ಅಕ್ರಮ ಆಸ್ತಿ: ತಹಸೀಲ್ದಾರ್ ಅಜಿತ್ ರೈ ಆಪ್ತನ ಬಳಿ 5 ಬಾರ್ ಲೈಸೆನ್ಸ್!
ನಗರದ ಕೆ.ಆರ್.ಪುರ ತಹಸೀಲ್ದಾರ್ ಆಗಿದ್ದ ಅಜಿತ್ ರೈಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು ಇದೀಗ ಆತನ ಆಪ್ತ ಎನ್ನಲಾದ ಕೆ.ಆರ್.ಪುರ ಸರ್ವೆ ಸೂಪರ್ ವೈಸರ್‌ಗೆ ಸೇರಿದ 14 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಕೋಟ್ಯಂತರ ರುಪಾಯಿ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ.

ಬೆಂಗಳೂರು (ಆ.23): ನಗರದ ಕೆ.ಆರ್.ಪುರ ತಹಸೀಲ್ದಾರ್ ಆಗಿದ್ದ ಅಜಿತ್ ರೈಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು ಇದೀಗ ಆತನ ಆಪ್ತ ಎನ್ನಲಾದ ಕೆ.ಆರ್.ಪುರ ಸರ್ವೆ ಸೂಪರ್ ವೈಸರ್‌ಗೆ ಸೇರಿದ 14 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಕೋಟ್ಯಂತರ ರುಪಾಯಿ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ. ಇದೇ ವೇಳೆ ಕಾರ್ಯಾಚರಣೆಯಲ್ಲಿ ಐದು ಅಬಕಾರಿ ಪರವಾನಗಿ ಹೊಂದಿರುವುದು ಪೊಲೀಸರನ್ನು ಆಶ್ಚರ್ಯಚಕಿತರನ್ನಾಗಿಸಿದೆ!
ಕೆ.ಆರ್.ಪುರ ಸರ್ವೆ ಸೂಪರ್‌ವೈಸರ್ ಕೆ.ಟಿ.ಶ್ರೀನಿವಾಸ್ ಮೂರ್ತಿಗೆ ಸೇರಿದ ಸ್ಥಳಗಳ ಮೇಲೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಮಂಗಳವಾರ ಬೆಂಗಳೂರು, ತುಮಕೂರು ಸೇರಿದಂತೆ ರಾಜ್ಯ 14 ಕಡೆ ದಾಳಿ ನಡೆಸಿ ಕೋಟ್ಯಂತರ ರು. ಮೌಲ್ಯ ಆಸ್ತಿಯ ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ನಗರದ ಆಂಧ್ರಹಳ್ಳಿಯಲ್ಲಿನ ಶ್ರೀನಿವಾಸಮೂರ್ತಿಯ ನಿವಾಸ, ಹೆಣ್ಣೂರಿನಲ್ಲಿನ ಸಹೋದರಿಯ ಮನೆ, ತುಮಕೂರಿನಲ್ಲಿನ ಸಹೋದರನ ಮನೆಗಳಲ್ಲಿ ತಪಾಸಣೆ ನಡೆಸಲಾಗಿದೆ. ಇನ್ನು, ಪತ್ನಿಯ ಹೆಸರಲ್ಲಿ ಹೋಟೆಲ್ ಇದ್ದು, ಅಲ್ಲಿಯೂ ಸಹ ಪರಿಶೀಲನೆ ನಡೆಸಲಾಗಿದೆ. ಒಟ್ಟು 14 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
100 ದಿನದಲ್ಲಿ ಎತ್ತಿನಹೊಳೆಯಿಂದ ನಾಲೆಗೆ ನೀರು ಗ್ಯಾರಂಟಿ: ಡಿಕೆಶಿ
ಈ ಹಿಂದೆ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ಕೆ.ಆರ್.ಪುರ ತಹಸೀಲ್ದಾರ್ ಅಜಿತ್ ರೈಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿದ್ದರು. ಇದೀಗ ಶ್ರೀನಿವಾಸ ಮೂರ್ತಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿದಾಗ ಹಲವು ಮಾಹಿತಿಗಳು ಲಭ್ಯವಾಗಿದ್ದು, ಶ್ರೀನಿವಾಸ ಮೂರ್ತಿಯು ಅಜಿತ್ ರೈಗೆ ಆಪ್ತನಾಗಿದ್ದ ಎನ್ನುವುದು ಗೊತ್ತಾಗಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಮಾಡಿರುವ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ಬಲ್ಲಮೂಲಗಳಿಗೆ ಮಾಹಿತಿ ಪಡೆದು ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದಾರೆ.
ಆಂಧ್ರಹಳ್ಳಿಯಲ್ಲಿ .2.70 ಕೋಟಿ ಮೌಲ್ಯದ ನಿವೇಶನ, ರಾಯಪುರ ಗ್ರಾಮದಲ್ಲಿ ಪತ್ನಿ ರಾಜೇಶ್ವರಿ ಹೆಸರಲ್ಲಿ ಐದು ಗುಂಟೆ ಜಮೀನು, ತುಮಕೂರಿನಲ್ಲಿ ಹೊಟೇಲ್, ಸಹೋದರಿ ಕೆ.ಟಿ.ಪುಷ್ಪಲತಾ ಹೆಸರಲ್ಲಿ .83.45 ಲಕ್ಷ ಮೌಲ್ಯದ ನಿವೇಶನ, ಪತ್ನಿ ಮತ್ತು ಸಹೋದರಿಯ ಜಂಟಿ ಹೆಸರಲ್ಲಿ ಬಾಲಾಜಿ ಎಂಟರ್‌ಪ್ರೈಸಸ್, ಹೋಟೆಲ್, ಬೋರ್ಡಿಂಗ್ ಹೌಸ್, ಸಹೋದರ ಕೆ.ಟಿ.ವೆಂಕಟೇಶ್ ಗೌಡ ಸಹೋದರ ಹೆಸರಲ್ಲಿ ತುಮಕೂರಿನಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಸೇರಿದಂತೆ ಕುಟುಂಬದ ಸದಸ್ಯರ ಹೆಸರಲ್ಲಿ ಕೋಟ್ಯಂತರ ರು. ಮೌಲ್ಯದ ಆಸ್ತಿ ದಾಖಲೆಗಳು ಪತ್ತೆಯಾಗಿವೆ. ತಡರಾತ್ರಿಯವರೆಗೆ ಶೋಧ ಕಾರ್ಯ ನಡೆಸಲಾಗಿದೆ. ಬುಧವಾರವೂ ಶೋಧ ಕಾರ್ಯ ಮುಂದುವರಿಯಲಿದ್ದು, ಮತ್ತಷ್ಟು ದಾಖಲೆಗಳು ಮತ್ತು ಆಸ್ತಿಯ ವಿವರ ಪತ್ತೆಯಾಗಲಿದೆ ಎಂದು ಹೇಳಲಾಗಿದೆ.
2 ದಿನದಲ್ಲಿ ನೈಸ್ ಅಕ್ರಮಗಳ ದಾಖಲೆ ಬಹಿರಂಗ: ಡಿಕೆ ಬ್ರದರ್ಸ್ ವಿರುದ್ಧ ಎಚ್ಡಿಕೆ ವಾಗ್ದಾಳಿ
ಬೇರೆಡೆಗೆ ದಾಖಲೆ ವರ್ಗ?: ಆರೋಪಿ ಅಜಿತ್ ರೈಗೆ ಸೇರಿದ ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದ ವೇಳೆ ತಮ್ಮ ಮೇಲೂ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಎಚ್ಚೆತ್ತುಕೊಂಡ ಶ್ರೀನಿವಾಸಮೂರ್ತಿ ತಮ್ಮ ಆಸ್ತಿ ದಾಖಲೆಗಳನ್ನು ಬೇರೆಡೆ ಸಾಗಿಸಿರುವ ಸಾಧ್ಯತೆ ಇದೆ. ವಿಚಾರಣೆ ವೇಳೆ ಮೇಲ್ನೋಟಕ್ಕೆ ಇದರ ಬಗ್ಗೆ ಅನುಮಾನ ವ್ಯಕ್ತವಾಗಿದೆ. ತನಿಖೆಯನ್ನು ಮುಂದುವರಿಸಿರುವ ಪೊಲೀಸರು ಈ ನಿಟ್ಟಿನಲ್ಲಿ ಹೆಚ್ಚಿನ ಶೋಧ ನಡೆಸಿದ್ದಾರೆ ಎನ್ನಲಾಗಿದೆ.