಾಣದಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಬೇಕೇ ಎಂಬ ಬಗ್ಗೆ ತಜ್ಞರ ತಂಡ ಸುಧೀರ್ಘವಾಗಿ ಪರಿಶೀಲನೆ ನಡೆಸಿ ವಿಸ್ತೃತ ವರದಿ ನೀಡಲಿದೆ.