2 ದಿನದಲ್ಲಿ ನೈಸ್ ಅಕ್ರಮಗಳ ದಾಖಲೆ ಬಹಿರಂಗ: ಡಿಕೆ ಬ್ರದರ್ಸ್ ವಿರುದ್ಧ ಎಚ್ಡಿಕೆ ವಾಗ್ದಾಳಿ
ನಾಳೆ ಅಥವಾ ನಾಡಿದ್ದು ನೈಸ್ ಅಕ್ರಮಗಳು, ಡಿಕೆ ಸಹೋದರರು ಕೊಳ್ಳೆ ಹೊಡೆದಿರುವ ನೈಸ್ ಭೂಮಿ ದಾಖಲೆಗಳನ್ನು ಬಹಿರಂಗ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಣೆ ಮಾಡಿದರು.
ರಾಮನಗರ (ಆ.21): ನಾಳೆ ಅಥವಾ ನಾಡಿದ್ದು ನೈಸ್ ಅಕ್ರಮಗಳು, ಡಿಕೆ ಸಹೋದರರು ಕೊಳ್ಳೆ ಹೊಡೆದಿರುವ ನೈಸ್ ಭೂಮಿ ದಾಖಲೆಗಳನ್ನು ಬಹಿರಂಗ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಣೆ ಮಾಡಿದರು. ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೈಸ್ ಅಕ್ರಮಗಳು, ಬೆಂಗಳೂರು ಸುತ್ತಮುತ್ತ ರೈತರ ಭೂಮಿ ಕೊಳ್ಳೆ ಹೊಡೆದ ವಿಷಯಕ್ಕೆ ಸಂಬಂಧಿಸಿದಂತೆ ಡಿಕೆ ಸಹೋದರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
2004ರಲ್ಲಿ ಡಿ.ಕೆ.ಶಿವಕುಮಾರ್ ನಗರಾಭಿವೃದ್ಧಿ ಸಚಿವರಾಗಿದ್ದು ರಾಮನಗರ ಜಿಲ್ಲೆಯ ಉದ್ಧಾರಕ್ಕೋ ಅಥವಾ ನೈಸ್ ಕಂಪನಿಯನ್ನು ಉದ್ಧಾರ ಮಾಡಿ ರೈತರ ಭೂಮಿ ಲೂಟಿ ಹೊಡೆಯಲಿಕ್ಕೊ? ಸಂಸದ ಆಗುವುದಕ್ಕೆ ಮುಂಚೆ ಡಿ.ಕೆ.ಸುರೇಶ್ ಆಸ್ತಿ ಎಷ್ಟಿತ್ತು? ಈಗ ಎಷ್ಟಿದೆ? ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು. ಕುಮಾರಸ್ವಾಮಿ ನೈಸ್ ವ್ಯವಹಾರ ಮಾಡಿದ್ದಾರೆ ಎಂದ ಸಂಸದ ಡಿ.ಕೆ. ಸುರೇಶ್ ವಿರುದ್ಧ ಕಿಡಿಕಾರಿದ ಕುಮಾರಸ್ವಾಮಿ, ನೈಸ್ ಭೂಮಿ ಸೇರಿ ಬೆಂಗಳೂರಿನ ಸುತ್ತಾ ರೈತರ ಭೂಮಿ ಲೂಟಿ ಮಾಡಿಕೊಂಡು ಬದುಕುತ್ತಿದ್ದಾನೆ. 2013ರಲ್ಲಿ ಎಂಪಿ ಆಗುವುದಕ್ಕೆ ಮುಂಚೆ ಇವನ ಆಸ್ತಿ ಎಷ್ಟಿತ್ತು? ಈಗ ಎಷ್ಟಿದೆ? ಎಂಪಿ ಆಗಿ 8 ವರ್ಷದಲ್ಲಿ ಇವನು ಆಸ್ತಿ ಎಷ್ಟಾಗಿದೆ? ಇದೆಲ್ಲಾ ಗೊತ್ತಿಲ್ಲದ ವಿಷಯವಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರಸಭೆ ಪೌರ ಕಾರ್ಮಿಕರಿಗೆ ಕಳಪೆ ಆಹಾರ ಪೂರೈಕೆ ಆರೋಪ: ಕಾರ್ಮಿಕರ ಪ್ರತಿಭಟನೆ
ದೇವೇಗೌಡರೇ ಸಹಿ ಹಾಕಿದ್ದು: ನೈಸ್ ಯೋಜನೆಗೆ ದೇವೇಗೌಡರೇ ಒಪ್ಪಂದ ಮಾಡಿಕೊಂಡಿದ್ದು. ಇಲ್ಲ ಎಂದು ನಾನೆಲ್ಲಿ ಹೇಳಿದೆ. ಅವರು ರಸ್ತೆ ಆಗಲಿ ಎಂದು ಒಪ್ಪಂದ ಮಾಡಿಕೊಂಡರು. ಬೆಂಗಳೂರು - ಮೈಸೂರು ಭಾಗದ ಜನರಿಗೆ ಅನುಕೂಲವಾಗಲಿ ಎಂದು ಅವರು ಈ ಯೋಜನೆಗೆ ಅವರು ಒಪ್ಪಿಗೆ ನೀಡಿದರು. 1995 ಅಥವಾ 1986ನೇ ಇಸವಿ ಇರಬೇಕು, ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಆಗಿದ್ದರು. ಈ ಜಿಲ್ಲೆಯ ಮಾಯಗಾನಹಳ್ಳಿ ಬಳಿ ಭೀಕರ ಅಪಘಾತ ಸಂಭವಿಸಿ 15-20 ಶಾಲಾ ಮಕ್ಕಳು ತೀರಿಕೊಂಡರು. ಆವತ್ತೇ ಬೆಂಗಳೂರು-ಮೈಸೂರು ನಡುವೆ ನಾಲ್ಕುಪಥದ ಹೆದ್ದಾರಿ ಮಾಡಬೇಕು ಎಂದು ದೇವಗೌಡರು ತೀರ್ಮಾನ ಮಾಡಿದರು. ಹಣ ಇಲ್ಲ ಎನ್ನುವ ಕಾರಣಕ್ಕೆ ಹೆಗಡೆ ಅವರ ಕಾಲದಲ್ಲಿ ಆ ಯೋಜನೆ ಆಗಲಿಲ್ಲ. ಕೊನೆಗೆ ದೇವೇಗೌಡರು ಮುಖ್ಯಮಂತ್ರಿ ಆದ ಮೇಲೆ ಈ ಯೋಜನೆಗೆ ಚಾಲನೆ ನೀಡಿದರು ಎಂದರು.
ನೈಸ್ ಲೂಟಿಯಲ್ಲಿ ಡಿಕೆ ಸಹೋದರರ ಪಾಲು ಎಷ್ಟಿದೆ?: ದೇವೇಗೌಡರು ಮಾಡಿಕೊಂಡ ಒಪ್ಪಂದದಂತೆ ರಸ್ತೆ ಆಗಿದ್ದಿದ್ದರೆ ಏಷ್ಯಾಖಂಡದಲ್ಲಿಯೇ ಬೆಂಗಳೂರು - ಮೈಸೂರು ನಗರಗಳು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಆಗುತ್ತಿದ್ದವು. ವಾಣಿಜ್ಯ ಚಟುವಟಿಕೆಗಳು ಹೆಚ್ಚಿ ಜನರಿಗೆ ಜೀವನೋಪಾಯ ಸಿಗುತ್ತಿತ್ತು. ಆದರೆ, ಈ ಲೂಟಿಕೋರರು ಮಾಡಿದ್ದೇನು? ಬೆಂಗಳೂರು ಸುತ್ತಾಮುತ್ತ ರೈತರ ಭೂಮಿಯನ್ನು ಕೊಳ್ಳೆ ಹೊಡೆದರು. ನೈಸ್ ಕಂಪನಿ ಮಾಡಿರುವ ಲೂಟಿಯಲ್ಲಿ ಡಿಕೆ ಸಹೋದರರ ಪಾಲು ಎಷ್ಟಿದೆ? ಈ ಬಗ್ಗೆ ದಾಖಲೆಗಳನ್ನೇ ಹೊರಗಿಡುತ್ತೇನೆ. 2004ರಲ್ಲಿ ಡಿ.ಕೆ.ಸುರೇಶ್ ಅಣ್ಣ ಡಿ.ಕೆ.ಶಿವಕುಮಾರ್ ರಾಮನಗರ ಜಿಲ್ಲೆ ಉದ್ಧಾರ ಮಾಡುವುದಕ್ಕೆ ಮಂತ್ರಿ ಆಗಿದ್ದರೋ ಅಥವಾ ನೈಸ್ ಕಂಪನಿಯನ್ನು ಉದ್ಧಾರ ಮಾಡಿ ದುಡ್ಡು ಹೊಡೆಯೋದಕ್ಕೆ ಮಂತ್ರಿ ಆಗಿದ್ದರೋ? ಎಲ್ಲ ದಾಖಲೆಗಳನ್ನು ನಾಳೆ ನಾಡಿದ್ದರಲ್ಲಿಯೇ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.
2013ರಿಂದ 2018ರವರೆಗೆ ಡಿ.ಕೆ.ಶಿವಕುಮಾರ್ ಮಂತ್ರಿ ಆಗಿದ್ದರಲ್ಲಾ? ಆವಾಗ ಇವರು ರಾಮನಗರಕ್ಕೆ ನೀರನ್ನು ಯಾಕೆ ಕೊಡಲಿಲ್ಲ. ಅವಾಗ ಏನ್ ಮಾಡ್ತಾ ಇದ್ದರು? ಬಂಡೆ ಹೊಡೆದಕೊಂಡು ಕೂತಿದ್ದರಾ? ಎಂದು ಟೀಕಿಸಿದ ಅವರು, ಕುಮಾರಸ್ವಾಮಿ ಮಾಡಿರುವ ಎಲ್ಲಾ ಕೆಲಸಗಳಿಗೆ ಸಾಕ್ಷ್ಯ ಗುಡ್ಡೆಗಳಿವೆ. ಅವೆಲ್ಲಾ ಕಣ್ಣಿಗೆ ಕಾಣುತ್ತಿವೆ. ಇವರು ಬೆಟ್ಟಗುಡ್ಡಗಳನ್ನು ಹೊಡೆದು ಚೀನಾಗೆ ಸಾಗಿದ್ದರ ಬಗ್ಗೆ ಕರಗಿರುವ ಬೆಟ್ಟಗುಡ್ಡಗಳ ಸಾಕ್ಷಿ ಗುಡ್ಡೆಗಳಿವೆ. ಅವು ಎಲ್ಲರ ಕಣ್ಣಿಗೂ ಕಾಣುತ್ತಿವೆ. ಈ ಜಿಲ್ಲೆಯ ಅಭಿವೃದ್ಧಿಗೆ ಭದ್ರ ಅಡಿಪಾಯ ಹಾಕಿದ್ದು ದೇವೇಗೌಡರು, ನೀರಿನ ಯೋಜನೆ ತಂದಿದ್ದು ನಾನು. ಇತರರ ಬಗ್ಗೆ ಲಘವಾಗಿ ಮಾತನಾಡುವುದನ್ನು ನಿಲ್ಲಿಸಿ, ಕ್ರಿಯೆ ಇಟ್ಟುಕೊಳ್ಳಿ, ಇನ್ನೊಬ್ಬರು ಮಾಡಿರುವ ಕೆಲಸದ ಬಗ್ಗೆ ಹೇಳುವ ಹೃದಯವೈಶಾಲ್ಯತೆ ಬೆಳೆಸಿಕೊಳ್ಳಿ ಎಂದು ತಿರುಗೇಟು ನೀಡಿದರು.
ಮೈತ್ರಿಕೂಟದ ಸಭೆ ಮಾಡಿದ್ದು ಎಲ್ಲಿ?: ನನ್ನ ಬಗ್ಗೆ ಹೋಟೆಲ್ ನಲ್ಲಿ ಇದ್ದೆ ಎಂದು ಹೇಳುತ್ತಾರಲ್ಲ, ಇತ್ತೀಚೆಗೆ ಇವರು ವಿಪಕ್ಷಗಳ ಮೈತ್ರಿಕೂಟದ ಸಭೆ ಮಾಡಿದ್ದು ಎಲ್ಲಿ. ಅದೇ ಹೋಟೆಲ್ ನಲ್ಲಿ ತಾನೇ. ನನ್ನಷ್ಟುಜನಕ್ಕೆ ಹತ್ತಿರವಾಗಿ ಸಿಗೋನು ಈ ಬೂಮಿ ಮೇಲೆ ಇನ್ನಾರಾದರೂ ಇದ್ದಾರಾ? ಇವರಿಂದ ನಾನು ಪಾಠ ಕಲಿಯಬೇಕಾ ಎಂದು ಕುಮಾರಸ್ವಾಮಿ ಗುಡುಗಿದರು. ಜೆಡಿಎಸ್ ಮುಖಂಡರಾದ ರಾಜಶೇಖರ್, ಅಶ್ವತ್‌್ಥ, ಉಮೇಶ್, ದೊರೆಸ್ವಾಮಿ, ಗೂಳಿ ಕುಮಾರ್ ಇತರರಿದ್ದರು.
ಮೆಡಿಕಲ್ ಕಾಲೇಜು ಕನಕಪುರಕ್ಕೆ ಯಾಕೆ?: ರಾಮನಗರ ಜಿಲ್ಲೆ ಜನರಿಗೆ ನನ್ನಿಂದ ಕಿಂಚಿತ್ತೂ ಅನ್ಯಾಯ ಆಗಿಲ್ಲ. ಜಿಲ್ಲೆಯ ಜನರನ್ನು ನಾನು ತಂದೆ ತಾಯಿ ಸ್ಥಾನದಲ್ಲಿಟ್ಟು ನೋಡುವವನು. ಸ್ವಷ್ಟವಾಗಿ ಹೇಳ ಬಯಸುತ್ತೇನೆ. ಕಳೆದ ಚುನಾವಣೆ ಫಲಿತಾಂಶದ ಬಗ್ಗೆ ನಾನು ಜನರಿಗೆ ದೋಷ ಕೊಡಲ್ಲ. ನಾನು ಈ ಜಿಲ್ಲೆಗೆ ಕೊಟ್ಟಿರುವ ಕೊಡುಗೆ ಏನು ಎಂಬುದು ಆ ತಾಯಿ ಚಾಮುಂಡೇಶ್ವರಿ ನೋಡಿಕೊಳ್ಳುತ್ತಾಳೆ ಎಂದು ಕುಮಾರಸ್ವಾಮಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೊಡಗು ಮೆಡಿಕಲ್ ಕಾಲೇಜು ವಿದ್ಯಾರ್ಥಿನಿಯರಿಗೆ ಗಾಂಜಾಪುಂಡರ ಕಾಟ: ತರಗತಿ ಬಹಿಷ್ಕರಿಸಿದ ವಿದ್ಯಾರ್ಥಿಗಳು
ರಾಮನಗರಕ್ಕೆ ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಕೊಟ್ಟವನು ನಾನು. ಆಮೇಲೆ ಪ್ರತ್ಯೇಕವಾಗಿ ಇವರ ಹಿಂಸೆ ತಾಳಲಾರದೆ 100 ಕೋಟಿ ಮೀಸಲಿಟ್ಟು ಕನಕಪುರಕ್ಕೆ ಒಂದು ಮೆಡಿಕಲ್ ಕಾಲೇಜ್ ಮಂಜೂರು ಮಾಡಿದೆ. ಆಮೇಲೆ ಬಂದ ಬಿಜೆಪಿ ಸರ್ಕಾರದವರು ಅದನ್ನು ಚಿಕ್ಕಬಳ್ಳಾಪುರಕ್ಕೆ ತೆಗೆದುಕೊಂಡು ಹೋದರು. ಈಗ ರಾಮನಗರದಲ್ಲಿ ಮಾಡಬೇಕಾದ ಮೆಡಿಕಲ್ ಕಾಲೇಜನ್ನು ಕನಕಪುರಕ್ಕೆ ತೆಗೆದುಕೊಂಡು ಹೋಗ್ತಾ ಇದ್ದಾರೆ, ಎಲ್ಲೋ ಮೂಲೆಗೆ. ಇದು ಇವರು ರಾಮನಗರಕ್ಕೆ ಕೊಡುತ್ತಿರುವ ಬಳುವಳಿ. ಜನರು ಅರ್ಥ ಮಾಡಿಕೊಳ್ಳಬೇಕು. ಜಿಲ್ಲಾ ಕೇಂದ್ರ ಅಭಿವೃದ್ಧಿ ಆಗೋದು ಅವರಿಗೆ ಇಷ್ಟವಿಲ್ಲ ಎಂದು ಕಿಡಿಕಾರಿದರು.